ಈಶ್ವರಮಂಗಲದಲ್ಲಿ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ಧೇಶ ಸಹಕಾರ ಸಂಘದ ನೂತನ ಶಾಖೆ ಉದ್ಘಾಟನೆ

0

ಸಮುದಾಯದ ಅಭಿವೃದ್ಧಿಗೆ ಸಹಕಾರಿ ಸಂಘಗಳು ಶಕ್ತಿ ನೀಡುತ್ತಿದೆ-ರಮಾನಾಥ ರೈ

ಪುತ್ತೂರು: ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ಧೇಶ ಸಹಕಾರ ಸಂಘದ ನೂತನ ಶಾಖೆ ಈಶ್ವರಮಂಗಲ ಹಿರಾ ಟವರ್‌ನ ನೆಲ ಮಹಡಿಯಲ್ಲಿ ನ.27ರಂದು ಉದ್ಘಾಟನೆಗೊಂಡಿತು. ನೂತನ ಶಾಖೆಯನ್ನು ಉದ್ಘಾಟಿಸಿದ ಮಾಜಿ ಸಚಿವ ರಮಾನಾಥ ರೈ ಮಾತನಾಡಿ ಸಮುದಾಯದ ಅಭಿವೃದ್ಧಿಗೆ ಸಹಕಾರಿ ಸಂಘಗಳು ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದು ಇಲ್ಲಿ ಉದ್ಘಾಟನೆಗೊಂಡ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದ್ಧೋದ್ಧೇಶ ಸಹಕಾರ ಸಂಘದ ನೂತನ ಶಾಖೆಯು ಬಲಿಷ್ಠ ಸಂಘವಾಗಿ ಹೊರ ಹೊಮ್ಮಲಿ, ಜಿಲ್ಲೆಯ ಎಲ್ಲಾ ಭಾಗದಲ್ಲಿ ಇದರ ಶಾಖೆ ತೆರೆಯುವಂತಾಗಲಿ ಎಂದು ಅವರು ಹೇಳಿದರು. ನಾವೆಲ್ಲಾ ಜಾತಿ, ಧರ್ಮ, ಮತಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಇರುವ ಮೂಲಕ ನಿಜವಾದ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಆಗಬೇಕು ಎಂದು ಅವರು ಹೇಳಿದರು.

ದ.ಕ, ಉಡುಪಿ ಜಿಲ್ಲೆಯಲ್ಲಿ ಶಾಖೆ ಆರಂಭವಾಗಲಿ-ಬಾಲ್ಯೊಟ್ಟು
ಮೊಬೈಲ್ ಬ್ಯಾಂಕಿಂಗ್‌ನ್ನು ಉದ್ಘಾಟಿಸಿದ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದ್ಧೋದ್ಧೇಶ ಸಹಕಾರ ಸಂಘದ ಸಾಧನೆಗೆ ಜಿಲ್ಲಾ ಕೇಂದ್ರ ಸಹಕಾರಿ ಸಂಘದಿಂದ ಮೂರು ಬಾರಿ ಪ್ರಶಸ್ತಿ ದೊರಕಿದ್ದು ಮುಂದಕ್ಕೆ ಇದರ ಶಾಖೆಗಳು ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಆರಂಭವಾಗುವಂತಾಗಲಿ ಎಂದು ಹಾರೈಸಿದರು.

ಉತ್ತಮ ವ್ಯವಹಾರದೊಂದಿಗೆ ಯಶಸ್ಸು ಕಾಣಲಿ-ಎಸ್.ಬಿ ಜಯರಾಮ ರೈ
ಛಾಪಾ ಕಾಗದ ಸ್ವೀಕರಿಸಿದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು ಇದರ ನಿರ್ದೇಶಕರಾದ ಎಸ್.ಬಿ ಜಯರಾಮ ರೈ ಮಾತನಾಡಿ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದ್ಧೋದ್ಧೇಶ ಸಹಕಾರ ಸಂಘವು ಉತ್ತಮ ವ್ಯವಹಾರದ ಮೂಲಕ ಜನರಿಗೆ ಪ್ರಯೋಜನಕಾರಿಯಾಗಲಿ, ಸಂಘ ಉತ್ತಮ ಲಾಭದೊಂದಿಗೆ ಮುನ್ನಡೆಯಲಿ ಎಂದು ಶುಭ ಹಾರೈಸಿದರು.

ವಿಟ್ಲದಲ್ಲಿ ಶಾಖೆ ತೆರೆಯಲಿ-ಎಂ.ಎಸ್ ಮಹಮ್ಮದ್
ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಜಿ.ಪಂ ಮಾಜಿ ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್ ಮಾತನಾಡಿ ಸಹಕಾರಿ ಸಂಘಗಳು ಜನ ಸಾಮಾನ್ಯರಿಗೆ ಶಕ್ತಿ ಕೊಡುವ ಕೆಲಸ ಮಾಡುತ್ತಿದ್ದು ಬಹಳ ಪ್ರಯೋಜನಕಾರಿಯಾಗಿದೆ. ಇಲ್ಲಿ ಉದ್ಘಾಟನೆಗೊಂಡ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದ್ಧೋದ್ಧೇಶ ಸಹಕಾರ ಸಂಘ ಮುಂದಕ್ಕೆ ವಿಟ್ಲದಲ್ಲಿ ತನ್ನ ಶಾಖೆ ತೆರೆಯುವುದೇ ಆದಲ್ಲಿ ಅದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರಗಳನ್ನು ನೀಡಲು ನಾನು ನೂರಕ್ಕೆ ನೂರು ಬದ್ದನಿದ್ದೇನೆ ಎಂದು ಅವರು ಭರವಸೆ ನೀಡಿದರು.

ಅಲ್ಪಸಂಖ್ಯಾತರು ಇದೇ ಸಂಘದಲ್ಲಿ ವ್ಯವಹಾರ ಮಾಡಲು ಪ್ರಯತ್ನಿಸಿ-ಹೇಮನಾಥ ಶೆಟ್ಟಿ
ಛಾಪಾ ಕಾಗದವನ್ನು ಬಿಡುಗಡೆಗೊಳಿಸಿದ ಪುತ್ತೂರು ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಪುತ್ತೂರು ತಾಲೂಕಿನ ಪ್ರಪ್ರಥಮ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದ್ಧೋದ್ಧೇಶ ಸಹಕಾರ ಸಂಘ ಈಶ್ವರಮಂಗಲದಲ್ಲಿ ಉದ್ಘಾಟನೆಗೊಂಡಿರುವುದು ಅತೀವ ಖುಷಿ ನೀಡಿದ್ದು ಇದರ ಶಾಖೆಗಳು ಮುಂದಿನ ದಿನಗಳಲ್ಲಿ ಎಲ್ಲ ತಾಲೂಕುಗಳಲ್ಲೂ ಆಗಬೇಕು ಎಂದು ಹೇಳಿದರು. ಅಲ್ಪಸಂಖ್ಯಾತ ಸಮುದಾಯದವರು ಇತರ ಬ್ಯಾಂಕ್‌ಗಳಲ್ಲಿ ಹೆಚ್ಚಿನ ವ್ಯವಹಾರ ಹೊಂದಿದ್ದು ಮುಂದಕ್ಕೆ ಈ ಸಂಘದಲ್ಲೇ ತಮ್ಮ ಎಲ್ಲ ವ್ಯವಹಾರಗಳನ್ನು ಮಾಡುವ ಮೂಲಕ ತಾವೂ ಸ್ವಾಭಿಮಾನದಿಂದ ಅಭಿವೃದ್ಧಿ ಹೊಂದುವ ಜೊತೆಗೆ ಸಂಘವನ್ನೂ ಶಕ್ತಿಪಡಿಸುವ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಸಂಘ ಬಲಿಷ್ಠಗೊಳ್ಳಬೇಕು-ಮಾಧವ ಗೌಡ
ಪ್ರಾ.ಕೃ.ಪ.ಸಹಕಾರ ಸಂಘ ಪಂಬೆತ್ತಾಡಿ ಇದರ ಅಧ್ಯಕ್ಷ ಜಾಕೆ ಮಾಧವ ಗೌಡ ಮಾತನಾಡಿ ಅಲ್ಪ ಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ಸ್ಥಾಪನೆಗೊಂಡಿರುವ ಈ ಸಹಕಾರ ಸಂಘಕ್ಕೆ ಎಲ್ಲರೂ ಸಹಕಾರ ನೀಡುವ ಮೂಲಕ ಇದನ್ನು ಬಲಿಷ್ಠಗೊಳಿಸಬೇಕು ಎಂದು ಹೇಳಿದರು.

ಎಲ್ಲರ ಪರಿಶ್ರಮದಿಂದ ಯಶಸ್ವಿಯಾಗಿ ಮುನ್ನಡೆಯುತ್ತಿದೆ-ಟಿ.ಎಂ ಶಹೀದ್
ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಮಾತನಾಡಿ ನಮ್ಮ ತಂಡದ ಪ್ರತಿಯೊಬ್ಬರ ಪರಿಶ್ರಮದ ಫಲವಾಗಿ ಈ ಸಹಕಾರ ಸಂಘ ಇಂದು ಉತ್ತಮ ಹಂತದಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಮುಂದಕ್ಕೆ ಪುತ್ತೂರು, ಕಡಬ, ಬಂಟ್ವಾಳ, ಉಳ್ಳಾಲ, ಕೊಡಗು ಸೇರಿದಂತೆ ವಿವಿಧ ಕಡೆಗಳಲ್ಲಿ ಇದರ ಶಾಖೆಗಳು ಪ್ರಾರಂಭಗೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ನಮಗೆಲ್ಲಾ ಹೆಮ್ಮೆಯ ವಿಚಾರ-ಮಹಮ್ಮದ್ ಬಡಗನ್ನೂರು
ಸಂಘದ ಸಲಹಾ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದ್ಧೋದ್ಧೇಶ ಸಹಕಾರ ಸಂಘ ಈಶ್ವರಮಂಗಲದಲ್ಲಿ ಪ್ರಾರಂಭಗೊಂಡಿರುವುದು ನಮಗೆ ಹೆಮ್ಮೆಯ ವಿಚಾರವಾಗಿದ್ದು ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯುತ್ತಿರುವ ಈ ಸಂಘ ಭವಿಷ್ಯದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಹಾರೈಸಿದರು.

ಅಧ್ಯಕ್ಷರ ಮಾತು…
ಸಭಾಧ್ಯಕ್ಷತೆ ವಹಿಸಿದ್ದ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದ್ಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷರಾದ ಐ.ಕೆ ಮಹಮ್ಮದ್ ಇಕ್ಬಾಲ್ ಎಲಿಮಲೆಯ ಮಾತನಾಡಿ ಸುಳ್ಯದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದ್ಧೋದ್ಧೇಶ ಸಂಘವು 1997ರಲ್ಲಿ ಪ್ರಾರಂಭಗೊಂಡಿದ್ದು ಸುಧೀರ್ಘ 24 ವರ್ಷಗಳನ್ನು ಪೂರೈಸಿ ಇದೀಗ 25ನೇ ವರ್ಷದಲ್ಲಿದ್ದು ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದೆ ಎಂದು ಹೇಳಿದರು. ಇದೀಗ ಈಶ್ವರಮಂಗಲದಲ್ಲಿ ಉದ್ಘಾಟನೆಗೊಂಡ ಸಂಘದ ಶಾಖೆಯ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಅವರು ವಿನಂತಿ ಮಾಡಿದರು.

ಸನ್ಮಾನ:
ಮಾಜಿ ಸಚಿವ ರಮಾನಾಥ ರೈ, ಸಂಘದ ಸಲಹಾ ಸಮಿತಿ ಸದಸ್ಯರುಗಳಾದ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಅಬ್ದುಲ್ ಖಾದರ್ ಹಾಜಿ ಹಿರಾ, ಮಹಮ್ಮದ್ ಬಡಗನ್ನೂರು, ಅಝೀಝ್ ಸಿ.ಎಚ್ ಹಾಗೂ ಅಶ್ರಫ್ ಕೊಟ್ಯಾಡಿ ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಶಾಖೆಯ ಕೊಠಡಿ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಲಕ್ಷ್ಮಣ ಆಚಾರ್ಯ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಬಾಲಕೃಷ್ಣ ರೈ ಪೊರ್ದಾಳ್‌ರಿಗೆ ಗೌರವಾರ್ಪಣೆ:
14ರ ವಯೋಮಾನದ ಬಾಲಕಿಯರ ಕರ್ನಾಟಕ ಕಬಡ್ಡಿ ತಂಡದ ತರಬೇತುದಾರರಾಗಿ ಆಯ್ಕೆಗೊಂಡಿರುವ ಪುತ್ತೂರು ಲಿಟ್ಲ್ ಫ್ಲವರ್ ಶಾಲೆಯ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ವೇದಿಕೆಯಲ್ಲಿ ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷೆ ಫೌಝಿಯಾ, ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಿಷ್ಣು ಭಟ್ ಬಿ, ದ.ಕ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷ ಕೆ.ಎಂ ಮುಸ್ತಫಾ ಜನತಾ, ಬುಶ್ರಾ ಎಜ್ಯುಕೇಶನ್ ಟ್ರಸ್ಟ್‌ನ ಸಂಸ್ಥಾಪಕ ಅಬ್ದುಲ್ ಅಝೀಝ್ ಬುಶ್ರಾ, ಈಶ್ವರಮಂಗಲ ಹಿರಾ ಟವರ್ ಮಾಲಕ ಅಬ್ದುಲ್ ಖಾದರ್ ಹಾಜಿ, ಈ ಸಂಘದ ಸ್ಥಾಪಕಾಧ್ಯಕ್ಷ ಎಸ್.ಎಂ ಬಾಪು ಸಾಹೇಬ್ ಹಾಗೂ ಸಂಘದ ನಿದೇರ್ಶಕರು ಉಪಸ್ಥಿತರಿದ್ದರು.

ಸಭೆಯಲ್ಲಿ ಪ್ರಮುಖರಾದ ಮೀರಾ ಸಾಹೇಬ್ ಕಡಬ, ಸರಸ್ವತಿ ಕಾಮತ್, ಜಲೀಲ್ ಬೈತಡ್ಕ, ಗಫೂರ್ ಕಲ್ಮಡ್ಕ, ಇಬ್ರಾಹಿಂ ಕೆ, ರಿಯಾಝ್ ಕಟ್ಟೆಕಾರ್, ಉಮ್ಮರ್ ಕೆ.ಎಸ್, ರಮೇಶ್ ರೈ ಸಾಂತ್ಯ, ಅಬುಲ್ಲ ಮೆಣಸಿನಕಾನ, ಅಬ್ದುಲ್ ರಹಿಮಾನ್ ಕಾವು, ಇಬ್ರಾಹಿಂ ಅಲೆಕ್ಕಾಡಿ, ಜಾನಿ, ಇಬ್ರಾಹಿಂ ಎ.ಕೆ, ಹನೀಫ್ ಮಧುರಾ, ಹಕೀಂ ಮಾಚಾರ್ ಮತ್ತಿತರ ಹಲವರು ಉಪಸ್ಥಿತರಿದ್ದರು.

ಸಂಘದ ನಿರ್ದೇಶಕರಾದ ಕೆ.ಎಂ ಮುಹಿಯುದ್ದೀನ್ ಹಾಜಿ ಫ್ಯಾನ್ಸಿ, ಎಸ್ ಸಂಶುದ್ದೀನ್ ಅರಂಬೂರು, ಕೆ.ಎಂ ಇಸ್ಮಾಯಿಲ್ ಪಡ್ಪಿನಂಗಡಿ, ಹಸೈನಾರ್ ಎ.ಕೆ ಕಲ್ಲುಗುಂಡಿ, ಉಮ್ಮರ್ ಶಾಫಿ ಕುತ್ತಮೊಟ್ಟೆ, ಜಾರ್ಜ್ ಡಿಸೋಜಾ ಕನಿಕರಪಳ್ಳ, ಆಮಿನಾ ಎಸ್ ಜಯನಗರ, ಜೂಲಿಯಾ ಕ್ರಾಸ್ತ ಬೀರಮಂಗಲ ಹಾಗೂ ಸಂಘದ ಸುಳ್ಯ ಪ್ರಧಾನ ಕಚೇರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಜ್ವಲ್ ನಾಯಕ್ ಐ, ಈಶ್ವರಮಂಗಲ ಶಾಖೆಯ ಮೆನೇಜರ್ ವಿನೋದ್ ಮತ್ತು ಸಿಬ್ಬಂದಿಗಳು ಸಹಕರಿಸಿದರು.ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here