ಕೇಶವ ಎ ಅವರು ಎಲ್ಲರಿಗೂ ಸ್ಪೂರ್ತಿ – ಗಿರೀಶ್‌ನಂದನ್
ಕೃಷಿಕರಿಗೆ ಅನುಕೂಲವಾಗುವಂತಹ ಸಂಸ್ಥೆ – ರಾಜಾರಾಮ್
ಕೃಷಿಗೆ ಸಂಬಂಧಿತ ಕೈಗಾರಿಕೆಗಳಿಗೆ ಮಾತ್ರ ಅವಕಾಶ ಕೊಡಿ – ಶಿವಶಂಕರ್ ಬೋನಂತಾಯ
ಕೃಷಿಕನ ಸಮಸ್ಯೆಗೆ ಪರಿಹಾರ ನೀಡುವ ವಿಷನ್ ಎಸ್‌ಆರ್‌ಕೆ – ಸಾದಿಕ್ ಕುಂಬ್ರ
ಕೇಶವರು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ವ್ಯಕ್ತಿತ್ವ – ಪ್ರಕಾಶ್ ಪೈ
ಪುತ್ತೂರು: ಎಸ್.ಆರ್.ಕೆ.ಲ್ಯಾಡರ‍್ಸ್ ಇದರ ಬೆಳ್ಳಿಹಬ್ಬದ ಸಂಭ್ರಮದ ಅಂಗವಾಗಿ ವರ್ಷವಿಡಿ ಪ್ರತಿ ತಿಂಗಳು ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಮತ್ತು ಲೋಗೋ ಅನಾವರಣ ಸಮಾರಂಭ ನ.28ರಂದು ಮುಕ್ರಂಪಾಡಿಯಲ್ಲಿರುವ ಎಸ್.ಆರ್.ಕೆ.ಲ್ಯಾಡರ‍್ಸ್ ಆವರಣದಲ್ಲಿ ನಡೆಯಿತು.
ಕೇಶವ ಎ ಅವರು ಎಲ್ಲರಿಗೂ ಸ್ಪೂರ್ತಿ ಸಹಾಯಕ ಕಮೀಷನರ್ ಗಿರೀಶ್‌ನಂದನ್ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಿ ಅಲ್ಯೂಮಿನಿಯಂ ಏಣಿ ಮೇಲಿನ ಬ್ಯಾನರ್ ಅನಾವರಣ ಮೂಲಕ ಎಸ್ ಆರ್ ಕೆ ಬೆಳ್ಳಿ ಹಬ್ಬದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿ ಎಸ್‌ಆರ್‌ಕೆ ಲ್ಯಾಡರ‍್ಸ್ ಇವತ್ತು ದೊಡ್ಡ ಸಂಸ್ಥೆಯಾಗಿ ಮೂಡಿ ಬಂದಿದೆ. ಬಹಳಷ್ಟು ಜನರಿಗೆ ಉದ್ಯೋಗ ನೀಡಿದ ಸಂಸ್ಥೆಯಾಗಿರುವ ಇದರ ಮಾಲಕ ಕೇಶವ ಎ ಅವರ ಸಾಧನೆ ಎಲ್ಲರಿಗೂ ಸ್ಪೂರ್ತಿ. ಇವತ್ತು ಪುತ್ತೂರಿನಲ್ಲಿ ಕೈಗಾರಿಕೆ ಸಂಸ್ಥೆಗಳು ಕಡಿಮೆ ಇವೆ. ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೆ ಸಂಸ್ಥೆ ಆರಂಭಗೊಳ್ಳಬೇಕೆಂದರು.
ಕೃಷಿಕರಿಗೆ ಅನುಕೂಲವಾಗುವಂತಹ ಸಂಸ್ಥೆ:
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜಾರಾಮ್ ಅವರು ಲೋಗೋ ಅನಾವರಣ ಮಾಡಿ ಮಾತನಾಡಿ ಎಸ್.ಆರ್.ಕೆ. ಲ್ಯಾಡರ‍್ಸ್ ಕೃಷಿಕರಿಗೆ ಅನುಕೂಲವಾಗುಂತಹ ಸಂಸ್ಥೆಯಾಗಿ ಮೂಡಿ ಬಂದಿದೆ. ಇವತ್ತು ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ರಕ್ತದಾನ ಉತ್ತಮ ಕಾರ್ಯಕ್ರಮ ಎಂದರು.
ಕೃಷಿಗೆ ಸಂಬಂಧಿತ ಕೈಗಾರಿಕೆಗಳಿಗೆ ಮಾತ್ರ ಅವಕಾಶ ಕೊಡಿ:
ಪುತ್ತೂರು ಕೈಗಾರಿಕಾ ಸಂಘದ ಅಧ್ಯಕ್ಷ ಶಿವಶಂಕರ್ ಬೋನಂತಾಯ ಅವರು ಎಸ್‌ಆರ್‌ಕೆ ಲ್ಯಾಡರ‍್ಸ್‌ನ ಬೆಳ್ಳಿ ಹಬ್ಬದ ಬೆಳ್ಳಿಯ ಲೋಗೊ ಬಿಡುಗಡೆ ಮಾಡಿ ಮಾತನಾಡಿ ರಾಜಕೀಯವರ ಇಚ್ಚಾಶಕ್ತಿಯ ಕೊರತೆಯಿಂದಾಗಿ ಪುತ್ತೂರಿನಲ್ಲಿ ಕೈಗಾರಿಕೆ ಸಂಸ್ಥೆಗಳು ಹಿಂದೆ ಬೀಳಲು ಕಾರಣವಾಗಿದೆ. ಕೌಡಿಚ್ಚಾರಿನಲ್ಲಿ ಸುಮಾರು 19 ಎಕ್ರೆಯಲ್ಲಿ 5 ಎಕ್ರೆ ಕೈಗಾರಿಕೆಗೆ ವಲಯಕ್ಕೆ ಮೀಸಲಿರಿಸಲಾಗಿದೆ. ಅದನ್ನು ಆದಷ್ಟು ಬೇಗ ಕೈಗಾರಿಕೆ ಇಲಾಖೆಯಿಂದ ಹಣ ಪಾವತಿಸಿ ಹಸ್ತಾಂತರಿಸಬೇಕಾಗಿದೆ. ಇದರ ಜೊತೆಗೆ ಉಳಿದ ಜಾಗವನ್ನೂ ಕೂಡಾ ಕೈಗಾರಿಕೆ ವಲಯಕ್ಕೆ ಹಸ್ತಾಂತರಿಸುವಂತೆ ಸಹಾಯಕ ಕಮೀಷನರ್‌ಗೆ ಮನವಿ ಮಾಡಿದ ಅವರು ಪುತ್ತೂರಿಗೆ ದೊಡ್ಡ ಕೈಗಾರಿಕೆಗಳಿಗೆ ಅವಕಾಶ ಕೊಡಬೇಡಿ. ನಾವು ಅಪೇಕ್ಷೆ ಪಡುವಂತಹದ್ದು ಎಸ್.ಆರ್.ಕೆ.ಯಂತಹ ಕೃಷಿಗೆ ಸಂಬಂಧಿಸಿದ ಕೈಗಾರಿಕೆಗಳನ್ನು. ಯಾಕೆಂದರೆ ದೊಡ್ಡ ಕೈಗಾರಿಕೆಗಳಿಗೆ ಪರಿಸರ ಮಾಲಿನ್ಯವಾಗುವ ಸಾಧ್ಯತೆ ಇದೆ ಎಂದರು.
ಕೃಷಿಕನ ಸಮಸ್ಯೆಗೆ ಪರಿಹಾರ ನೀಡುವ ವಿಷನ್ ಎಸ್‌ಆರ್‌ಕೆ:
ರೋಟರಿಕ್ಲಬ್ ಅಧ್ಯಕ್ಷ ಜೈರಾಜ್ ಭಂಡಾರಿ, ಆಕರ್ಷನ್ ಇಂಡಸ್ಟ್ರೀಸ್‌ನ ಮಾಲಕ ಸಾದಿಕ್ ಕುಂಬ್ರ ಅವರು ಮಾತನಾಡಿ ಬಹುತೇಕ ಕೈಗಾರಿಕೆ ಸಂಸ್ಥೆಯಲ್ಲಿ ಒಂದು ಉತ್ಪನ್ನವನ್ನು ಕೊನೆಯ ತನಕ ಉತ್ಪಾದಿಸುತ್ತಾರೆ. ಆದರೆ ಕೃಷಿಕನಿಗೆ ಏನು ಬೇಕು. ಅವನ ಸಮಸ್ಯೆಗೆ ಆಯಾ ಸಂದರ್ಭದಲ್ಲಿ ಪರಿಹಾರ ನೀಡುವ ಉತ್ಪನ್ನವನ್ನು ಎಸ್.ಆರ್.ಕೆ.ಯ ಕೇಶವ ಅವರು ಕಂಡು ಕೊಂಡಿದ್ದಾರೆ. ಹಾಗಾಗಿ ಅವರು ಕೃಷಿಕರ ಸಮಸ್ಯೆಗೆ ಪರಿಹಾರ ನೀಡುವ ವಿಷನ್ ಹೊಂದಿದ್ದಾರೆ ಎಂದರು.
ಕೇಶವರು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ವ್ಯಕ್ತಿತ್ವ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಮಹಾಲಿಂಗೇಶ್ವರ ಐಟಿಐಯ ಪ್ರಾಂಶುಪಾಲ ಪ್ರಕಾಶ್ ಪೈ ಅವರು ಮಾತನಾಡಿ ಕೇಶವ ಅವರು ಸ್ವತಃ ಕೃಷಿಕನಾಗಿ ಕೃಷಿಕರ ಸಮಸ್ಯೆಗೆ ಪರಿಹಾರ ಕಂಡು ಈ ಉದ್ಯಮದಲ್ಲಿ ಯಶಸ್ಸು ಕಂಡಿದ್ದಾರೆ. ಅವರ ಕ್ರೀಯಾಶೀಲ ವ್ಯಕ್ತಿತ್ವ, ಸಮಾಜಕ್ಕೆ ಒಳಿತು ನೀಡಿದೆ. ಕಳೆದ 2 ವರ್ಷಗಳಿಂದ ಅವರು ನಮ್ಮ ಸಂಸ್ಥೆಯ ಒಡನಾಡಿಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಅತ್ಯಂತ ಪ್ರೇರಣೆ ಕೊಡುವ ವ್ಯಕ್ತಿತ್ವ ಅವರದ್ದು ಎಂದರು. ರೋಟರಿ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್ ಅವರು ರಕ್ತದಾನದ ಕುರಿತು ಮಾಹಿತಿ ನೀಡಿದರು. ಶ್ಯಾಮ್ ಕಿರಣ್ ಪೆಲತಿಂಜ ಪ್ರಾರ್ಥಿಸಿದರು. ಎಸ್ ಆರ್ ಕೆ ಲ್ಯಾಡರ‍್ಸ್‌ನ ಮಾಲಕ ಕೇಶವ ಎ ಅವರು ಸ್ವಾಗತಿಸಿದರು. ರಕ್ಷಿತ್ ಆಚಾರ್ಯ ವಂದಿಸಿದರು. ನ್ಯೂಸ್ ಪುತ್ತೂರಿನ ವರದಿಗಾರ ಗಣೇಶ್ ಎನ್ ಕಲ್ಲರ್ಪೆ ಕಾರ್ಯಕ್ರಮ ನಿರೂಪಿಸಿದರು. ಎಸ್‌ಆರ್‌ಕೆ ಲ್ಯಾಡರ‍್ಸ್‌ನ ಸಿಬ್ಬಂದಿಗಳು ಅತಿಥಿಗಳನ್ನು ಗೌರವಿಸಿದರು. ಸಭಾ ಕಾರ್ಯಕ್ರಮದ ಬಳಿಕ ಬೆಳ್ಳಿ ಹಬ್ಬದ ಸಂಭ್ರಮದ ಸಲುವಾಗಿ ವರ್ಷಪೂರ್ತಿ ನಡೆಯುವ ಕಾರ್ಯಕ್ರಮದ ಒಂದು ಭಾಗದ ರಕ್ತದಾನ ಶಿಬಿರ ನಡೆಯಿತು. ಎಸ್‌ಆರ್‌ಕೆ ಲ್ಯಾಡರ‍್ಸ್‌ನ ಮಾಲಕ ಕೇಶವ ಎ ಅವರ ಪತ್ನಿ ಮಾಲತಿ ಕೆ.ಡಿ, ನ್ಯಾಯವಾದಿ ಚಿದಾನಂದ ಬೈಲಾಡಿ, ರೋಟರಿ ಕ್ಲಬ್ ಕಾರ್ಯದರ್ಶಿ ಸುಜಿತ್ ರೈ, ಪ್ರವೀಣ್ ಕುಂಟ್ಯಾನ, ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಪ್ರಮೋದ್ ಕುಮಾರ್, ಮಹಾಲಿಂಗೇಶ್ವರ ಐಟಿಐ ತರಬೇತು ಶಿಕ್ಷಕ ನಾರಾಯಣ, ವಸಂತ ವೀರಮಂಗಲ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಶ್ರೀಲತಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.