ಪುತ್ತೂರು: ಮಂಗಳೂರಿನ ಎಮ್ಮೆಕೆರೆಯಲ್ಲಿ ಅಂತರಾಷ್ಟ್ರೀಯ ಮಟ್ಟದ 50 ಮೀಟರ್ ಈಜುಕೊಳದಲ್ಲಿ ನಡೆದ 19ನೇ ರಾಷ್ಟ್ರೀಯ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್‌ನಲ್ಲಿ ಪುತ್ತೂರು ಅಕ್ವಾಟಿಕ್ ಕ್ಲಬ್ ನ ಪ್ರಮುಖ ತರಬೇತುದಾರ ಪಾರ್ಥ ವಾರಣಾಶಿ, ಸ್ವೀಕೃತ್ ಆನಂದ್, ಧನುಶ್ ರೈ ಉತ್ತಮ ಪ್ರದರ್ಶನ ನೀಡಿ ಹಲವು ಪದಕಗಳನ್ನು ತನ್ನದಾಗಿಸಿ ಕೊಂಡರು.
ಇದರಲ್ಲಿ ಪಾರ್ಥ ವಾರಣಾಶಿ 4 ಚಿನ್ನ ಮತ್ತು 1 ಬೆಳ್ಳಿ ಪದಕ ಸೇರಿ ಒಟ್ಟು 5 ಪದಕಗಳನ್ನು ಗೆದ್ದು ಕೊಂಡಿದ್ದಾರೆ. 100 ಮೀಟರ್ ಫ್ರೀಸ್ಟೈಲ್ (1:00:08), 50 ಮೀಟರ್ ಬ್ಯಾಕ್‌ಸ್ಟ್ರೋಕ್ (31.6 ಸೆಕೆಂಡುಗಳು), 50 ಮೀಟರ್ ಬಟರ್‌ಫ್ಲೈ ಸ್ಟ್ರೋಕ್ (28 ಸೆಕೆಂಡುಗಳು) ಮತ್ತು 4×50 ಫ್ರೀಸ್ಟೈಲ್ ರಿಲೇ 1:51 ರಲ್ಲಿ 4 ಚಿನ್ನದ ಪದಕಗಳನ್ನು ಗೆದ್ದರು.
100 ಮೀಟರ್ ಫ್ರೀಸ್ಟೈಲ್‌ನಲ್ಲಿ ಅವರು ತಮ್ಮ ವೈಯಕ್ತಿಕ ಅತ್ಯುತ್ತಮ ಸಮಯವನ್ನು 1:00:08 ಅನ್ನು ಗಳಿಸಿದರು. 200 ಮೀಟರ್ ಫ್ರೀಸ್ಟೈಲ್‌ನಲ್ಲಿ 2.29 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರು. ಪಾರ್ಥ ವಾರಣಾಸಿ ರಾಷ್ಟ್ರೀಯ ಮಟ್ಟದ ಮಾಜಿ ಈಜುಗಾರರಾಗಿ 2019ರಲ್ಲಿ ಕೊರಿಯಾದ ಗ್ವಾಂಗ್ಜುನಲ್ಲಿ ನಡೆದ 18 ನೇ FINA ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಟೀಮ್ ಇಂಡಿಯಾ ಕೋಚ್‌ಗಳಲ್ಲಿ ಒಬ್ಬರಾಗಿದ್ದರು.
ಸ್ವೀಕೃತ್ ಆನಂದ್ 4×50 ಮೀಟರ್ ಫ್ರೀಸ್ಟೈಲ್‌ನಲ್ಲಿ 1:52 ರ ಸಮಯದೊಂದಿಗೆ 1 ಚಿನ್ನದ ಪದಕ ಗೆದ್ದರು. ಅವರು 4×50 ಮೆಡ್ಲೆ ರಿಲೇಯಲ್ಲಿ ಕಂಚಿನ ಪದಕ (2:19;95) ಮತ್ತು 100 ಮೀಟರ್ ಬ್ರೆಸ್ಟ್‌ಸ್ಟ್ರೋಕ್ (1:26:97) ಮತ್ತು 50 ಮೀಟರ್ ಫ್ರೀಸ್ಟೈಲ್ (29.4 ಸೆಕೆಂಡುಗಳು) ನಲ್ಲಿ 2 ಬೆಳ್ಳಿ ಪದಕಗಳನ್ನು ಗೆದ್ದರು.
4x 50 ಮೀಟರ್ ಮೆಡ್ಲೆ ರಿಲೇಯಲ್ಲಿ ಧನುಷ್ ಕಂಚು ಬಹುಮಾನ ಗೆದ್ದಿದ್ದಾರೆ. ಕೆನಡಾದ ಒಂಟಾರಿಯೊದ ವಿಂಡ್ಸರ್‌ನಲ್ಲಿ ನಡೆದ ವಿಶ್ವ ಜೀವ ಉಳಿಸುವ ಚಾಂಪಿಯನ್‌ಶಿಪ್‌ನಲ್ಲಿ ರಾಷ್ಟ್ರೀಯ ಮಟ್ಟದ ಈಜುಪಟು ಸ್ವೀಕೃತ್ ಆನಂದ್ ಇತ್ತೀಚೆಗೆ ಭಾಗವಹಿಸಿದ್ದರು.
ಮೂವರು ಈಜುಪಟುಗಳು ಕೂಡ ಪುತ್ತೂರಿನ ಡಾ.ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ತರಬೇತಿ ಪಡೆಯುತ್ತಾ ಯುವ ಈಜುಪಟುಗಳಿಗೆ ತರಬೇತಿ ನೀಡುತ್ತಿದ್ದಾರೆ.