ಪುತ್ತೂರು: ಕೇಶವ ಸ್ಮೃತಿ ಸಂವರ್ಧನ ಸಮಿತಿ ಮತ್ತು ಮಹಿಳಾ ಸಮನ್ವಯ ಪುತ್ತೂರು ಜಿಲ್ಲೆಯ ಸಹಯೋಗದೊಂದಿಗೆ ’ನಾರಿ ಶಕ್ತಿ ಸಂಗಮ’ ಮಹಿಳಾ ಸಮ್ಮೇಳನ ಡಿ.3ರಂದು ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆಯಲಿದೆ ಎಂದು ಮಹಿಳಾ ಸಮನ್ವಯ ಪುತ್ತೂರು ಜಿಲ್ಲೆ ಸಂಚಾಲಕಿ ರೂಪಲೇಖ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘವು 2025ರಲ್ಲಿ ಶತಮಾನೋತ್ಸವ ಅಂಗವಾಗಿ ಭಾರತದ ಎಲ್ಲಾ ಕಡೆ ನಾರಿ ಶಕ್ತಿ ಸಂಗಮ ಕಾರ್ಯಕ್ರಮ ನಡೆಯುತ್ತಿದ್ದು, ಈ ಮಹಿಳಾ ಸಮ್ಮೇಳನ ರಾಷ್ಟ್ರೀಯ ಚಿಂತನೆ, ಸಾಮಾಜಿಕ ಸಾಮರಸ್ಯ, ಮಹಿಳಾ ಸುರಕ್ಷತೆ, ಕೃಷಿ ವಿಚಾರಗಳ ಕುರಿತು ಮತ್ತು ಮಹಿಳಾ ಸಮಸ್ಯೆಗಳ ಕುರಿತು ಚರ್ಚೆಯನ್ನು, ಪರಿಹಾರಗಳನ್ನು ಹುಡುಕಲು ಮತ್ತು ಮಹಿಳಾ ಸಾಧನೆಗಳ ಪ್ರದರ್ಶನವನ್ನು ಒಳಗೊಂಡಿರುತ್ತದೆ. ಈಗಾಗಲೇ ದೇಶದ 450 ಕಡೆಗಳಳ್ಲಿ ಮಹಿಳಾ ಸಮ್ಮೇಳನ ನಡೆಸಲಾಗಿದ್ದು, ಸುಮಾರು 1.80 ಲಕ್ಷ ಮಹಿಳೆಯರು ಭಾಗವಹಿಸಿದ್ದಾರೆ. ಪುತ್ತೂರಿನಲ್ಲಿ ಬೆಳಿಗ್ಗೆ ಗಂಟೆ 9 ರಿಂದ ಮಧ್ಯಾಹ್ನ ಗಂಟೆ 2 ತನಕ ಈ ಸಮಾವೇಶ ನಡೆಯಲಿದೆ. ಸಮಿತಿ ಸ್ವಾಗತ ಸಮಿತಿ ಅಧ್ಯಕ್ಷೆಯಾಗಿರುವ ಹಿರಿಯ ವೈದ್ಯೆ ಡಾ ಗೌರಿ ಪೈ ದೀಪ ಪ್ರಜ್ವಲನೆ ಮಾಡಲಿದ್ದಾರೆ. ವಕೀಲರು ಮತ್ತು ಕಲಾವಿದರಾದ ಮಾಳವಿಕಾ ಅವಿನಾಶ್ ಅವರು ಉದ್ಘಾಟನಾ ವಾಚನ ಮಾಡಲಿದ್ದಾರೆ. ವಿದ್ಯಾ ಭಾರತಿ ಕರ್ನಾಟಕ ಪ್ರಾಂತ ಉಪಾಧ್ಯಕ್ಷೆಯಾಗಿರುವ ಆಯುರ್ವೇದ ವೈದ್ಯೆ ಡಾ. ಲಕ್ಷ್ಮೀ ಎನ್ ಪ್ರಸಾದ್ ಸಮಾರೋಪ ವಾಚಕನರಾಗಲಿದ್ದಾರೆ. ನೇಕಾರರಿಂದ ನೇಯ್ದ ಸೀರೆಗಳ ಮಳಿಗೆ ಮತ್ತು ಗೋವು ಉತ್ಪನ್ನಗಳು, ಕರಕುಶಲ ಉತ್ಪನ್ನಗಳ ಮಾರಾಟ ಮಳಿಗೆಗಳು ಕಾರ್ಯಕ್ರಮಲ್ಲಿ ಇರಲಿದೆ ಎಂದು ಅವರು ಹೇಳಿದರು.
3 ಅವಧಿಯ ಕಾರ್ಯಕ್ರಮ:
ಬೆಳಿಗ್ಗೆ ಗಂಟೆ 10ರಿಂದ ಉದ್ಘಾಟನೆ, 11 ಗಂಟೆ ಚರ್ಚಾಕೂಟ ನಡೆಯಲಿದೆ ಮಹಿಳಾ ಗುಂಪು ರಚನೆ ಮಾಡಿ ತಮ್ಮ ತಮ್ಮ ಸ್ಥಳೀಯ ಸಮಸ್ಯೆಗಳ ಕುರಿತು ಚರ್ಚಿಸಿ ದಾಖಲಿಕರಣ ಮಾಡಲಾಗುತ್ತದೆ. ಒಟ್ಟು ಮೂರು ಅವಧಿಯಲ್ಲಿ ನಡೆಯುವ ಸಮ್ಮೇಳನದಲ್ಲಿ ಬಂದಿರುವ ವಿಚಾರಗಳ ದಾಖಲೀಕರಣವನ್ನು ಮುಂದಿನ ದಿನ ಹಿರಿಯರು ಚಿಂತನೆ ಮಾಡಲಿದ್ದಾರೆ ಎಂದು ರೂಪಲೇಖ ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಟ್ರಸ್ಟಿ ಗಜಾನನ ಪೈ, ಮಹಿಳಾ ಸಮನ್ವಯ ಪುತ್ತೂರು ಜಿಲ್ಲೆಯ ಸಂಚಾಲಕಿ ತೇಜಸ್ವಿನಿ ಶೇಖರ್, ತಾಲೂಕು ಸಹಸಂಚಾಲಕಿ ವಿದ್ಯಾಗೌರಿ ಸದಸ್ಯೆ ಸ್ವರ್ಣೋಧ್ಯಮಿ ರಾಜೀ ಬಲರಾಮ್ ಉಪಸ್ಥಿತರಿದ್ದರು.