* ಧರ್ಮವೆನ್ನುವುದು ಜೀವನ ರಥದ ಪಥ-ಒಡಿಯೂರು ಶ್ರೀ
* ಹಿಂದೂ ಧರ್ಮದ ಕ್ಷಾತ್ರ ತೇಜಸ್ಸಿನ ಪ್ರಭಾವ ಅಪಾರ-ಮಾಣಿಲ ಶ್ರೀ
* ನಾವು ಧರ್ಮವನ್ನು ರಕ್ಷಿಸಿದಾಗ ಅದು ನಮ್ಮನ್ನು ರಕ್ಷಿಸುತ್ತದೆ-ಕಣಿಯೂರು ಶ್ರೀ
* ಸಮಾಜ ಬೆಳೆಯಲು ಉತ್ತಮ ಭಾವನೆ ಅಗತ್ಯ-ಶ್ರೀ ಕೃಷ್ಣ ಗುರೂಜಿ
ಪುತ್ತೂರುನಿಂದ ಬೃಹತ್ ಪಾದಯಾತ್ರೆ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಗೆ ಪಾದಯಾತ್ರೆ ನಡೆಯಿತು.ವಿಟ್ಲ ಜೈನ ಬಸದಿ ಬಳಿಯಲ್ಲಿ ಪಾದಯಾತ್ರೆಯನ್ನು ಸ್ವಾಗತಿಸಲಾಯಿತು. ಬಳಿಕ ಚೆಂಡೆಮೇಳದೊಂದಿಗೆ ಪಾದಯಾತ್ರೆ ವಿಟ್ಲ ಶ್ರೀ ಪಂಚಲಿಂಗೇಶ್ವರ ಕ್ಷೇತ್ರ ತಲುಪಿತು.ವಿಟ್ಲ ರಥದ ಗದ್ದೆಯಲ್ಲಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ನಡೆಯಿತು. ಇದೇ ಸಂದರ್ಭದಲ್ಲಿ ಭಜನೆ ನಡೆಯಿತು.ನೂರಾರು ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿಟ್ಲ:ಇದೊಂದು ಸಂತಸ ತುಂಬುವ ಸಮಯ. ಬದುಕಲ್ಲಿ ಭಾರತೀಕರಣ ಬೇಕು, ಆಗ ಬದುಕು ಬದುಕಾಗುತ್ತದೆ. ಜೀವನ ರಥಕ್ಕೊಂದು ಪಥವೆಂದಿದ್ದರೆ ಅದು ಧರ್ಮ. ಧರ್ಮದ ಅನುಷ್ಠಾನದಲ್ಲಿ ಬದುಕಬೇಕು.ಪುತ್ತಿಲ ಓರ್ವ ಶ್ರಮಜೀವಿ. ಹಿಂದೂ ಸಮಾಜಕ್ಕೆ ತೊಂದರೆಯಾದರೆ ಮುಂಚೂಣಿಯಲ್ಲಿರುವವರು ಪುತ್ತಿಲ. ಶನಿ ವಿಮೋಚನೆಗೆ ಅರಾಧನೆ ಮುಖ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಶನಿವಾರ ವಿಟ್ಲ ಶ್ರೀ ಪಂಚಲೀಂಗೇಶ್ವರ ದೇವಸ್ಥಾನದ ರಥದ ಗದ್ದೆಯಲ್ಲಿ ಪುತ್ತಿಲ ಪರಿವಾರ ಸಾರ್ವಜನಿಕ ಶ್ರೀ ಶನೈಶ್ವರ ಪೂಜಾ ಸಮಿತಿ ವಿಟ್ಲದ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಹಾಗೂ ಬೃಹತ್ ಹಿಂದು ಚೈತನ್ಯ ಸಮಾವೇಶದಲ್ಲಿ ಅವರು ಆಶೀರ್ವಚನ ನೀಡಿದರು.ಮಾನವೀಯ ಮೌಲ್ಯ ವೃದ್ಧಿಸುವ ಕಾರ್ಯವಾಗಬೇಕು. ಧರ್ಮ ಎನ್ನುವಂತದ್ದು ಧಾರಣೆಗೆ ಯೋಗ್ಯವಾದುದು. ಹಿಂದೂ ಸಮಾಜಕ್ಕೆ ಅಪಾಯವಾದಾಗ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು. ಧರ್ಮವನ್ನು ಉಳಿಸುವ ಕೆಲಸ ಎಲ್ಲರಿಂದಲೂ ಆಗಲಿ ಎಂದು ಶ್ರೀಗಳು ಆಶಯ ವ್ಯಕ್ತಪಡಿಸಿದರು.
ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಹಿಂದೂ ಧರ್ಮದ ಕ್ಷಾತ್ರ ತೇಜಸ್ಸಿನ ಪ್ರಭಾವ ಅಪಾರವಾಗಿದೆ.ಹಿಂದೂ ಸಮಾಜದ ಭಾರತೀಯತೆಯನ್ನು ಹಾಗೂ ಭಾರತೀಯ ಮೌಲ್ಯವನ್ನು ಪ್ರತಿಯೋರ್ವ ಹಿಂದೂ ತಿಳಿದುಕೊಳ್ಳಬೇಕು.ನಾವೆಲ್ಲರೂ ಒಂದಾಗಬೇಕಾಗಿರುವುದು ಈ ಚೆತನ್ಯ ಸಮಾವೇಶದ ಉದ್ದೇಶವಾಗಿದೆ. ನಮ್ಮ ಮಕ್ಕಳನ್ನು ಸಂಸ್ಕಾರವಂತರನ್ಮಾಗಿ ಮಾಡುವುದು ಪೋಷಕರ ಕರ್ತವ್ಯ ಎಂದರು.
ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಧರ್ಮವನ್ನು ನಾವು ರಕ್ಷಿಸಿದಾಗ ಅದು ನಮ್ಮನ್ನು ರಕ್ಷಿಸುತ್ತದೆ. ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದೆ. ಸಾಮೂಹಿಕ ಪ್ರಾರ್ಥನೆಯಿಂದ ಎಲ್ಲವನ್ನೂ ಸಾಽಸಲು ಸಾಧ್ಯ. ಪ್ರೀತಿಯಿಂದ ಸಮಾಜವನ್ನು ಗೆಲ್ಲಲು ಸಾಧ್ಯ. ನಮ್ಮ ದೇಶ, ಧರ್ಮದ ರಕ್ಷಣೆಯಲ್ಲಿ ಕೈಜೋಡಿಸೋಣ ಎಂದರು.
ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರು ಆಶೀರ್ವಚನ ನೀಡಿ, ಪ್ರೀತಿಭಾವದಿಂದ ಎಲ್ಲವನ್ನು ಗೆಲ್ಲಲು ಸಾಧ್ಯ. ಸಮಾಜ ಬೆಳೆಯಲು ಉತ್ತಮ ಭಾವನೆ ಅಗತ್ಯ. ಅರುಣ್ ಕುಮಾರ್ ಪುತ್ತಿಲ ವ್ಯಕ್ತಿಯಲ್ಲ ಅವರೊಂದು ಶಕ್ತಿ. ಆ ಶಕ್ತಿಯನ್ನು ಬೆಳೆಸುವ ಅನಿವಾರ್ಯತೆ ನಮ್ಮ ಮೇಲಿದೆ.ಹಿಂದೂ ಧರ್ಮಕ್ಕೆ ಅಪಚಾರವಾದರೆ ಎದೆಕೊಟ್ಟು ಮುನ್ನುಗ್ಗೋಣ ಎಂದರು.ಕಾರ್ಕಳದ ಅಕ್ಷಯ ಗೋಖಲೆ ದಿಕ್ಸೂಚಿ ಭಾಷಣ ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಜಾ ಸಮಿತಿಯ ಅಧ್ಯಕ್ಷ ಶ್ರೀಕೃಷ್ಣ ಕೇಪು ವಹಿಸಿದ್ದರು.
ವಿಟ್ಲ ಯೋಗೀಶ್ವರ ಮಠದ ಶ್ರೀ ಶ್ರದ್ಧಾನಾಥಜೀ, ವಿಟ್ಲ ಶ್ರೀ ಪಂಚಲೀಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರ ವಿಟ್ಲ ಅರಮನೆಯ ಅರಸರಾದ ಬಂಗಾರು ಅರಸರು, ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಕನ್ಯಾನ ಭಾರತ ಸೇವಾಶ್ರಮದ ಎಸ್.ಈಶ್ವರ ಭಟ್, ಉದ್ಯಮಿಗಳಾದ ಶ್ರೀಧರ ಶೆಟ್ಟಿ ಗುಬ್ಯ, ಉದ್ಯಮಿ ಕಿರಣ್ಚಂದ್ರ ಧರ್ಮಸ್ಥಳ, ಪುತ್ತೂರು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಪುತ್ತಿಲ ಪರಿವಾರ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿ ವಿಟ್ಲ ಇದರ ಗೌರವಾಧ್ಯಕ್ಷರಾದ ಕೃಷ್ಣಯ್ಯ ಕೆ. ವಿಟ್ಲ, ಸುಬ್ರಹ್ಮಣ್ಯ ಭಟ್ ಸೇರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುತ್ತಿಲ ಪರಿವಾರ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿ ವಿಟ್ಲದ ಸಂಚಾಲಕ ಸದಾಶಿವ ಅಳಿಕೆ ಸ್ವಾಗತಿಸಿದರು. ಪುತ್ತಿಲ ಪರಿವಾರ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿ ವಿಟ್ಲ ಇದರ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಮರುವಾಳ ವಂದಿಸಿದರು. ಸಂಕೇತ್ ಶೆಟ್ಟಿ, ನಮಿತಾ ಕಾರ್ಯಕ್ರಮ ನಿರೂಪಿಸಿದರು.