ಪುತ್ತೂರು: 2 ವರ್ಷದ ಹಿಂದೆ ಗೋಳಿತೊಟ್ಟು ಗ್ರಾಮದ ಸಣ್ಣಂಪಾಡಿಯಲ್ಲಿ ಲಾರಿಯೊಂದು ಬೈಕ್ಗೆ ಡಿಕ್ಕಿಯಾದ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಲಾರಿ ಚಾಲಕ ಬಾಗಲಕೋಟೆಯ ಹುನಗುಂದ ತಾಲೂಕಿನ ಮಂಜುನಾಥ ಎಸ್ ತಲಾವಾರು ಎಂಬವರನ್ನು ಪುತ್ತೂರು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
2012ರ ಮೇ 6ರಂದು ಮಂಜುನಾಥ ಎಸ್ ತಲಾವಾರ್ ಅವರು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರು ಕಡೆ ಚಲಾಯಿಸುತ್ತಿದ್ದ ಲಾರಿ ಗೋಳಿತೊಟ್ಟು ಗ್ರಾಮದ ಸಣ್ಣಂಪಾಡಿ ಎಂಬಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕ್ಗೆ ಡಿಕ್ಕಿಯಾಗಿತ್ತು. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸೇಸಪ್ಪ ಗೌಡ ಎಂಬವರು ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಘಟನೆ ಕುರಿತು ಪುತ್ತೂರು ಸಂಚಾರ ಪೊಲೀಸರು ಆರೋಪಿ ಲಾರಿ ಚಾಲಕನ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. ಆರೋಪಿ ಪರ ವಕೀಲರಾದ ಮಾಧವ ಪೂಜಾರಿ, ರಾಕೇಶ್ ಬಲ್ನಾಡು, ನಿಶಾ ಕುಮಾರಿ ವಾದಿಸಿದ್ದರು.