ವಿಟ್ಲ ಪೇಟೆ ಅಗಲೀಕರಣಗೊಳಿಸಿ ಹೆದ್ದಾರಿ ನಿರ್ಮಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ನೇತೃತ್ವದಲ್ಲಿ ಪ್ರತಿಭಟನೆ

0

*ವಿಟ್ಲದ ರಾಜಕೀಯ ವ್ಯವಸ್ಥೆ ರಸ್ತೆಯನ್ನು ತಿರುಗಿಸುವ ಕೆಲಸ ಮಾಡುತ್ತಿದೆ: ಶ್ರೀಧರ ಶೆಟ್ಟಿ ಬೈಲುಗುತ್ತು

*ಸ್ವಾತಂತ್ರ್ಯ ಪೂರ್ವದಿಂದಲೇ ಉಪಯೋಗದಲ್ಲಿದ್ದ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ: ಮುರುವ ಮಹಾಬಲ ಭಟ್

ವಿಟ್ಲ: ವಿಟ್ಲದ ರಾಜಕೀಯ ವ್ಯವಸ್ಥೆ ರಸ್ತೆಯನ್ನು ಮೆಲ್ಕಾರ್‌ನಿಂದ ತಿರುಗಿಸಿ ಕಾಂಞಂಗಾಡಿಗೆ ತೆಗೆದುಕೊಂಡು ಹೋಗುವ ಕೆಲಸಕ್ಕೆ ಕೈಹಾಕಿದೆ. ವಿಟ್ಲ ಪೇಟೆಯನ್ನು ಅಗಲೀಕರಣ ಮಾಡಿ ಹೆದ್ದಾರಿಯನ್ನು ಈ ಮೂಲಕವೇ ತೆಗೆದುಕೊಂಡು ಹೋಗಬೇಕು. ಇದಕ್ಕಾಗಿ ಸರ್ಕಾರ 50 ಕೋಟಿ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತುರವರು ಆಗ್ರಹಿಸಿದರು.

ವಿಟ್ಲ ಪೇಟೆಯನ್ನು ಅಗಲೀಕರಣಗೊಳಿಸಿ ಹೆದ್ದಾರಿ ನಿರ್ಮಿಸುವಂತೆ ಆಗ್ರಹಿಸಿ ನ.28ರಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ನೇತೃತ್ವದಲ್ಲಿ ವಿಟ್ಲ ನಿರೀಕ್ಷಣಾ ಮಂದಿರದಿಂದ ವಿಟ್ಲ ನಾಡಕಛೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ನಮ್ಮ ವಿಟ್ಲ ವಿಧಾನ ಸಭಾ ಕ್ಷೇತ್ರ ತೆರವುಗೊಂಡ ಬಳಿಕದ ದಿನಗಳಲ್ಲಿ ಈ ಭಾಗದ ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಬಳಿಕದ ದಿನಗಳಲ್ಲಿ ಅಗತ್ಯಕೆಲಸಗಳಿಗಾಗಿ ಪುತ್ತೂರು, ಬಂಟ್ವಾಳ, ಉಳ್ಳಾಲ ಭಾಗಕ್ಕೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳೇ ನೇರ ಕಾರಣವಾಗಿದ್ದಾರೆ. ಇವೆಲ್ಲವನ್ನು ಸರಿಪಡಿಸುವ ಕೆಲಸವಾಗಬೇಕು ಎಂದವರು ಹೇಳಿದರು.

ಸಾಮಾಜಿಕ ಹೋರಾಟಗಾರ ಮುರುವ ಮಹಾಬಲ ಭಟ್ ರವರು ಮಾತನಾಡಿ ಸ್ವಾತಂತ್ರ್ಯ ಪೂರ್ವದಿಂದಲೇ ಉಪಯೋಗದಲ್ಲಿದ್ದಂಥ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ. 200 ವರ್ಷದ ಹಿಂದೆ ರೈತರು ಇದೇ ದಾರಿಯನ್ನು ಬಳಸಿಕೊಂಡು ತೆರಳಿ ಬ್ರಿಟೀಷ್ ಸರ್ಕಾರದ ವಿರುದ್ಧ ಆತ್ಮಾರ್ಪಣೆಯನ್ನು ಮಾಡಿದ್ದಾರೆ. ಖಾಸಗಿ ಎಂದು ಹೇಳಿಕೊಂಡು ಅಭಿವೃದ್ಧಿಯನ್ನು ತಡೆಯುತ್ತಿರುವವರು ಜಾಗವನ್ನು ಬಿಟ್ಟುಕೊಡಬೇಕು. ರಸ್ತೆ ಅಗಲೀಕರಣವಾಗುವ ಮೂಲಕ, ಹತ್ಯೆಯಾದ 2ಸಾವಿರ ರೈತರ ಆತ್ಮಕ್ಕೆ ಚಿರಶಾಂತಿ ನೀಡುವ ಕಾರ್ಯವಾಗಬೇಕು ಎಂದರು. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ರವರು ಕಂದಾಯ ಇಲಾಖೆಯ ಉಪತಹಸೀಲ್ದಾರ್ ವಿಜಯ ವಿಕ್ರಮ್‌ರವರಿಗೆ ಮನವಿಯನ್ನು ನೀಡಿದರು. ಕರ್ನಾಟಕ ಕರಾವಳಿ ನೆಲಜಲ ಸಂರಕ್ಷಣಾ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ ಪಾಳಿಗೆ, 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ವಿರೋಽ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಸಮಿತಿಯ ರೋಹಿತಾಶ್ವ ಭಂಗ, ರೈತ ಸಂಘದ ಉದಯ ಕುಮಾರ್, ವಸಂತ ಶೆಟ್ಟಿ ಎರ್ಮೆನೆಲೆ, ಅಬ್ದುಲ್ ರಹಿಮಾನ್, ಇಸುಬು, ಶಶಿಧರ, ವೆಂಕಟ್ರಮಣ ಭಟ್, ಮಹಮ್ಮದ್ ಶರೀಫ್, ಹಸೈನಾರ್ ಸೇರಾಜೆ, ನಾರಾಯಣ ಪೂಜಾರಿ, ಕೃಷ್ಣಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here