ಉಪ್ಪಿನಂಗಡಿ: ಚರಂಡಿಯಲ್ಲಿ ತ್ಯಾಜ್ಯ ನೀರು ಶೇಖರಣೆಯಾಗಿ ಗ್ರಾಮಸ್ಥರ ಆರೋಗ್ಯ ಹದಗೆಡುತ್ತಿರುವ ಸಮಸ್ಯೆಯ ಬಗ್ಗೆ ಅರಿತ ಶಾಸಕ ಅಶೋಕ್ ಕುಮಾರ್ ರೈ ದಿಢೀರ್ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೇರಿಕೆ-ಬೊಳಂತಿಲ ರಸ್ತೆ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಅಶೋಕ್ ಕುಮಾರ್ ರೈ ಬೇರಿಕೆಗೆ ಆಗಮಿಸಿದ್ದರು. ಈ ಸಂದರ್ಭ ಅಲ್ಲಿದ್ದ ಉಪ್ಪಿನಂಗಡಿಯವರು ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಹಾಗೂ ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಚರಂಡಿಯು ಬ್ಲಾಕ್ ತ್ಯಾಜ್ಯ ನೀರು ನಿಂತು ಸಮಸ್ಯೆಯಾಗಿರುವುದನ್ನು ಶಾಸಕರ ಗಮನಕ್ಕೆ ತಂದರು. ಅಲ್ಲಿನ ಕಾರ್ಯಕ್ರಮ ಮುಗಿದ ಕೂಡಲೇ ಅಶೋಕ್ ಕುಮಾರ್ ರೈ ಉಪ್ಪಿನಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಕ್ಷಣವೇ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ ಅಶೋಕ್ ಕುಮಾರ್ ರೈ ಅವರನ್ನು ತರಾಟೆಗೆ ತೆಗೆದುಕೊಂಡರು.
ಈ ಚರಂಡಿಯು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಬರುತ್ತಿದ್ದರೂ, ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಗಡಿ ಭಾಗದಲ್ಲಿದೆ. ಉಪ್ಪಿನಂಗಡಿ ಪೇಟೆಯ ತ್ಯಾಜ್ಯ ನೀರೆಲ್ಲಾ ಇದರಲ್ಲೇ ಹರಿಯುತ್ತಿದ್ದು, ಈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಈ ಚರಂಡಿ ಮುಚ್ಚಿ ಹೋಗಿದ್ದು, ತ್ಯಾಜ್ಯ ನೀರೆಲ್ಲಾ ಚರಂಡಿಯಲ್ಲೇ ಶೇಖರಣೆಯಾಗುವಂತಾಗಿದೆ ಎಂಬುದನ್ನು ಸ್ಥಳೀಯರು ಶಾಸಕರಲ್ಲಿ ಹೇಳಿದಾಗ, ಚರಂಡಿ ಯಾವ ಇಲಾಖೆಯ ವ್ಯಾಪ್ತಿಗೆ ಬರಲಿ. ಆದರೆ ಜನರ ಆರೋಗ್ಯದ ಮೇಲೆ ಚೆಲ್ಲಾಟವಾಡುವುದು ಬೇಡ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಇದಕ್ಕೆ ಈಗ ಮಣ್ಣು ತುಂಬಿ ನೀರಿನ ಹರಿವಿಗೆ ತಡೆಯಾಗಿದ್ದು, ಕೂಡಲೇ ಕಾಮಗಾರಿ ಗುತ್ತಿಗೆದಾರರು ಇದನ್ನು ಬಿಡಿಸಿ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯ ತೌಸೀಫ್ ಯು.ಟಿ., ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಶಬೀರ್ ಕೆಂಪಿ, ಪ್ರಮುಖರಾದ ನಝೀರ್ ಮಠ, ಯು.ರಾಮ, ವೆಂಕಪ್ಪ ಪೂಜಾರಿ ಮತ್ತಿತರರು ಇದ್ದರು.
ಉಪ್ಪಿನಂಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಹಿರೇಬಂಡಾಡಿ ಕ್ರಾಸ್ನಲ್ಲಿ ಮೇಲ್ಸೆತುವೆ ನಿರ್ಮಿಸದಿದ್ದರೆ ಇಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ಬರುವ ಸುಮಾರು 5 ಸಾವಿರದಷ್ಟು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ರಸ್ತೆ ದಾಟಲು ಕಷ್ಟವಾಗಬಹುದು ಎಂಬುದನ್ನು ಸ್ಥಳೀಯರು ಈ ಸಂದರ್ಭ ಶಾಸಕ ಅಶೋಕ್ ಕುಮಾರ್ ರೈಯವರಲ್ಲಿ ಮನವರಿಕೆ ಮಾಡಿದರು. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯು ಕೇಂದ್ರ ಸರಕಾರದ ವ್ಯಾಪ್ತಿಗೆ ಬರುತ್ತದೆ. ಈ ವಿಚಾರವನ್ನು ಸಂಸದರಲ್ಲಿಯೂ ಪ್ರಸ್ತಾಪಿಸಿ ಎಂದಾಗ, ಸಂಸದರು ಉಪ್ಪಿನಂಗಡಿಗೆ ಬರುವುದೇ ಇಲ್ಲ. ಅವರಿಗೆ ಇಲ್ಲಿನ ಸಂಗತಿಯೇ ಗೊತ್ತಿಲ್ಲ. ಇಲ್ಲಿಗೆ ಬಂದು ನಮ್ಮ ಸಮಸ್ಯೆ ಆಲಿಸಿದರೆ ಅವರಿಗೆ ವಿಷಯ ಮನವರಿಕೆ ಮಾಡಬಹುದಿತ್ತು ಎಂದು ಸಾರ್ವಜನಿಕರು ತಿಳಿಸಿದರು. ಆಗ ಇದರ ಸಮಸ್ಯೆಗಳ ಬಗ್ಗೆ ಮನವಿಯೊಂದನ್ನು ರೆಡಿ ಮಾಡಿ ನನಗೆ ಕೊಡಿ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿಯೆತ್ತುತ್ತೇನೆ ಎಂದು ಶಾಸಕರು ಭರವಸೆ ನೀಡಿದರಲ್ಲದೆ, ಈ ಬಗ್ಗೆ ನೆನಪಿಸುವ ಹಾಗೂ ಮನವಿ ರೆಡಿ ಮಾಡುವ ಜವಾಬ್ದಾರಿಯನ್ನು ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ತೌಸೀಫ್ ಯು.ಟಿ. ಅವರಿಗೆ ವಹಿಸಿದರು.