ಮಾದಕ ವ್ಯಸನಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ: ಸದನದಲ್ಲಿ ಅಶೋಕ್ ಕುಮಾರ್ ರೈ ಆಗ್ರಹ- ಮಾದಕ ವ್ಯಸನಿಗಳ ವಿರುದ್ಧ ಯುದ್ದವನ್ನೇ ಸಾರಿದ್ದೇವೆ-ಡಾ|ಪರಮೇಶ್ವರ್

0

ಪುತ್ತೂರು:ಮಾದಕ ವ್ಯಸನಿಗಳು ಸಮಾಜ ಕಂಠಕರಾಗುತ್ತಿದ್ದಾರೆ,ಯುವ ಪೀಳಿಗೆ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದೆ,ಇದು ಅತ್ಯಂತ ಗಂಭೀರ ವಿಚಾರವಾಗಿದ್ದು ಹೀಗೇ ಮುಂದುವರಿದರೆ ವ್ಯಸನಿಗಳಿಂದ ಇಡೀ ರಾಜ್ಯಕ್ಕೆ, ದೇಶಕ್ಕೇ ತೊಂದರೆ ಉಂಟಾಗಬಹುದು,ಸಮಾಜವನ್ನು ಹಾಳು ಮಾಡುತ್ತಿರುವ ಇಂಥವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈಯವರು ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಸರಕಾರವನ್ನು ಆಗ್ರಹಿಸಿದ್ದಾರೆ.ರಾಜ್ಯದಲ್ಲಿ ಮಾದಕ ವ್ಯಸನಿಗಳ ವಿರುದ್ಧ ಸರಕಾರ ಯುದ್ಧವನ್ನೇ ಸಾರಿದೆ ಎಂದು ಗೃಹ ಸಚಿವ ಡಾ|ಜಿ.ಪರಮೇಶ್ವರ್ ಹೇಳಿದರು.

ರಾಜ್ಯದಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ,ಯುವ ಸಮೂಹ ಇದಕ್ಕೆ ಬಲಿಯಾಗುತ್ತಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 147 ಪೆಡ್ಲರ್‌ಗಳ ವಿರುದ್ದ ಮತ್ತು 528 ಮಂದಿ ಮಾದಕ ವ್ಯಸನಿಗಳ ವಿರುದ್ದ ಪ್ರಕರಣ ದಾಖಲಾಗಿದೆ.ಪುತ್ತೂರಿನಲ್ಲಿ 26 ಪ್ರಕರಣಗಳು ದಾಖಲಾಗಿವೆ.ಇದನ್ನು ನಿಯಂತ್ರಣ ಮಾಡಲು ಸರಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಶೋಕ್ ಕುಮಾರ್ ರೈ ಆಗ್ರಹಿಸಿದರು.

ವ್ಯಸನ ಮುಕ್ತ ಕೇಂದ್ರಗಳನ್ನು ಆರಂಭಿಸಿ:
ರಾಜ್ಯದ ಪ್ರತೀ ತಾಲೂಕುಗಳಲ್ಲಿ ಡಿ ಎಡಿಕ್ಷನ್ ಸೆಂಟರ್‌ಗಳನ್ನು ಆರಂಭಿಸಿ ಮಾದಕ ವ್ಯಸನಿಗಳಿಗೆ ಚಿಕಿತ್ಸೆಯನ್ನು ನೀಡಬೇಕಿದೆ.ಪೊಲೀಸ್ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು.ನಿರ್ಜನ ಪ್ರದೇಶಗಳ ಬಗ್ಗೆ ಪೊಲೀಸರು ಹೆಚ್ಚು ನಿಗಾ ಇಡಬೇಕು, ಕೆಲವು ಕಡೆಗಳಲ್ಲಿ ವೆಂಟೆಡ್ ಡ್ಯಾಮ್‌ಗಳ ಬಳಿ ಈ ವ್ಯವಹಾರಗಳು ಹೆಚ್ಚಾಗಿ ನಡೆಯುತ್ತಿವೆ.ಇದೆಲ್ಲವನ್ನೂ ತಡೆಗಟ್ಟುವ ಮೂಲಕ ಪೊಲೀಸ್ ಇಲಾಖೆ ಮಾದಕ ವ್ಯಸನಿಗಳ ಬೇಟೆಯಾಡಬೇಕು ಎಂದು ಶಾಸಕ ರೈ ಆಗ್ರಹಿಸಿದರು.

ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಮಾಡಿ:
ಮಾದಕ ದ್ರವ್ಯ ವ್ಯಸನದಿಂದ ಅಗುವ ದುಷ್ಪರಿಣಾಮದ ಬಗ್ಗೆ ಪ್ರತಿ ಶಾಲಾ,ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಮಾಡುವ ಮೂಲಕ ಯುವ ಸಮೂಹ ಮತ್ತು ಯುವ ವಿದ್ಯಾರ್ಥಿ ಸಮೂಹ ಈ ಚಟಗಳಿಗೆ ಬಲಿಯಾಗದಂತೆ ಎಚ್ಚರಿಕಾ ವ್ಯವಸ್ಥೆಗಳನ್ನು ಮಾಡಬೇಕು ಎಂದೂ ಶಾಸಕರು ಸರಕಾರವನ್ನು ಆಗ್ರಹಿಸಿದರು.

ಮಾದಕ ವ್ಯಸನಿಗಳ ವಿರುದ್ದ ಯುದ್ದ ಸಾರಿದ್ದೇವೆ: ಗೃಹ ಸಚಿವರು
ಮಾದಕ ವ್ಯಸನಿಗಳಿಂದ ಸಮಾಜಕ್ಕೆ ಕಂಠಕ ಉಂಟಾಗುತ್ತಿದೆ.ಇಂಥವರ ವಿರುದ್ದ ಸರಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ವ್ಯಸನಿಗಳ ಬೇಟೆಯಾಡುತ್ತಿದ್ದೇವೆ.ಈಗಾಗಲೇ ರಾಜ್ಯಾದ್ಯಂತ ಕಾರ್ಯಾಚರಣೆ ಪ್ರಾರಂಭವಾಗಿದೆ.ನೂರಾರು ಕೋಟಿ ರೂ.ಬೆಲೆ ಬಾಳುವ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.ರಾಜ್ಯದಲ್ಲೇ ಅತೀ ಹೆಚ್ಚು ಅಂದರೆ ಸುಮಾರು 21 ಕೋಟಿ ರೂ.ಮೌಲ್ಯದ ಮಾದಕ ವಸ್ತುಗಳನ್ನು ಒಂದೇ ದಿನದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಗೃಹ ಸಚಿವ ಡಾ|ಪರಮೇಶ್ವರ್ ಉತ್ತರಿಸಿದರು.
ದ.ಕ.ಜಿಲ್ಲೆಯನ್ನು ಒಂದು ವರ್ಷದೊಳಗೆ ವ್ಯಸನ ಮುಕ್ತ ಅಥವಾ ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿ ಮಾಡುವುದಾಗಿ ಪೊಲೀಸರು ಒಪ್ಪಿಕೊಂಡಿದ್ದು ಅದನ್ನು ಸವಾಲಾಗಿ ಸ್ವೀಕರಿಸಿದ್ದಾರೆ.ಮಾದಕ ವ್ಯಸನಿಗಳ ಮತ್ತು ಅದನ್ನು ಮರಾಟ ಮಾಡುವ ದುಷ್ಕರ್ಮಿಗಳ ವಿರುದ್ದ ನಾವು ಈಗಾಗಲೇ ಯುದ್ದವನ್ನೇ ಸಾರಿದ್ದು, ರಾಜ್ಯದಲ್ಲಿ 46 ಕಡೆಗಳಲ್ಲಿ ವಿಶೇಷ ಠಾಣೆಗಳನ್ನು ತೆರೆಯಲಾಗಿದೆ,ಇದರಲ್ಲಿ ಯಾವುದೇ ರಾಜಿಯಿಲ್ಲ ಎಂದು ಗೃಹ ಸಚಿವ ಡಾ|ಎಚ್.ಜಿ.ಪರಮೇಶ್ವರ್ ಅವರು ಸದನದಲ್ಲಿ ಮಾಹಿತಿ ನೀಡಿದರು.

ಪುತ್ತೂರಿನಲ್ಲಿ ಡಿ ಎಡಿಕ್ಷನ್ ಸೆಂಟರ್‌ಗೆ ಮನವಿ
ಪುತ್ತೂರಿನಲ್ಲಿ ಡಿ ಎಡಿಕ್ಷನ್ ಸೆಂಟರ್ ಪ್ರಾರಂಭ ಮಾಡುವಂತೆ ಶಾಸಕ ಅಶೋಕ್ ಕುಮಾರ್ ರೈಯವರು ಗೃಹ ಸಚಿವ ಡಾ|ಎಚ್.ಜಿ.ಪರಮೇಶ್ವರ್ ಅವರಲ್ಲಿ ಮನವಿ ಮಾಡಿದರು.ದ.ಕ ಜಿಲ್ಲೆಯಲ್ಲಿ ಮಂಗಳೂರಿನಲ್ಲಿ ಮಾತ್ರ ಡಿ ಎಡಿಕ್ಷನ್ ಕೇಂದ್ರವಿದ್ದು ಉಪ ವಿಭಾಗವಾದ ಪುತ್ತೂರಿನಲ್ಲಿ ವ್ಯಸನ ಮುಕ್ತ ಕೇಂದ್ರವನ್ನು ಆರಂಭಿಸಬೇಕು ಎಂದು ಶಾಸಕರು ಮನವಿ ಮಾಡಿದರು.ಈ ವಿಚಾರವನ್ನು ಪರಿಶೀಲನೆ ಮಾಡುವುದಾಗಿ ಗೃಹ ಸಚಿವರು ಭರವಸೆ ನೀಡಿದರು.

LEAVE A REPLY

Please enter your comment!
Please enter your name here