* ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ-ಬೇಡಿಕೆ ಈಡೇರಿಕೆ ಭರವಸೆ
* ಅನಿರ್ಧಿಷ್ಟಾವಧಿ ಪ್ರತಿಭಟನೆ ಹಿಂತೆಗೆತ
* ಪುತ್ತೂರುನಿಂದ 3೦೦, ಕಡಬದಿಂದ 200 ಮಂದಿ ಭಾಗಿ
ಪುತ್ತೂರು: ಕನಿಷ್ಟ ವೇತನ ಜಾರಿ, ಬಜೆಟ್ನಲ್ಲಿ ಘೋಷಿಸಲಾಗಿರುವ ರೂ.1೦೦೦ ಗೌರವಧನ ಏರಿಕೆಯ ಭರವಸೆ, ಗ್ರಾಚ್ಯುಟಿ ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ವತಿಯಿಂದ ಬೆಂಗಳೂರುನಲ್ಲಿ ನಡೆಸಲುದ್ದೇಶಿಸಿದ್ದ ಅನಿರ್ಧಿಷ್ಟಾವಧಿ ಪ್ರತಿಭಟನೆ ನ.23ರಂದು ಆರಂಭಗೊಂಡಿತ್ತು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ರವರು ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ವತಿಯಿಂದ ನ.23ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಕೈಗೊಳ್ಳಲಾಗಿತ್ತು. ಪುತ್ತೂರು ಹಾಗೂ ಕಡಬ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ರವರು ಸಂಘದ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಮುಂದಿನ ಬಜೆಟ್ನಲ್ಲಿ ಗೌರವಧನ ಏರಿಕೆ ಮಾಡುವ ಭರವಸೆ ನೀಡಿದರು. ಕನಿಷ್ಟ ವೇತನ ಜಾರಿಗೆ ಕೇಂದ್ರ ಸರಕಾರಕ್ಕೆ ನಿಯೋಗದೊಂದಿಗೆ ಭೇಟಿ ಮಾಡೋಣ ಎಂಬ ಭರವಸೆ ನೀಡಿದರು. ಅವರ ಭರವಸೆ ಬಳಿಕ ಅನಿರ್ಧಿಷ್ಟಾವಧಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.
ಪುತ್ತೂರು ಕಡಬದಿಂದ 5೦೦ ಮಂದಿ ಭಾಗಿ: ಪುತ್ತೂರು ತಾಲೂಕಿನಿಂದ 3೦೦ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ಕಡಬ ತಾಲೂಕಿನಿಂದ 2೦೦ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪುತ್ತೂರು,ಕಡಬದಲ್ಲೂ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಕಾರ್ಯಕರ್ತೆಯರು, ಸಹಾಯಕಿಯರು ಬೆಂಗಳೂರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.