ಡಾ.ರಾಮಚಂದ್ರ ಗುರೂಜಿಯವರಿಂದ ಪುತ್ತೂರಿನಲ್ಲಿ ಮೊದಲ ಬಾರಿಗೆ ಅಂತರ್ಮನಸ್ಸಿನ ವಿಸ್ಮಯ ಶಕ್ತಿಗಳ ಬಗೆಗೆ ವಿಶೇಷ ಕಾರ್ಯಕ್ರಮ
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಸಿಬಿಎಸ್‌ಇ ಶಿಕ್ಷಣ ಸಂಸ್ಥೆಯಾದ ಅಂಬಿಕಾ ವಿದ್ಯಾಲಯ ಹೊಸತನ ಹಾಗೂ ವಿನೂತನ ಕಲ್ಪನೆಗಳ ಸಾಕಾರಕೇಂದ್ರವೆನಿಸಿದೆ. ಪುತ್ತೂರಿನ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಮೊದಲುಗಳನ್ನು ಈ ಸಂಸ್ಥೆ ಹುಟ್ಟುಹಾಕಿದೆ. ಪುತ್ತೂರು ತಾಲೂಕಿನಲ್ಲಿನ ಶಿಕ್ಷಣ ಸಂಸ್ಥೆಗಳ ಪೈಕಿ ಈಜು ಕೊಳ ಹೊಂದಿರುವ ಏಕೈಕ ಶಿಕ್ಷಣ ಸಂಸ್ಥೆ ಅಂಬಿಕಾ ವಿದ್ಯಾಲಯ. ಅಂತೆಯೇ ನಿಗದಿತ ಪಠ್ಯದೊಂದಿಗೆ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ಕೊಡುವ, ಬದುಕಿನ ಅನುಭವ ಕಟ್ಟಿಕೊಡುವ ಕಾರ್ಯದಲ್ಲೂ ಅಂಬಿಕಾ ಸಂಸ್ಥೆ ತೊಡಗಿಕೊಂಡಿದೆ. ಹಾಗಾಗಿ ಇಲ್ಲಿ ಪ್ರಿ ಕೆಜಿ – ಎಲ್.ಕೆ.ಜಿ ತರಗತಿಗೆ ದಾಖಲಾತಿ ಹೊಂದುವ ವಿದ್ಯಾರ್ಥಿಯೊಬ್ಬ ಆ ವರ್ಷದಿಂದಲೇ ಜೀವನ ಶಿಕ್ಷಣವನ್ನೂ ಕರಗತ ಮಾಡಿಕೊಳ್ಳುತ್ತಾನೆ ಎಂಬುದು ವಿಶೇಷ.
ಧಾರ್ಮಿಕ ಚಿಂತನೆ, ಶೈಕ್ಷಣಿಕ ಸಾಧನೆ ಮತ್ತು ರಾಷ್ಟ್ರಭಕ್ತಿ ಉದ್ದೀಪನಗೊಳಿಸುವ ಸಮಗ್ರ ಶಿಕ್ಷಣವನ್ನು ಜಾರಿಗೊಳಿಸಿರುವ ಅಂಬಿಕಾ ವಿದ್ಯಾಲಯ ಇದೀಗ ತನ್ನ ಹತ್ತನೆಯ ವರ್ಷದ ಸಂಭ್ರಮದಲ್ಲಿದೆ. ಆ ಪ್ರಯುಕ್ತ ’ದಶಾಂಬಿಕೋತ್ಸವ’ ಹೆಸರಿನಲ್ಲಿ ವರ್ಷಪೂರ್ತಿ ನಾನಾ ಬಗೆಯ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ತದಂಗವಾಗಿ ಡಿ.16ರಂದು ಖ್ಯಾತ ಸಂಮೋಹಿನಿ ತಜ್ಞ, ಕುಂಡಲಿನಿ ಯೋಗ ಗುರು, ಬೆಂಗಳೂರಿನ ಡಾ.ರಾಮಚಂದ್ರ ಗುರೂಜಿಯವರಿಂದ ಒಂದು ದಿನದ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಂತರ್ಮನಸ್ಸಿನ ವಿಸ್ಮಯ ಶಕ್ತಿಗಳು ಎಂಬ ವಿಷಯದಲ್ಲಿ ಡಾ.ಗುರೂಜಿಯವರು ಪ್ರಾತ್ಯಕ್ಷತೆ ನಡೆಸಿಕೊಡಲಿದ್ದಾರೆ.
ಡಾ.ರಾಮಚಂದ್ರ ಗುರೂಜಿ:
ಡಾ ಶ್ರೀ ರಾಮಚಂದ್ರ ಗುರೂಜಿ ಅವರು ಅಂತರಾಷ್ಟ್ರೀಯವಾಗಿ ಪ್ರಸಿದ್ಧ ಆಧ್ಯಾತ್ಮಿಕ ಗುರುಗಳು ಮತ್ತು ಪೂರ್ವಜನ್ಮದೆಡೆಗಿನ ಹಿನ್ನೋಟ, ಮನಃಶಾಸ್ತ್ರೀಯ-ಆಧ್ಯಾತ್ಮಿಕ ಹಿಪ್ನೋಥೆರಪಿ, ಹೀಲಿಂಗ್ ಮತ್ತು ಹನುಮಾನ್ ಚಾಲೀಸಾದಲ್ಲಿ ಸಿದ್ಧಪುರುಷರೆನಿಸಿದ್ದಾರೆ. ಅವರು ನಾನಾ ಬಗೆಯ ಚಿಕಿತ್ಸೆ ಮತ್ತು ಮನಃವಿಶ್ರಾಂತಿ ತಂತ್ರಗಳನ್ನು ಕಂಡುಹಿಡಿದಿದ್ದಾರೆ ಮತ್ತು ಪರಿಚಯಿಸಿದ್ದಾರೆ. 10,000 ಕ್ಕೂ ಹೆಚ್ಚು ಜನರಿಗೆ ಪೂರ್ವಜನ್ಮ ಹಿನ್ನೋಟಗಳನ್ನು ನಡೆಸಿಕೊಟ್ಟಿದ್ದಾರೆ ಮತ್ತು ಆ ಬಗೆಗೆ ಪ್ರಪಂಚದಾದ್ಯಂತ 2000ಕ್ಕೂ ಹೆಚ್ಚು ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಅವರ ಈ ಕಾರ್ಯಾಗಾರಗಳಿಂದ ಲಕ್ಷಾಂತರ ಜನರು ಪ್ರಯೋಜನ ಪಡೆದಿದ್ದಾರೆ. ಸ್ವಯಂ ಹಿಪ್ನಾಸಿಸ್, ಗುರಿ ನಿಗದಿ, ಸಮ್ಮೋಹಿನಿ=ಸಂಜೀವಿನಿ, ಕರ್ಮ ಚಿಕಿತ್ಸೆ, ಧ್ಯಾನಂ ಸರ್ವತ್ರ ಸಾಧನಂ, ಜೀನ್ ಥೆರಪಿ, ಸೋಲ್ ಹೀಲಿಂಗ್, ಪೇರೆಂಟಿಂಗ್ ಕಲೆ, ಆರ್ಥಿಕ ಸಮೃದ್ಧಿ, ಹನುಮಾನ್ ಚಾಲೀಸಾ ಮತ್ತು ಆಕರ್ಷಣಾ ನಿಯಮ ಮುಂತಾದ ವಿವಿಧ ವಿಷಯಗಳ ಕುರಿತು ಅಸಂಖ್ಯಾತ ಏಕದಿನ ಕಾರ್ಯಾಗಾರಗಳನ್ನು ನಡೆಸಿರುವ ಕೀರ್ತಿ ಗುರೂಜಿಯವರಿಗೆ ಸಲ್ಲುತ್ತದೆ. ಇಷ್ಟಲ್ಲದೆ, ಗುರೂಜಿಯವರು ಯೋಗಾಸಫಿ (ಯೋಗ ಸಂಸ್ಥೆ) ಅಂ, ಗೌರವ ನಿರ್ದೇಶಕರಾಗಿದ್ದಾರೆ. ಭಾರತದಲ್ಲಿ ಮತ್ತು ಭಾರತದ ಹೊರಗೆ ಅಸಂಖ್ಯ ಉಪನ್ಯಾಸಗಳನ್ನಿತ್ತ ಅನುಭವಿ. ವಾಷಿಂಗ್ಟನ್ ಡಿಸಿ, ಚಿಕಾಗೋ, ಲಾಸ್ ಏಂಜಲೀಸ್, ಪೆನ್ಸಿಲ್ವೇನಿಯಾ, ಟೆಕ್ಸಾಸ್, ದುಬೈ, ಅಬುಧಾಬಿ, ಸಿಂಗಾಪುರ್, ಮಲೇಷ್ಯಾ, ಶ್ರೀಲಂಕಾ ಮುಂತಾದ ಅನೇಕ ಸ್ಥಳಗಳಲ್ಲಿ ಬೃಹತ್ ಸಭೆಗಳ ಮುಂದೆ ಭಾರತೀಯತೆಯನ್ನು ಪಸರಿಸಿದ ಹೆಮ್ಮೆ ಗುರೂಜಿಯವರದ್ದು. ತನ್ನ ಆಧ್ಯಾತ್ಮಿಕ ಅನ್ವೇಷಣೆಗಾಗಿ ಅಲ್ಪ ಸಮಯಗಳ ಕಾಲ ಹಿಮಾಲಯದಲ್ಲಿ ವಾಸ್ತವ್ಯವಿದ್ದ ಗುರೂಜಿಯವರು ತಮ್ಮ ಬದುಕನ್ನೇ ಯೋಗ – ಧ್ಯಾನ, ಅಂತರ್ಮನಸ್ಸಿನ ಶಕ್ತಿಗಳ ಅನಾವರಣಕ್ಕಾಗಿ ಮುಡಿಪಾಗಿಟ್ಟವರು. ಇದೀಗ ಪುತ್ತೂರಿನಲ್ಲಿ ಮೊದಲ ಬಾರಿ ಅಂಬಿಕಾ ವೇದಿಕೆಯಲ್ಲಿ ಅವರ ಪ್ರಾತ್ಯಕ್ಷತೆ ನಡೆಯುತ್ತಿದೆ.
ಹೆತ್ತವರಿಗಾಗಿ ಹಾಗೂ ಸಾರ್ವಜನಿಕರಿಗಾಗಿ ವಿಶೇಷ ಕಾರ್ಯಕ್ರಮ:
ನಮ್ಮ ಮಕ್ಕಳು ಸಂಸ್ಕಾರವಂತರಾಗಬೇಕು, ಸಂಸ್ಕೃತಿಯ ರಾಯಭಾರಿಗಳಾಗಬೇಕೆಂಬ ಕನಸು ನಮ್ಮೆಲ್ಲರಲ್ಲೂ ಇದೆ. ಬೆಳಗ್ಗೆದ್ದು ಶಾಲೆಗೆ ಹೊರಡುವ ಮುನ್ನ ನಮ್ಮ ಮಕ್ಕಳು ಬಂದು ಹಿರಿಯರ ಕಾಲು ಹಿಡಿದು ಆಶೀರ್ವಾದ ಬೇಡುವುದು, ಹೆತ್ತವರನ್ನು ಅಪರಿಮಿತವಾಗಿ ಪ್ರೀತಿಸುವುದು, ಹಿಂದೂ ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆಯನ್ನು ಪಠಿಸುವುದು, ಭಜನೆ – ಸತ್ಸಂಗಗಳಲ್ಲಿ ತೊಡಗುವುದು, ಯೋಗ ಧ್ಯಾನಗಳಿಗೆ ಸಮಯ ಮೀಸಲಿರಿಸುವುದು ಇತ್ಯಾದಿಗಳೊಂದಿಗೆ ನಮ್ಮ ಮಕ್ಕಳು ಬೆಳೆದರೆ ಅದನ್ನು ಕಾಣುವುದೇ ನಮ್ಮ ಸೌಭಾಗ್ಯ. ಆದರೆ ಇವೆಲ್ಲವೂ ನಮ್ಮ ಮಕ್ಕಳಲ್ಲಿ ರಕ್ತಗತವಾಗಿ ಬೆಳೆದುಬರಬೇಕಿದ್ದರೆ ಅವರಿಗೊಂದು ಮಾದರಿ, ಆದರ್ಶಗಳು ಬೇಕಿವೆ. ಹೆತ್ತವರು ಇಂತಹ ಸದಸದ್ವಿಚಾರಗಳಲ್ಲಿ ತೊಡಗಿಕೊಂಡಾಗ ಸಹಜವಾಗಿಯೇ ಆ ಸಂಸ್ಕಾರ ಮಕ್ಕಳಲ್ಲಿ ಒಡಮೂಡಲಾರಂಭಿಸುತ್ತದೆ. ಆದ್ದರಿಂದ ತಮ್ಮ ಮಕ್ಕಳ ವ್ಯಕ್ತಿತ್ವ ರೂಪುಗೊಳಿಸುವಿಕೆಯ ನೆಲೆಯಿಂದ ಹೆತ್ತವರು ’ಆದರ್ಶ’ರಾಗಬೇಕಿದೆ. ಹೆತ್ತವರು ಮಕ್ಕಳ ಕಣ್ಣಿನಲ್ಲಿ ದೊಡ್ಡವರಾದಾಗ ಮಾತ್ರ ಮಕ್ಕಳು ದೊಡ್ಡವರಾದಾಗಲೂ ಹೆತ್ತವರ ಬಗೆಗಿನ ಗೌರವಾದರಗಳು ನಿರಂತರವಾಗಿ ಉಳಿದುಕೊಳ್ಳುವುದಕ್ಕೆ ಸಾಧ್ಯ. ಈ ನಿಟ್ಟಿನಲ್ಲಿ ಹಾಗೂ ಧರ್ಮ ಜಾಗೃತಿ ಮೂಡಿಸುವ ಸದುದ್ದೇಶದೊಂದಿಗೆ ಸಮಾಜದಲ್ಲಿನ ಪೋಷಕರಿಗಾಗಿ ಮತ್ತು ಪುತ್ತೂರಿನ ಧರ್ಮಪ್ರೇಮಿ ನಾಗರಿಕರಿಗಾಗಿ ಡಾ. ಶ್ರೀ ರಾಮಚಂದ್ರ ಗುರೂಜಿಯವರು ಮಾರ್ಗದರ್ಶನ ನೀಡಲಿದ್ದಾರೆ. ನಾವು ಯಾವ ರೀತಿ ಸಿದ್ಧರಾದಾಗ ನಮ್ಮ ಮಕ್ಕಳು ನಮ್ಮನ್ನು ಅನುಸರಿಸುತ್ತಾರೆಂಬ ಮಾರ್ಗದರ್ಶನವನ್ನು ಗುರೂಜಿಯವರಿಂದ ಹೆತ್ತವರು ಪಡೆದುಕೊಳ್ಳುವುದಕ್ಕೆ ಸಾಧ್ಯವಿದೆ. ಹಾಗೆಯೇ ನಮ್ಮೊಳಗಿನ ವಿಸ್ಮಯ ಶಕ್ತಿಗಳೇನು, ಸಾಧನೆಯೆಡೆಗೆ ಹೆಜ್ಜೆ ಇಡುವಲ್ಲಿ ಅನುಸರಿಸಬೇಕಾದ ಪಥಗಳು ಯಾವುವು ಮೊದಲಾದ ಸಂಗತಿಗಳ ಬಗೆಗೆ ಗುರೂಜಿಯವರು ಬೆಳಕು ಚೆಲ್ಲಲಿದ್ದಾರೆ.
ಡಿಸೆಂಬರ್ 16 ಶನಿವಾರ ಸಂಜೆ 4.30ರಿಂದ 7ರವರೆಗೆ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಮಾಜದ ಸಜ್ಜನ ಬಂಧುಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಯೋಜನ ಪಡೆದುಕೊಳ್ಳುವಂತೆ ಕೇಳಿಕೊಳ್ಳಲಾಗಿದೆ.
ಕಾರ್ಯಕ್ರಮಕ್ಕೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿಗಳಾದ ರಾಜಶ್ರೀ ಎಸ್ ನಟ್ಟೋಜ, ದಶಾಂಬಿಕೋತ್ಸವ ಸಮಿತಿ ಅಧ್ಯಕ್ಷರಾದ, ಹಿರಿಯ ನ್ಯಾಯವಾದಿ ಮಹೇಶ್ ಕಜೆ, ಅಂಬಿಕಾ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ, ನ್ಯಾಯವಾದಿ ಸೀಮಾ ನಾಗರಾಜ್, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.