ಡಿ.12: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ

0

ದೇವಳದ 18 ಎಕ್ರೆ ಜಾಗ ರಂಗೋಲಿ, ಹಣತೆ ಬೆಳಕಿನಿಂದ ಕಂಗೊಳಿಸಲಿದೆ

ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಲಕ್ಷ ದೀಪೋತ್ಸವವು ಡಿ.12 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಂಯೋಜನೆಯೊಂದಿಗೆ ನಡೆಯಲಿದ್ದು, ದೇವಳದ 18 ಎಕ್ರೆ ಜಾಗದಲ್ಲಿ ರಂಗೋಲಿ ಬಿಡಿಸಿ, ಹಣತೆಯ ಬೆಳಗಿಸಲಾಗುವುದು.
ಪ್ರಮುಖವಾಗಿ ಧಾರ್ಮಿಕ ಶಿಕ್ಷಣ ಯೋಜನೆಯ ವಿದ್ಯಾರ್ಥಿಗಳಿಂದ ಶ್ರೀ ಮಹಾಲಿಂಗೇಶ್ವರ ದೇವರಿಗೆ ದೀಪ ನಮನ ಹಾಗೂ ಧಾರ್ಮಿಕ ಸತ್ಸಂಗವು ಶ್ಲೋಕ, ಭಜನೆ, ಆಚಾರ ವಿಚಾರ ಪ್ರಸ್ತುತಿಯೊಂದಿಗೆ ನಡೆಯಲಿದೆ. ಧಾರ್ಮಿಕ ಶಿಕ್ಷಣ ಪಡೆಯುತ್ತಿರುವ ಎಲ್ಲಾ ಶಿಕ್ಷಣಾರ್ಥಿಗಳು ತಲಾ 48 ದೀಪಗಳನ್ನು ಹಚ್ಚಿ ದೇವರಿಗೆ ದೀಪ ನಮನ ಮಾಡಲಿದ್ದಾರೆ. ರಥಮ೦ದಿರದ ಬಳಿ ಕುಂಬಾರರ ಗುಡಿ ಕೈಗಾರಿಕೆಯ ಸ್ಟಾಲ್ ಮಾಡಲಾಗುತ್ತಿದ್ದು, ರೂ. 2 ರಂತೆ ಹಣತೆಯು ಭಕ್ತರಿಗೆ ಲಭ್ಯವಾಗಲಿದೆ. ಎಣ್ಣೆ ಮತ್ತು ಬತ್ತಿಯನ್ನು ದೇವಳದ ವತಿಯಿಂದ ಒದಗಿಸಲಾಗುತ್ತದೆ. ದೀಪೋತ್ಸವದಲ್ಲಿ ಭಾಗವಹಿಸುವ ಎಲ್ಲಾ ಭಕ್ತಾಧಿಗಳು ಸಾಂಪ್ರದಾಯಿಕ ಉಡುಗೆ ತೊಡುಗೆಯನ್ನು ಧರಿಸುವಂತೆ ಹಾಗೂ ಡಿ.10 ರಂದು ರವಿವಾರ ಬೆಳಗ್ಗೆ 7 ರಿಂದ ದೇವಳದ ವಠಾರ ಸ್ವಚ್ಛತೆಯಲ್ಲಿ ಪಾಲ್ಗೊಳ್ಳುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶಪ್ರಸಾದ್ ಮುಳಿಯ ಮತ್ತು ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ವಿನಂತಿಸಿದ್ದಾರೆ.


ಲಕ್ಷ ಬಿಲ್ವಾರ್ಚನೆ, ಉತ್ಸವ:
ಬೆಳಿಗ್ಗೆ ದೇವಳದ ಒಳಾಂಗಣದಲ್ಲಿ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮ ನಡೆಯಲಿದೆ. ರಾತ್ರಿ ರಾತ್ರಿ 7.30ಕ್ಕೆ ದೇವರ ಪೂಜೆಯ ಬಳಿಕ ದೇವರ ಉತ್ಸವ ಬಲಿ ಹೊರಡಲಿದೆ. ಒಳಾಂಗಣ ಹಾಗೂ ಹೊರಾಂಗಣದಲ್ಲಿ ತಂತ್ರ ಸುತ್ತು, ರಾಜಾಂಗಣದಲ್ಲಿ ಉಡಿಕೆ ಸುತ್ತು, ಚೆಂಡೆ ಸುತ್ತು ನಡೆಯಲಿದೆ. ಬಳಿಕ ಖಂಡನಾಯಕನ ಕಟ್ಟೆಯಲ್ಲಿ ಕಟ್ಟೆ ಪೂಜೆ ನಡೆಯುತ್ತದೆ. ವಾದ್ಯ, ಭಜನೆ, ಬ್ಯಾಂಡ್, ಸರ್ವವಾದ್ಯ ಸುತ್ತುಗಳು ನಡೆದು ಚಂದ್ರಮಂಡಲ ಉತ್ಸವ ನಡೆಯುತ್ತದೆ. ದೇವರು ಚಂದ್ರಮಂಡಲದಿಂದ ಇಳಿದು ತೆಪ್ಪೋತ್ಸವಕ್ಕಾಗಿ ಪುಷ್ಕರಿಣಿಯತ್ತ ಸವಾರಿ ಹೋಗುತ್ತಾರೆ. ಕೆರೆಯ ಮುಂಭಾಗದ ಕಟ್ಟೆಯಲ್ಲಿ ಕುಳಿತು ಕಟ್ಟೆ ಪೂಜೆ ಸ್ವೀಕರಿಸಿ ಬಳಿಕ ತೆಪ್ಪದಲ್ಲಿ ದೇವರನ್ನು ಕುಳ್ಳಿರಿಸಿ ಕೆರೆಯಲ್ಲಿ 3 ಸುತ್ತು ಉತ್ಸವ ನಡೆಯುತ್ತದೆ. ತೆಪ್ಪದಿಂದ ಇಳಿದ ಬಳಿಕ ಪೂರ್ವ ಬಾಗಿಲಿನಿಂದ ದೇವರು ಒಳ ಪ್ರವೇಶಿಸುತ್ತಾರೆ.

ನಾಳೆ ಡಿ.9ಕ್ಕೆ ಭಕ್ತರ ಸಭೆ:
ಡಿ.9 ರಂದು ಸಂಜೆ ಭಕ್ತಾದಿಗಳ ಸಭೆಯನ್ನು ದೇವಳದ ಆಡಳಿತ ಮಂಡಳಿಯ ಸಭಾಂಗಣದಲ್ಲಿ ನಡೆಸಿ ಕಾರ್ಯಕ್ರಮಕ್ಕೆ ಅಂತಿಮ ರೂಪುರೇಷೆ ನೀಡುವುದು ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್ ತಿಳಿಸಿದ್ದಾರೆ.

ಶಿವದೂತೆ ಗುಳಿಗೆ ನಾಟಕ
ಡಿ.11 ರಂದು ರಾತ್ರಿ 8 ಗಂಟೆಗೆ ದೇವಸ್ಥಾನದ ವತಿಯಿಂದ ಶಿವಧೂತೆ ಗುಳಿಗೆ ತುಳು ನಾಟಕ ಪ್ರದರ್ಶನವನ್ನು ಸಂಯೋಜಿಸಲಾಗಿದೆ. ದೇವಳದ ದೇವರಮಾರು ಗದ್ದೆಯಲ್ಲಿ ನಾಟಕ ಪ್ರದರ್ಶನ ನಡೆಯಲಿದೆ. ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಅವರ ನಿರ್ದೇಶನದಲ್ಲಿ ಕಲಾಸಂಗಮ ಕಲಾವಿದರಿಂದ ನಾಟಕ ಪ್ರದರ್ಶನಗೊಳ್ಳಲಿದೆ.

18 ಎಕ್ರೆಯಲ್ಲಿ ದೀಪ
ವಿವಿಧ ಮಮ ಪರಿವಾರದ ಸದಸ್ಯರು, ಯೋಗ ಶಿಕ್ಷಣದ ಸದಸ್ಯರು, ನಿತ್ಯ ಕರಸೇವಕರು, ಭಜನಾ ಮಂಡಳಿಗಳು, ವೇದ ಸಂವರ್ಧನ ಸಮಿತಿ, ಆರ್ಟ್ ಆಫ್ ಲಿವಿಂಗ್, ವಿವಿಧ ವಾಣಿಜ್ಯ ಸಂಘ ಸಂಸ್ಥೆಗಳು ಹಾಗೂ ಭಕ್ತಾಭಿಮಾನಿಗಳು ಒಟ್ಟು ಸೇರಿ ದೇವಳದ ಆವರಣದ 18 ಎಕರೆ ಜಾಗದಲ್ಲಿ ರಂಗೋಲಿ ಬಿಡಿಸಿ ಹಣತೆಯ ದೀಪ ಬೆಳಗಿಸಲಿದ್ದಾರೆ.

LEAVE A REPLY

Please enter your comment!
Please enter your name here