ಯಕ್ಷಾಂಗಣ ತಾಳಮದ್ದಳೆ ಸಪ್ತಾಹ ಸಮಾರೋಪ – ಪ್ರಶಸ್ತಿ ಪ್ರದಾನ

0

‘ಯಕ್ಷಗಾನ ಬೆಳೆದಿರುವುದು ನೈಜ ಕಲಾಭಿಮಾನಿಗಳಿಂದ’: ಕೃಷ್ಣ ಜೆ. ಪಾಲೆಮಾರ್

ಪುತ್ತೂರು: ‘ಕನ್ನಡ ಕರಾವಳಿಯ ಸಮಗ್ರ ಕಲೆಯಾದ ಯಕ್ಷಗಾನದಲ್ಲಿ ಮುಂದಿನ ಪೀಳಿಗೆಗೆ ಆಸಕ್ತಿ ಹುಟ್ಟಿಸುವುದು ನಮ್ಮ ಜವಾಬ್ದಾರಿ. ಪರಂಪರಾಗತವಾದ ಜೀವನ ಮೌಲ್ಯಗಳು ಹಾಗೂ ನಮ್ಮ ಸಂಸ್ಕೃತಿಯ ಬೇರುಗಳನ್ನು ಅದು ಸಹಜವಾಗಿ ಬಿಂಬಿಸುತ್ತದೆ. ಯಕ್ಷಗಾನ ಈಗಿನ ಮಟ್ಟಕ್ಕೆ ಬೆಳೆದಿರುವುದು ನೈಜ ಕಲಾಭಿಮಾನಿಗಳಿಂದ’ ಎಂದು ಮಾಜಿ ಸಚಿವ ಹಾಗೂ ಲ್ಯಾಂಡ್ ಲಿಂಕ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಜೆ.ಕೃಷ್ಣ ಪಾಲೆಮಾರ್ ಹೇಳಿದರು.

ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವವಿದ್ಯಾನಿಲಯ ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದಲ್ಲಿ ನ.19 ರಿಂದ ನಗರದ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2013’ ಹನ್ನೊಂದನೇ ವರ್ಷದ ನುಡಿ ಹಬ್ಬ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಅತಿಥಿಗಳಾಗಿ ಅವರು ಮಾತನಾಡಿದರು.


‘ಯಕ್ಷಗಾನ ತಾಳಮದ್ದಳೆ ಕೇಳುಗರ ಬುದ್ಧಿಯನ್ನು ಹರಿತಗೊಳಿಸುವ ವಿಶಿಷ್ಟ ಕಲಾ ಪ್ರಕಾರ. ಅದನ್ನು ನಮ್ಮ ಕನ್ನಡದ ನುಡಿ ಹಬ್ಬವಾಗಿ ಹತ್ತು ವರ್ಷಗಳಿಂದ ನವೆಂಬರ್ ತಿಂಗಳಿನಲ್ಲೇ ನಡೆಸಿಕೊಂಡು ಬರುತ್ತಿರುವ ಯಕ್ಷಾಂಗಣ ಕನ್ನಡಿಗರೆಲ್ಲರೂ ಅಭಿಮಾನ ಪಡಬೇಕಾದ ಸಂಸ್ಥೆ. ಇದಕ್ಕೆ ಕಲಾಭಿಮಾನಿಗಳಿಂದ ನಿರಂತರ ಪ್ರೋತ್ಸಾಹ ಲಭಿಸಲಿ’ ಎಂದವರು ಹಾರೈಸಿದರು. ಕರುಣಾ ಇನ್ಫ್ರಾ ಪ್ರಾಪರ್ಟೀಸ್ ಇಂಡಿಯಾ ಪ್ರೈ.ಲಿ. ಮಾಲಕ ವಿ.ಕರುಣಾಕರ ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿದರು.

ಯಕ್ಷಾಂಗಣ ಗೌರವ ಪ್ರಶಸ್ತಿ ಪ್ರದಾನ:
ಸಮಾರಂಭದಲ್ಲಿ ಹಿರಿಯ ಅರ್ಥದಾರಿ ಮತ್ತು ಹರಿದಾಸರಾದ ಕೆ.ಮಹಾಬಲ ಶೆಟ್ಟಿ ಕೂಡ್ಲು ಅವರಿಗೆ 2022 – 23 ನೇ ಸಾಲಿನ ‘ಯಕ್ಷಾಂಗಣ ಗೌರವ ಪ್ರಶಸ್ತಿ’ಯನ್ನು ರೂ. 10,000/- ನಗದಿನೊಂದಿಗೆ ನೀಡಲಾಯಿತು. ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಪ್ರಶಸ್ತಿ ಪ್ರದಾನ ಮಾಡಿದರು. ಕ.ಸಾ.ಪ.ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು, ಕ್ಲಾಸಿಕ್ ಸಮೂಹ ಸಂಸ್ಥೆಗಳ ಅಶೋಕ್ ಕುಮಾರ್ ಚೌಟ, ಮುಂಬೈ ಉದ್ಯಮಿ ಜಗದೀಶ ಶೀನಾ ಪೂಜಾರಿ ಇರಾ ಆಚೆ ಬೈಲು ಮುಖ್ಯ ಅತಿಥಿಗಳಾಗಿದ್ದರು.

ಬಿ.ರಾಮಕಿರೋಡಿಯನ್ ಶತಮಾನ ಸ್ಮರಣೆ :
ಇದೇ ಸಂದರ್ಭದಲ್ಲಿ ಹೆಸರಾಂತ ನಾಟಕಕಾರ ತುಳು ನಾಟಕ ಬ್ರಹ್ಮ ದಿ| ಬಿ. ರಾಮ ಕಿರೋಡಿಯನ್ ಅವರ ಶತಮಾನದ ಸಂಸ್ಮರಣೆಯನ್ನು ನೆರವೇರಿಸಲಾಯಿತು. ಪ್ರಸಿದ್ದ ರಂಗ ನಿರ್ದೇಶಕ ತಮ್ಮ ಲಕ್ಷ್ಮಣ ಅವರಿಗೆ ‘ರಾಮ ಕಿರೋಡಿಯನ್ – 100’ ಶತಮಾನ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಹಿರಿಯ ನಾಟಕಕಾರ ಡಾ. ಸಂಜೀವ ದಂಡಕೇರಿ ಸಂಸ್ಮರಣ ಭಾಷಣ ಮಾಡಿ ದಿವಂಗತ ಕಿರೋಡಿಯನ್ ಅವರ ಸಾಧನೆಯನ್ನು ಸ್ಮರಿಸಿದರು.
ರಾಮ ಕಿರೋಡಿಯನ್ ಅವರ ಮಕ್ಕಳಾದ ನರೇಂದ್ರ ಕಿರೋಡಿಯನ್ ಮತ್ತು ಜಯಶ್ರೀ ವೇದಿಕೆಯಲ್ಲಿದ್ದರು. ಮೊಮ್ಮಗಳು ಸ್ವಪ್ನ ಕೋಟ್ಯಾನ್ ನುಡಿ ನಮನ ಸಲ್ಲಿಸಿದರು.

ಇತರ ಕಲೆಗಳಿಗೆ ಗೌರವ :
ಸಮಾರಂಭದ ಅಧ್ಯಕ್ಷತೆ ವಹಿಸಿದ ದ.ಕ ಹಾಲುತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ಮಾತನಾಡಿ ‘ಯಕ್ಷಗಾನದ ಸಮೃದ್ಧತೆ ಹಾಗೂ ಕಲಾ ಮೌಲ್ಯವನ್ನು ಯುವ ಮನಸ್ಸುಗಳು ಅರ್ಥಮಾಡಿಕೊಳ್ಳಬೇಕು. ಇದರೊಂದಿಗೆ ಇತರ ಕಲೆಗಳನ್ನೂ ಗೌರವಿಸುವ ಮನೋಭಾವ ಬೆಳೆದು ಬರಬೇಕು. ಯಕ್ಷಾಂಗಣವು ಸತ್ವಯುತ ಪ್ರಸಂಗಗಳ ತಾಳಮದ್ದಳೆಯೊಂದಿಗೆ ಅಗಲಿದ ಕಲಾವಿದರ – ಕಲಾಪೋಷಕರ ಸರಣಿ ಸಂಸ್ಮರಣೆ ಹಾಗೂ ನಾಟಕ ರಂಗದ ಹಿರಿಯ ಚೇತನ ರಾಮಕಿರೋಡಿಯನ್ ಅವರ ನೂರರ ನೆನಪನ್ನು ಮಾಡಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ’ ಎಂದು ಶ್ಲಾಘಿಸಿದರು.


ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ ಕಾರ್ಯಾಧ್ಯಕ್ಷ ಪ್ರೊ‌. ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಮತ್ತು ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ರವೀಂದ್ರ ರೈ ಕಲ್ಲಿಮಾರು ವಂದಿಸಿದರು. ಕಾರ್ಯದರ್ಶಿಗಳಾದ ಲಕ್ಷ್ಮೀನಾರಾಯಣ ರೈ ಹರೇಕಳ ಮತ್ತು ಸುಮಾ ಪ್ರಸಾದ್ ಸನ್ಮಾನ ಪತ್ರ ವಾಚಿಸಿದರು. ಸಮಿತಿ ಪ್ರಮುಖರಾದ ಕರುಣಾಕರ ಶೆಟ್ಟಿ ಪಣಿಯೂರು, ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಉಮೇಶ ಆಚಾರ್ಯ ಗೇರುಕಟ್ಟೆ, ಸಿದ್ಧಾರ್ಥ ಆಜ್ರಿ, ನಿವೇದಿತಾ ಎನ್. ಶೆಟ್ಟಿ ಉಪಸ್ಥಿತರಿದ್ದರು.

‘ಕರ್ಣ ಚರಿತ್ರೊ’ ತುಳು ತಾಳಮದ್ದಳೆ:
ಸಪ್ತಾಹದ ಕೊನೆಯಲ್ಲಿ ‘ಶ್ರೀಹರಿ ಚರಿತ್ರೆ’ ಏಕಾದಶ ಸರಣಿಯ ಏಳನೆಯ ಆಖ್ಯಾನ ‘ ಕರ್ಣ ಚರಿತ್ರೊ: ಏಕಿನಿ ಕರ್ಣೆ – ದೇವರೆಗ್ ಅರ್ಪಣೆ’ ತುಳು ತಾಳಮದ್ದಳೆ ಜರಗಿತು. ಗಣೇಶ್ ಕುಮಾರ್ ಹೆಬ್ರಿ ಮತ್ತು ಪ್ರಶಾಂತ ರೈ ಪುತ್ತೂರು ಅವರ ಭಾಗವತಿಕೆಯಲ್ಲಿ ಜಿಲ್ಲೆಯ ಪ್ರಸಿದ್ಧ ಅರ್ಥಧಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here