ಉಪ್ಪಿನಂಗಡಿ: ಕೋರಂ ಕೊರತೆಯಿಂದಾಗಿ ಪೆರ್ನೆ ಗ್ರಾ.ಪಂ.ನ ಸಾಮಾನ್ಯ ಸಭೆ ರದ್ದುಗೊಂಡ ಘಟನೆ ನ.22ರಂದು ನಡೆದಿದೆ.
ಪೂರ್ವ ನಿಗದಿಯಂತೆ ಬುಧವಾರ ಬೆಳಗ್ಗೆ ಗ್ರಾ.ಪಂ. ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ವಿಜಯ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು. ಒಟ್ಟು 15 ಸದಸ್ಯ ಬಲ ಹೊಂದಿರುವ ಪೆರ್ನೆ ಗ್ರಾ.ಪಂ.ನಲ್ಲಿ ಕಾಂಗ್ರೆಸ್ ಬೆಂಬಲಿತ ಎಂಟು ಸದಸ್ಯರು ಇದ್ದು, ಇವರಲ್ಲಿ ಮಹಿಳಾ ಸದಸ್ಯೆಯೋರ್ವರು ಅನಾರೋಗ್ಯದ ಕಾರಣ ನೀಡಿ ಸಭೆಗೆ ಗೈರಾಗಿದ್ದರೆ, ಬಿಜೆಪಿ ಬೆಂಬಲಿತ ಏಳು ಸದಸ್ಯರೂ ಕೂಡಾ ಸಭೆಗೆ ಗೈರಾಗಿದ್ದರು. ಇದರಿಂದ ಸಭೆಯಲ್ಲಿ ಕೋರಂ ಕಂಡು ಬರಲಿಲ್ಲ. ಅಧ್ಯಕ್ಷರು ನಿಗದಿತ ಅವಧಿಗಿಂತ ಸುಮಾರು ಒಂದು ಗಂಟೆ ಕಾದರೂ ಸದಸ್ಯರ ಗೈರು ಹಾಜರಿಯಿಂದಾಗಿ ಕೋರಂ ಕಂಡು ಬರಲಿಲ್ಲ. ಬಳಿಕ ಕೋರಂ ಕೊರತೆಯಿಂದ ಸಭೆ ರದ್ದುಗೊಳಿಸುವುದಾಗಿ ತಿಳಿಸಿದರು.
ಈ ಸಂದರ್ಭ ಗ್ರಾ.ಪಂ.ನ ಪ್ರಭಾರ ಪಿಡಿಒ ಸುನೀಲ್ ಕುಮಾರ್ ಮಾತನಾಡಿ, ಕೋರಂ ಕೊರತೆಯಿಂದಾಗಿ ಇಲ್ಲಿ ಎರಡನೇ ಬಾರಿಗೆ ಸಾಮಾನ್ಯ ಸಭೆ ರದ್ದುಗೊಳಿಸಬೇಕಾದ ಸ್ಥಿತಿ ಬಂದಿದೆ. ನ.28ರಂದು ಮತ್ತೆ ಸಾಮಾನ್ಯ ಸಭೆ ಕರೆದು ಅದಕ್ಕೂ ಕೋರಂ ಕೊರತೆ ಕಂಡು ಬಂದಲ್ಲಿ ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅವರ ಸೂಚನೆಯಂತೆ ನಡೆದುಕೊಳ್ಳಲಾಗುವುದು ಎಂದು ತಿಳಿಸಿದರು.ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ಭಾರತಿ, ಸದಸ್ಯರಾದ ತನಿಯಪ್ಪ ಪೂಜಾರಿ, ಉಮ್ಮರ್ ಫಾರೂಕ್, ರೇವತಿ, ವನಿತಾ, ಸುನಿಲ್ ನೆಲ್ಸಸ್ ಪಿಂಟೋ ಉಪಸ್ಥಿತರಿದ್ದರು.
ಗ್ರಾ.ಪಂ.ನ ನಿಕಟಪೂರ್ವ ಅಧ್ಯಕ್ಷ, ಕಾಂಗ್ರೆಸ್ ಬೆಂಬಲಿತ ಸದಸ್ಯ ಸುನಿಲ್ ನೆಲಸ್ಸ್ ಪಿಂಟೊ ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ಓರ್ವ ಮಹಿಳಾ ಸದಸ್ಯರು ವಿದೇಶಕ್ಕೆ ತೆರಳಿದ್ದಾರೆ. ಇದನ್ನೇ ಅಸ್ತ್ರವಾಗಿಸಿಕೊಂಡ ಬಿಜೆಪಿ ಬೆಂಬಲಿತ ಸದಸ್ಯರು ಸಭೆಗೆ ಗೈರು ಹಾಜರಾಗಿರುವುದರಿಂದ ಕೋರಂ ಕೊರತೆಯ ಸಮಸ್ಯೆ ಎದುರಾಗಿದೆ ಎಂದು ತಿಳಿಸಿದರು.
ಸಭೆಗೆ ಗೈರು ಹಾಜರಾಗಿದ್ದ ಬಿಜೆಪಿ ಬೆಂಬಲಿತ ಸದಸ್ಯ ನವೀನ್ ಪದಬರಿ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿ, ಇಲ್ಲಿ ಸಾಮಾನ್ಯ ಸಭೆಗಳಲ್ಲಿ ನಾವುಗಳು ಅಭಿಪ್ರಾಯಗಳ ಮಂಡಿಸಿದರೂ, ಅವುಗಳನ್ನು ನಿರ್ಣಯ ಪುಸ್ತಕಗಳಲ್ಲಿ ದಾಖಲಿಸುತ್ತಿಲ್ಲ. ಇದರಿಂದ ಕೆಲಸ ಕಾರ್ಯಗಳು ಕುಂಠಿತಗೊಳ್ಳುತ್ತಿವೆ. ಅದಕ್ಕಾಗಿ ನಾವು ಸಭೆಗೆ ಗೈರು ಹಾಜರಾಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.