ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಾಲಯಕ್ಕೆ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಭೇಟಿ

0

ಉಪ್ಪಿನಂಗಡಿ: ದೇವಾಲಯಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದಕ್ಕೆ ಒತ್ತು ನೀಡುವುದಾಗಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ ತಿಳಿಸಿದರು.
ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಅದೆಷ್ಟೋ ದೇವಾಲಯಗಳು ಆರ್ಥಿಕ ಸ್ಥಿತಿಯಲ್ಲಿ ಹಿಂದುಳಿದಿದ್ದರೂ, ಧಾರ್ಮಿಕತೆ ಹಾಗೂ ಕಾರಣೀಕತೆಯಲ್ಲಿ ವಿಶಿಷ್ಟತೆ ಹೊಂದಿದೆ. ಅಂತಹ ದೇವಾಲಯಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸಿದರಲ್ಲದೆ, ಜಿಲ್ಲೆಯ ಎ ಗ್ರೇಡ್ ದೇವಾಲಯಗಳಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಅಧ್ಯಯನ ನಡೆಸಿ, ಭಕ್ತಾದಿಗಳ ಬೇಡಿಕೆಗೆ ಅನುಗುಣವಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ನಾನು ಮೂಲತಃ ಬಂಟ್ವಾಳ ತಾಲೂಕಿನವಳಾಗಿದ್ದು, ಗ್ರಾ.ಪಂ. ಸದಸ್ಯೆಯಾಗಿ, ಮೆಸ್ಕಾಂ ನಿಗಮದಲ್ಲಿ ನಿರ್ದೇಶಕಿಯಾಗಿ ಸಾಮಾಜಿಕ ಸೇವೆ ನಡೆಸಿದ ಅನುಭವವಿರುವುದಾಗಿ ಅವರು ತಿಳಿಸಿದರು.


ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಉಪ್ಪಿನಂಗಡಿಯ ಶ್ರೀ ದೇವಾಲಯವು ಪಿಂಡ ಪ್ರಧಾನಕ್ಕೆ ಮಹತ್ವ ಪಡೆದಿದ್ದು, ರಾಜ್ಯದ ವಿವಿಧೆಡೆಯಿಂದ ಭಕ್ತಾದಿಗಳು ಇಲ್ಲಿಗೆ ಪಿಂಡ ಪ್ರಧಾನಕ್ಕೆ ಬರುತ್ತಾರೆ. ಆದರೆ ಇದಕ್ಕೆ ಪೂರಕವಾಗಿ ಇಲ್ಲಿ ಸೌಲಭ್ಯಗಳ ಕೊರತೆ ಇದೆ. ಈಗಾಗಲೇ ಶಾಸಕರು ಈ ಕುರಿತು ಅಧ್ಯಯನ ನಡೆಸಿ ಬೇಡಿಕೆಗಳ ಪಟ್ಟಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದ್ದಾರೆ. ಅದಕ್ಕೆ ಪೂರಕವಾಗಿ ಸ್ಪಂದಿಸಬೇಕಾಗಿ ಮನವಿ ಮಾಡಿದರು. ದೇವಾಲಯದ ವತಿಯಿಂದ ಮಲ್ಲಿಕಾ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.


ಈ ಸಂದರ್ಭ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾದ ರಾಧಾಕೃಷ್ಣ ನಾಕ್, ಜಯಂತ ಪೊರೋಳಿ, ಪ್ರಮುಖರಾದ ರೂಪೇಶ್ ರೈ ಅಲಿಮಾರ್, ಶ್ರೀ ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿ ದಿವಾಕರ ಗೌಡ, ಕೃಷ್ಣ ಪ್ರಸಾದ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here