ಸತತ 10ನೇ ಬಾರಿ ಸಮಗ್ರ ಪ್ರಶಸ್ತಿ ಪಡೆದುಕೊಂಡ ದಕ್ಷಿಣ ಕನ್ನಡ ಜಿಲ್ಲೆ – ಪುತ್ತೂರಿನಿಂದ 5 ಮಂದಿ ರಾಷ್ಟ್ರಮಟ್ಟಕ್ಕೆ
* ಪ್ರತಿಯೊಬ್ಬರ ಸಹಕಾರದಿಂದ ಕ್ರೀಡಾಕೂಟ ಯಶಸ್ವಿಯಾಗಿದೆ – ಬಿ.ರಮಾನಾಥ ರೈ
* ಮಾದರಿ ಕ್ರೀಡಾಕೂಟವನ್ನು ರಾಜ್ಯಕ್ಕೆ ಪರಿಚಯಿಸುವ ಕೆಲಸ ಆಗಿದೆ – ಹೇಮನಾಥ ಶೆಟ್ಟಿ ಕಾವು
ಪುತ್ತೂರು: ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ನೇತೃತ್ವದಲ್ಲಿ ಕೊಂಬೆಟ್ಟಿನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಎರಡು ದಿನಗಳು ನಡೆದ ರಾಜ್ಯಮಟ್ಟದ 17ರ ವಯೋಮಾನದ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟ ದ.4ರಂದು ಸಂಜೆ ಸಂಪನ್ನಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆ 61 ಅಂಕ ಪಡೆದು ಸತತ 10ನೇ ಬಾರಿ ಸಮಗ್ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ತಂಡ ಪ್ರಶಸ್ತಿಯಲ್ಲಿ ಬಾಲಕರ ವಿಭಾಗದಲ್ಲಿ ಬೆಂಗಳೂರು ವಿದ್ಯಾನಗರ ಸ್ಪೋರ್ಟ್ ಶಾಲೆಯು 21 ಅಂಕ ಪಡೆದು ಪ್ರಥಮ, 17 ಅಂಕ ಪಡೆದ ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಪಡೆದು ಕೊಂಡಿತ್ತು. ಬಾಲಕಿಯರ ವಿಭಾಗದಲ್ಲಿ 44 ಅಂಕ ಪಡೆದ ದಕ್ಷಿಣ ಕನ್ನಡ ಪ್ರಥಮ, 21 ಅಂಕ ಪಡೆದ ಶಿರಸಿ ದ್ವಿತೀಯ ಸ್ಥಾನ ಪಡೆದುಕೊಂಡಿತು. ಎರಡೂ ವಿಭಾಗದಲ್ಲಿ ಒಟ್ಟು 61 ಅಂಕ ಪಡೆದ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ಪ್ರತಿಯೊಬ್ಬರ ಸಹಕಾರದಿಂದ ಕ್ರೀಡಾಕೂಟ ಯಶಸ್ವಿಯಾಗಿದೆ: ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿಯವರು ಸಂಘಟನಾ ಚತುರರು, ಹಿಡಿದ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುವವರು. ಅವರು ಯಶಸ್ವಿ ನಾಯಕರು. ಅವರಿಗೆ ಅವಕಾಶಗಳು ಸಿಗದೇ ಇರಬಹುದು. ಆದರೆ ಜನರ ಮನಸ್ಸಿನಲ್ಲಿ ಯಾವತ್ತೂ ಇದ್ದಾರೆ ಎಂದು ಹೇಳುತ್ತೇನೆ. ಪ್ರತಿಯೊಬ್ಬರ ಸಹಕಾರದಿಂದ ಯಶಸ್ವಿ ಕಾರ್ಯಕ್ರಮ ಆಗಿದೆ. ಪ್ರತಿಯೊಬ್ಬರು ಈ ಕಾರ್ಯಕ್ರಮ ಮೆಚ್ಚಿದ್ದಾರೆ. ಕಾರ್ಯಕ್ರಮ ಮಾಡುವುದು ಸುಲಭ. ಈ ಕ್ರೀಡಾಕೂಟದಲ್ಲಿ ಸಾಧಕದ ಕುರಿತು ಚರ್ಚೆಯಾಗಿದೆ ಹೊರತು ಬಾಧಕ ಇಲ್ಲವೇ ಇಲ್ಲವಾಗಿದೆ. ಇದು ಸಂತೋಷದ ವಿಚಾರ. ಇದು ಕ್ರೀಡಾ ಜಗತ್ತಿನಲ್ಲಿ ದಕ್ಷಿಣ ಕನ್ನಡದ ಯಶಸ್ವಿಗೆ ಕಾರಣವಾಗಿದೆ. ಈ ಹಿಂದೆ ಇಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟ ಆದಾಗ ನಾನು ಮಂತ್ರಿಯಾಗಿ ಇಲ್ಲಿ ಭಾಗವಹಿಸಿದ್ದೇನೆ ಎಂದ ಅವರು ದೈಹಿಕವಾಗಿ ನಮ್ಮ ಆರೋಗ್ಯದ ರಕ್ಷಣೆಯ ಜೊತೆ ಸಮಾಜದ ಆರೋಗ್ಯ ಬಹಳ ಅಗತ್ಯ. ಕ್ರೀಡೆ ಸಾಮರಸ್ಯಕ್ಕೆ ಹತ್ತಿರವಾದದ್ದು. ಸಾಮರಸ್ಯದ ಬದುಕಿನ ರೀತಿಯಲ್ಲಿ ಕ್ರೀಡೆ ಮಾಡುತ್ತೇವೆ. ನಮ್ಮ ಮಧ್ಯೆ ಇರುವ ಅವಿಶ್ವಾಸವನ್ನು ದೂರ ಮಾಡಲು ಕ್ರೀಡೆ ಬಹು ಅಗತ್ಯ ಎಂದರು.
ಮಾದರಿ ಕ್ರೀಡಾಕೂಟವನ್ನು ರಾಜ್ಯಕ್ಕೆ ಪರಿಚಯಿಸುವ ಕೆಲಸ ಆಗಿದೆ: ಕ್ರೀಡಾ ಕಾರಂಜಿಯ ಕಾರ್ಯಾಧ್ಯಕ್ಷರಾಗಿರುವ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ, ಕ್ರೀಡಾಕೂಟದ ಬಗ್ಗೆ ಯಾರಿಂದಲೂ ನೆಗೆಟಿವ್ ಬಂದಿಲ್ಲ.
ನಮ್ಮ ಜೀವಮಾನದಲ್ಲಿ ಇಂತಹ ಕ್ರೀಡಾಕೂಟ ನೋಡಿಲ್ಲ ಎಂದು ಎಲ್ಲಾ ದೈಹಿಕ ಶಿಕ್ಷಣ ಶಿಕ್ಷಕರು ಹೊಗಳಿದ್ದಾರೆ. ಇಂತಹ ವಿವಿಧತೆಯಲ್ಲಿ ಏಕತೆ ಸಾರುವ ದ.ಕ.ಜಿಲ್ಲೆಯನ್ನು ಇವತ್ತು ರಾಜ್ಯಕ್ಕೆ ಪರಿಚಯಿಸುವ ಕೆಲಸ ಕ್ರೀಡೆಯಿಂದಾಗಿದೆ. ಎಷ್ಟೋ ಮಂದಿ ನನ್ನಲ್ಲಿ ಇದೊಂದು ಜೀವಮಾನದಲ್ಲಿ ಮರೆಯಲಾಗದ ಕ್ರೀಡಾಕೂಟ ಎಂದಿದ್ದಾರೆ. ಕ್ರೀಡಾಕೂಟ ಮಾಡುವುದು ದೊಡ್ಡದಲ್ಲ. ಆದರೆ ಒಳ್ಳೆಯ ರೀತಿಯಲ್ಲಿ ಯಶಸ್ಸು ಸಿಗಬೇಕು. ಇದು ಎಲ್ಲರೂ ಸೇರಿ ಮಾಡಿದ ಕ್ರೀಡಾಕೂಟ. ಇಲಾಖೆ, ಕ್ರೀಡಾಪಟುಗಳ ಸಹಕಾರ ಸಿಕ್ಕಿದೆ. ನಿನ್ನೆಯ ದಿನ ಮಳೆ ಬರುವ ಲಕ್ಷಣ ಇತ್ತು. ಆದರೆ ಕ್ರೀಡಾಂಗಣದ ಅರ್ಧ ಕಿ.ಮೀ ಸುತ್ತಮುತ್ತಲು ಮಳೆ ಬಂದಿದ್ದರೂ ದೇವರ ಅನುಗ್ರಹದಿಂದ ಕ್ರೀಡಾಂಗಣದಲ್ಲಿ ಮಾತ್ರ ಮಳೆ ಕ್ರೀಡೆ ಮುಗಿಯುವ ತನಕವೂ ಬಂದಿಲ್ಲ. ಆತಿಥ್ಯದಲ್ಲೂ ಉತ್ತಮ ರೀತಿಯಲ್ಲಿ ನಮ್ಮ ತಂಡ ನಿರ್ವಹಿಸಿದೆ. ನಿನ್ನೆಯ ದಿನ ಮಕ್ಕಳಿಗೆ ಮೊಟ್ಟೆಯ ಜೊತೆಗೆ ಚಿಕನ್ ಕಬಾಬ್ ಕೊಟ್ಟಿದ್ದೇವೆ ಎಂದರು.
ಸನ್ಮಾನ: ಕ್ರೀಡಾ ಕಾರಂಜಿ ಯಶಸ್ವಿಯಾಗಿ ನಡೆಯಲು ನೇತೃತ್ವ ವಹಿಸಿದ ಕಾವು ಹೇಮನಾಥ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೇಮನಾಥ ಶೆಟ್ಟಿ, ಕ್ರೀಡಾ ಕಾರಂಜಿಯ ಆಹಾರ ಸಮಿತಿ ಉಸ್ತುವಾರಿ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಪಾಕತಜ್ಞ ತುಳಸಿ ಕೇಟರಿಂಗ್‌ನ ಹರೀಶ್ ರಾವ್, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯಗುರು ಜಯಲಕ್ಷ್ಮೀ, ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕಿ ಸುನಿತಾ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಮಾಜಿ ಸಚಿವ ರಮಾನಾಥ ರೈ ಸನ್ಮಾನಿಸಿದರು.
ಶಾಸಕ ಅಶೋಕ್ ಕುಮಾರ್ ರೈ ಅವರ ಪತ್ನಿ ಸುಮಾ ಎ ರೈ, ಕರಾವಳಿ ಅಭಿವೃದ್ದಿ ಪ್ರಾಽಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ವಿಜಯ ಬ್ಯಾಂಕ್ ನಿವೃತ್ತ ಪ್ರಬಂಧಕ ಎಮ್.ಬಿ ವಿಶ್ವನಾಥ ರೈ, ಡ್ಯಾಶ್ ಮಾರ್ಕೆಟಿಂಗ್‌ನ ಮಾಲಕಿ ನಳಿನಿ ಪಿ ರೈ, ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ದ.ಕ ಜಿಲ್ಲಾ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ಲಿಲ್ಲಿ ಪಾಯಸ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಶೆಟ್ಟಿ ನುಳಿಯಾಲು, ಲಯನ್ಸ್ ಕ್ಲಬ್‌ನ ಪ್ರಾಂತೀಯ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ದಂಬೆಕಾನ ಸದಾಶಿವ ರೈ, ತಾಲೂಕು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ದಯಾನಂದ ರೈ ಮನವಳಿಕೆ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕ ಭುವನೇಶ್ ಜೆ, ಜಿಲ್ಲಾ ಉಪನಿರ್ದೇಶಕ ದಯಾನಂದ ನಾಯಕ್, ಕ್ಷೇತ್ರ ಶಿಕ್ಷಣಾಽಕಾರಿ ಲೋಕೇಶ್ ಎಸ್.ಆರ್, ಪುತ್ತೂರು ತಾಲೂಕು ದೈಹಿಕ ಶಿಕ್ಚಣ ಪರಿವೀಕ್ಷಣಾಽಕಾರಿ ಸುಂದರ ಗೌಡ, ಪುತ್ತೂರು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸವಿತಾ ಭಂಡಾರಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ, ಸೀತಾರಾಮ ರೈ ಬನ್ನೂರು, ವಿದ್ಯಾಮಾತ ಅಕಾಡೆಮಿಯ ಸಂಚಾಲಕ ಭಾಗ್ಯೇಶ್ ರೈ, ಕ್ರೀಡಾಪಟು ಧನ್‌ರಾಜ್, ರವಿರಾಜ್ ಸಹಿತ ಹಲವು ಮಂದಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ರೈ, ಕೋಶಾಧಿಕಾರಿ ಮೋಹನ್ ರೈ, ಪುತ್ತೂರು ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸೀತಾರಾಮ ಗೌಡ, ಸುಧಾಕರ್, ಸುಧೀರ್, ನವೀನ್ ರೈ, ಮಾಮಚ್ಚನ್, ರಾಕೇಶ್ ರೈ ಕೆಡೆಂಜಿ, ಗಣೇಶ್ ಶೆಟ್ಟಿ, ಫಾರೂಕ್ ಬಾಯಬ್ಬೆ, ನಗರಸಭೆ ಮಾಜಿ ಸದಸ್ಯ ಅನ್ವರ್ ಖಾಸಿಂ, ಆಲಿ ಪರ್ಲಡ್ಕ, ಎಮ್.ಆರ್.ಎ-ನ ಸೀನಿಯರ್ ಮೆನೇಜರ್ ಸೀತಾರಾಮ ರೈ, ಶ್ರೀನಿವಾಸ ಹೆಚ್.ಬಿ, ವಿ.ಕೆ ಶರೀಫ್, ಹನೀಫ್ ಪುಣ್ಚತ್ತಾರ್ ವಿಜೇತರಿಗೆ ವೈಯುಕ್ತಿಕ ಬಹುಮಾನ ನೀಡುವ ಸಂದರ್ಭ ಉಪಸ್ಥಿತರಿದ್ದರು. ಗೇರುಕಟ್ಟೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಸುನಿತಾ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು. ಬಳಿಕ ಮೈದಾನದಲ್ಲಿ ಆಕರ್ಷಕ ಸುಡುಮದ್ದು ಪ್ರದರ್ಶನಗೊಂಡಿತ್ತು. ಸಭೆಯ ನಡುವೆಯೇ ಧ್ವಜಾವರೋಹಣ ಮಾಡಿ ಕೊನೆಗೆ ಕ್ರೀಡಾ ಜ್ಯೋತಿಯನ್ನು ನಂದಿಸಲಾಯಿತು.
2ನೇ ದಿನದ ವಿವಿಧ ಸ್ಪರ್ಧೆಯ ವಿಜೇತರು: 2ನೇ ದಿನವಾದ ಡಿ.4ರಂದು 17 ಸ್ಪರ್ಧೆಗಳು ನಡೆಯಿತು. ಅದರಲ್ಲಿ ಹಡುಗರ ವಿಭಾಗದಲ್ಲಿ 5 ಸಾವಿರ ಮೀಟರ್ ವೇಗದ ನಡಿಗೆಯಲ್ಲಿ ಪ್ರಥಮ ದಕ್ಷಿಣ ಕನ್ನಡದ ವಿಲಾಸ್ ಗೌಡ, ತುಮಕೂರಿನ ಬಸವರಾಜ್ ಮಂಜಪ್ಪ ಹುಗಾರ್(ದ್ವಿ) ಮಂಡ್ಯದ ಮಡಿವಾಳ ಸಿದ್ದೇಶ(ತೃ), ಹೇಮರ್ ತ್ರೋವಿನಲ್ಲಿ ಉಡುಪಿಯ ಆದಿತ್ಯ(ಪ್ರ), ಚಿಕ್ಕಮಗಳೂರಿನ ಸಲೀಮ್(ದ್ವಿ), ದಕ್ಷಿಣ ಕನ್ನಡದ ಇಶಾನ್ ಕಾರ್ಯಪ್ಪ ಸೇರಾಜೆ(ತೃ), ಪೋಲ್‌ವಾಲ್ಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಜ್ವಲ್(ಪ್ರ), ಬಳ್ಳಾರಿಯ ನರಸಿಂಹ(ದ್ವಿ), ಶಿವಮೊಗ್ಗದ ಅಯಾನ್ ರಾಝ ಎನ್(ತೃ), 1500 ಮೀಟರ್ ಓಟದಲ್ಲಿ ಬೆಳಗಾವಿಯ ದಕ್ಷಾ ಪಾಟೀಲ್(ಪ್ರ)ಧಾರವಾಡದ ಪ್ರಕಾಶ್ ಬೇಡಗಿ(ದ್ವಿ), ಉತ್ತರ ಕನ್ನಡದ ಧನುಷ್ ಮೋಹನ್ ನಾಯ್ಕ್(ತೃ), ಟ್ರಿಪಲ್ ಜಂಪ್‌ನಲ್ಲಿ ಹಾಸನದ ಸಮಂತ್ ಬಿ.ಎಸ್(ಪ್ರ), ಉತ್ತರ ಕನ್ನಡದ ಧರ್ಮೇಂದ್ರ ಸುಬ್ರಾಯ(ದ್ವಿ), ಉಡುಪಿಯ ಮನೀಶ್(ತೃ), ಡಿಸ್ಕಸ್ ತ್ರೋದಲ್ಲಿ ವಿದ್ಯಾಪುರದ ಅವಿನಾಶ್(ಪ್ರ), ಬೆಂಗಳೂರು ಸೌತ್‌ನ ಲೋಹಿತ್ ಕುಮಾರ್ ಹೆಚ್(ದ್ವಿ), ಚಾಮರಾಜನಗರದ ಕಾಡೆರ್‌ವಿಲ್ಲು (ತೃ), 400 ಮೀಟರ್ ಓಟದಲ್ಲಿ ವಿದ್ಯಾನಗರದ ಸೈಯದ್ ಶಬೀರ್(ಪ್ರ), ಬೆಂಗಳೂರು ಸೌತ್‌ನ ಮೋನಿಶ್ ಚಂದ್ರಶೇಖರ್(ದ್ವಿ) ಮತ್ತು ತರಣ್(ತೃ). 4100 ಮೀಟರ್ ರಿಲೇಯಲ್ಲಿ ದಕ್ಷಿಣ ಕನ್ನಡ ಪ್ರಥ್ವಿರಾಜ್ ಅವರ ತಂಡ (ಪ್ರ), ವಿದ್ಯಾನಗರದ ಶೈಯದ್ ಶಬೀರ್ ಅವರ ತಂಡ (ದ್ವಿ), ಬೆಂಗಳೂರು ಸೌತ್‌ನ ತರುಣ್ ವಿ(ತೃ). ಬಾಲಕಿಯರ ವಿಭಾಗದಲ್ಲಿ 3300 ಮೀಟರ್ ಓಟದಲ್ಲಿ ದಕ್ಷಿಣ ಕನ್ನಡದ ಚೈತನ್ಯ(ಪ್ರ), ಬೆಳಗಾವಿಯ ಶೋಭಾ ಪೂಂಜಾ(ದ್ವಿ)ಹಾವೇರಿಯ ಶೃತಿ ಮುಡೂರು(ತೃ), ಟ್ರಿಬಲ್ ಜಂಪ್‌ನಲ್ಲಿ ಬೆಂಗಳೂರು ಉತ್ತರದ ಹರ್ಷಿತ್ ಪಿ(ಪ್ರ), ಶಿರಸಿಯ ಶ್ರೀದೇವಿ ನಾಯ್ಕ್ (ದ್ವಿ), ಶಿವಮೊಗ್ಗದ ಅಮೂಲ್ಯ(ತೃ). 1500 ಮೀಟರ್‌ನಲ್ಲಿ ದಕ್ಷಿಣ ಕನ್ನಡದ ಚರಿಷ್ಮ(ಪ್ರ), ಚಿಕ್ಕಮಗಳೂರಿನ ವಕಾಶಿತ (ದ್ವಿ), ಚಿಕ್ಕೋಡಿಯ ಶಿವಾಕ್ಕ ಹೆಗ್ಡೆ(ತೃ), ಜಾವಲಿನ್ ತ್ರೋದಲ್ಲಿ ಹಾಸನದ ಭವ್ಯ(ಪ್ರ), ಶಿರಸಿಯ ಶ್ರೀದೇವಿ ನಾಯ್ಕ್ (ದ್ವಿ), ಹಾಸನದ ಸಿಂಪನಾ ಎಮ್.ವಿ(ತೃ). ಪೋಲ್‌ವಾಲ್ಟ್‌ನಲ್ಲಿ ದಕ್ಷಿಣ ಕನ್ನಡದ ಧನ್ಯ(ಪ್ರ), ಪ್ರಜಂಶ್ರೀ(ದ್ವಿ)ಮ ಉತ್ತರ ಕನ್ನಡದ ದಿವ್ಯಾ ಸಿ.ನಾಯ್ಕ್(ತೃ). ಶಾರ್ಟ್‌ಪುಟ್‌ನಲ್ಲಿ ದಕ್ಷಿಣ ಕನ್ನಡದ ತುನುಶ್ರೀ ರೈ (ಪ್ರ), ಬೆಂಗಳೂರು ಸೌತ್‌ನ ಹರ್ಷಿತಾ ಎ(ದ್ವಿ), ಮಂಡ್ಯದ ಕೀರ್ತನಾ ಜಿ.ಎಸ್(ತೃ). 400 ಮೀಟರ್ ಓಟದಲ್ಲಿ ರಾಮನಗರದ ರಶ್ಮಿತಾ ಗೌಡ(ಪ್ರ), ಉತ್ತರ ಕನ್ನಡದ ಸುಪ್ರಿಯಾ ಗೌಡ(ದ್ವಿ), ಶಿವಮೊಗ್ಗದ ನಿಖಿತಾ ಜಿ(ತೃ). 100 ಮೀಟರ್ ಓಟದಲ್ಲಿ ದಕ್ಷಿಣ ಕನ್ನಡದ ಗೋಪಿಕಾ ಜಿ (ಪ್ರ), ಶಿವಮೊಗ್ಗದ ಟ್ರಮ್‌ಶಿಖಾ(ದ್ವಿ), ಮಮತಾ ಎಮ್(ತೃ). 41೦೦ ಮೀಟರ್ ರಿಲೆಯಲ್ಲಿ ಶಿರಸಿಯ ಸುಶ್ಮಿತಾ ತಂಡ(ಪ್ರ), ದಕ್ಷಿಣ ಕನ್ನಡದ ಗೋಪಿಕಾ ಜಿ ತಂಡ(ದ್ವಿ), ಉಡುಪಿಯ ಅವನಿ(ತೃ) ಸ್ಥಾನ ಪಡೆದುಕೊಂಡಿದ್ದಾರೆ.
ರಾಜ್ಯಮಟ್ಟದ 17ರ ವಯೋಮಾನದ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟದಲ್ಲಿ ಪುತ್ತೂರಿನಿಂದ ರಾಷ್ಟ್ರಮಟ್ಟಕ್ಕೆ 5 ಮಂದಿ ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ. ಇದರಲ್ಲಿ 3ಸಾವಿರ, 1500, 8೦೦ ನಲ್ಲಿ ಪ್ರಥಮ ಸ್ಥಾನ ಪಡೆದ ಕಡಬದ ಚರಿಷ್ಮಾ, 3೦೦೦ ಮೀಟರ್ ವೇಗದ ನಡಿಗೆಯಲ್ಲಿ ಬೆಥನಿ ನೂಜಿಬಾಳ್ತಿಲ ಚೈತನ್ಯ, 5 ಸಾವಿರ ವೇಗದ ನಡಿಗೆಯಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ವಿಲಾಸ್ ಗೌಡ, ಶಾರ್ಟ್‌ಪುಟ್ ನಲ್ಲಿ ಪಟ್ಟೆ ಪ್ರತಿಭಾ ಪ್ರೌಢಶಾಲೆಯ ತನುಶ್ರೀ, ರಿಲೆಯಲ್ಲಿ ಮೊರಾರ್ಜಿ ದೇಸಾಯಿ ಶಾಲೆಯ ಪೃಥ್ವಿರಾಜ್ ಆರ್ ಎಸ್ ಅವರು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
ಎರಡು ದಿನದ ಕ್ರೀಡಾಕೂಟದಲ್ಲಿ 4 ಮಂದಿ ದಾಖಲೆ ನಿರ್ಮಾಣ
ಎರಡು ದಿನದ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಸಹಿತ ಇತರ ಜಿಲ್ಲೆಯ ಒಟ್ಟು ನಾಲ್ವರು ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ. ಶಿರಸಿ ಜಿಲ್ಲೆಯ ಧನ್ಯಾ ಸಿ ನಾಯ್ಕ್ ಅವರು ಹ್ಯಾಮರ್ ಎಸೆತದಲ್ಲಿ ಈ ಹಿಂದೆ 2022ರಲ್ಲಿ ಮೈಸೂರಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ತನ್ನದೇ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ. ಕಳೆದ ವರ್ಷ ಆಕೆ 38.90 ಮೀಟರ್ ದೂರ ಹೇಮರ್ ಎಸೆದಿದ್ದರು. ಈ ವರ್ಷದ ಕ್ರೀಡಾಕೂಟದಲ್ಲಿ 43.34 ಮೀಟರ್ ದೂರ ಹ್ಯಾಮರ್ ಎಸೆದು ದಾಖಲೆ ನಿರ್ಮಿಸಿದ್ದಾರೆ. 1500 ಮೀಟರ್ ಓಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಚರಿಷ್ಮಾ ಅವರು ಈ ಹಿಂದಿನ 2017ರಲ್ಲಿ ಬೆಂಗಳೂರು ನಾರ್ತ್‌ನ ಅರ್ಪಿತಾ ಬಿ ಅವರ ೦4.58.19 ಸೆಕೆಂಡ್ ವೇಗವನ್ನು ಮುರಿದು 04.55.10 ಸೆಕೆಂಡ್ ವೇಗದ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಹುಡುಗರ ವಿಭಾಗದಲ್ಲಿ ಜಾವಲಿನ್ ತ್ರೋದಲ್ಲಿ ಬೀದರ್‌ನ ಪುಷ್ಪಕ್ ನೆಲ್ವಾಡೆ ಅವರು 2016ರಲ್ಲಿ ಬಳ್ಳಾರಿಯ ಸುನಿಲ್ ಕುಮಾರ್ ಬಿ ಅವರ 53.೦೦ ಮೀಟರ್ ದೂರಕ್ಕಿಂತ 57.೦6 ಮೀಟರ್ ದೂರ ಎಸೆದು ಹೊಸ ದಾಖಲೆ ಬರೆದಿದ್ದಾರೆ. ಹುಡುಗರ 800 ಮೀಟರ್ ಓಟದಲ್ಲಿ ವಿದ್ಯಾನಗರದ ಸವೇದ್ ಶಬೀರ್ ಅವರು 2016 ಉಡುಪಿಯ ದಿನೇಶ್ ಎಮ್ ನಾಯಕ್ ಅವರ ೦2.೦೦.76 ಸೆಕಂಡ್‌ನ ವೇಗವನ್ನು ಮುರಿದು 01.57.56ಸೆಕೆಂಡ್ ವೇಗದ ದಾಖಲೆ ನಿರ್ಮಾಣ ಮಾಡಿದ್ದಾರೆ.