ಕಂಬಳ ಎನ್ನುವುದು ಪ್ರತಿಷ್ಠಿತ ಕ್ರೀಡೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಅಲ್ಲಿ ನೀಡುವ ಬಹುಮಾನಗಳು ಕೂಡ ಅಷ್ಟೇ ತೂಕದ್ದಾಗಿರುತ್ತವೆ. ವಿಜೇತ ಕೋಣಗಳ ಯಜಮಾನರಿಗೆ ಶಾಲು ಹೊದೆಸಿ ಚಿನ್ನದ ಪದಕ ನೀಡಿ ಗೌರವಿಸುವ ಜೊತೆಗೆ ಜೋಡಿಕೋಣಗಳನ್ನು ಓಡಿಸಿದವರಿಗೂ ಬಹುಮಾನ ನೀಡಲಾಗುತ್ತದೆ. ಅದ್ದೂರಿ ಡೋಲು, ಕೊಂಬು, ಕಹಳೆ, ಕದನಿಗಳ ಮಧ್ಯೆ ಪ್ರೇಕ್ಷಕರ ಕರತಾಡನದೊಡನೆ ವಿಜೇತ ಕೋಣಗಳ ಯಜಮಾನರು ಸಂಭ್ರಮ ಸಡಗರದಿಂದ ಬಹುಮಾನ ಸ್ವೀಕರಿಸುತ್ತಾರೆ. ಹೀಗೆ ಪ್ರತಿಯೊಂದರಲ್ಲೂ ಶ್ರೀಮಂತಿಕೆ ಹೊಂದಿರುವ ಕಂಬಳ ಬೆಂಗಳೂರಿನಲ್ಲಂತೂ ಇನ್ನೂ ವೈಭವೋಪೇತವಾಗಿ ನಡೆಯುತ್ತಿದೆ. ಹೀಗಾಗಿ ಬೆಂಗಳೂರು ಕಂಬಳದಲ್ಲಿ ಸಡಗರಕ್ಕೆ ತಕ್ಕಂತೆಯೇ ಬಹುಮಾನಗಳು ಕೂಡ ವಿಜೇತ ಕೋಣಗಳ ಯಜಮಾನರಿಗೆ ಲಭಿಸಲಿದೆ.
ಕನೆಹಲಗೆ ವಿಭಾಗ: ಬೆಂಗಳೂರು ಕಂಬಳ ಕೂಟದಲ್ಲಿ ಕನೆಹಲಗೆ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 7.5 (ಏಳುವರೆ) ಕೋಲು ನಿಶಾನೆಗೆ ನೀರು ಹಾಯಿಸಿದವರಿಗೆ ಪ್ರಥಮ ಬಹುಮಾನವಾಗಿ 2 ಪವನ್ (16 ಗ್ರಾಂ) ಚಿನ್ನ ಮತ್ತು 1 ಲಕ್ಷ ರೂ ನಗದು ಬಹುಮಾನ ದೊರಕಲಿದೆ. ದ್ವಿತೀಯ ಬಹುಮಾನವಾಗಿ 6.5 (ಆರುವರೆ ಕೋಲು) ನಿಶಾನೆಗೆ ನೀರು ಹಾಯಿಸಿದವರಿಗೆ 1 ಪವನ್ (8 ಗ್ರಾಂ) ಚಿನ್ನ ಮತ್ತು 50 ಸಾವಿರ ನಗದು ಬಹುಮಾನ ಸಿಗಲಿದೆ.
ಅಡ್ಡಹಲಗೆ ವಿಭಾಗ: ಅಡ್ಡಹಲಗೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಕೋಣಗಳ ಯಜಮಾನರಿಗೆ ಬಹುಮಾನವಾಗಿ 2 ಪವನ್ (16 ಗ್ರಾಂ) ಚಿನ್ನ ಮತ್ತು 1 ಲಕ್ಷ ರೂ ಬಹುಮಾನ ಇರಲಿದೆ. ದ್ವಿತೀಯ ಬಹುಮಾನವಾಗಿ 1 ಪವನ್ (8 ಗ್ರಾಂ) ಚಿನ್ನ ಮತ್ತು 5೦,೦೦೦ ನಗದು ಬಹುಮಾನ ಸಿಗಲಿದೆ.
ಹಗ್ಗ ಹಿರಿಯ ಮತ್ತು ಕಿರಿಯ ವಿಭಾಗ: ಈ ವಿಭಾಗಗಳಲ್ಲಿ ಪ್ರಥಮ ಬಹುಮಾನವಾಗಿ 1 ಪವನ್ ಚಿನ್ನ ಮತ್ತು 5೦ ಸಾವಿರ ರೂ ನಗದು, ದ್ವಿತೀಯ ಬಹುಮಾನವಾಗಿ ಅರ್ಧ ಪವನ್ (4 ಗ್ರಾಂ) ಚಿನ್ನ ಮತ್ತು 25 ಸಾವಿರ ರೂ. ನಗದು ಬಹುಮಾನವಿದೆ. ಜೊತೆಗೆ ಈ ವಿಭಾಗದಲ್ಲಿ ತೃತೀಯ ಮತ್ತು ಚತುರ್ಥ ಬಹುಮಾನವಿದ್ದು ತೃತೀಯ ಮತ್ತು ಚತುರ್ಥ ಬಹುಮಾನವಾಗಿ ಕಾಲು ಪವನ್ (2 ಗ್ರಾಂ) ಚಿನ್ನ ಹಾಗೂ 20 ಸಾವಿರ ರೂ. ನಗದು ಬಹುಮಾನ ನಿಗದಿಪಡಿಸಲಾಗಿದೆ.
ನೇಗಿಲು ಹಿರಿಯ ಮತ್ತು ಕಿರಿಯ ವಿಭಾಗ: ನೇಗಿಲು ಹಿರಿಯ ಮತ್ತು ಕಿರಿಯ ವಿಭಾಗಗಳಲ್ಲಿ ಕ್ರಮವಾಗಿ ಪ್ರಥಮ ಬಹುಮಾನ 2 ಪವನ್(16 ಗ್ರಾಂ) ಚಿನ್ನ ಮತ್ತು 1 ಲಕ್ಷ ರೂ. ನಗದು ಬಹುಮಾನ ಇರಲಿದೆ. ದ್ವಿತೀಯ ಬಹುಮಾನವಾಗಿ 1 ಪವನ್ (8 ಗ್ರಾಂ) ಚಿನ್ನ ಮತ್ತು 5೦,೦೦೦ ರೂ. ನಗದು ಇರಲಿದೆ. ಜೊತೆಗೆ ಈ ವಿಭಾಗದಲ್ಲಿ ತೃತೀಯ ಮತ್ತು ಚತುರ್ಥ ಬಹುಮಾನವಿದ್ದು ತೃತೀಯ ಮತ್ತು ಚತುರ್ಥ ಬಹುಮಾನವಾಗಿ ಅರ್ಧ ಪವನ್ (4 ಗ್ರಾಂ) ಚಿನ್ನ ಮತ್ತು 25 ಸಾವಿರ ರೂ. ನಗದು ಬಹುಮಾನ ಘೋಷಿಸಲಾಗಿದೆ. ಅಲ್ಲದೆ, ಪ್ರತೀ ವಿಭಾಗದಲ್ಲಿ ಗೆದ್ದ ಕೋಣಗಳ ಜೊತೆ ಕೋಣಗಳನ್ನು ಓಡಿಸಿದವರಿಗೂ ಬಹುಮಾನ ದೊರೆಯಲಿದೆ. ವಿಜೇತ ಕೋಣಗಳನ್ನು ಓಡಿಸಿದ ಓಟಗಾರರಿಗಾಗಿ ವಿಶೇಷ ಚಿನ್ನದ ಪದಕದ ಗೌರವವಿದೆ. ಈ ಮೂಲಕ ಅವಿಸ್ಮರಣೀಯವಾಗಿ ಬೆಂಗಳೂರು ಕಂಬಳ ಸಮಿತಿಯು ಕಂಬಳವನ್ನು ಆಯೋಜಿಸಿದೆ.