ಉಪ್ಪಿನಂಗಡಿ: ಸರಕಾರವು ಏಕರೂಪದ ತೆರಿಗೆ ಪದ್ಧತಿಯನ್ನು ಜಾರಿಗೆ ತಂದಿದ್ದು, ಡಿಸೆಂಬರ್ನೊಳಗೆ ಇದು ಅನುಷ್ಠಾನವಾಗಬೇಕಿದೆ. ಇದಕ್ಕಾಗಿ ಮನೆ-ಮನೆಗೆ ಸರ್ವೇಗೆ ಗ್ರಾ.ಪಂ. ಸಿಬ್ಬಂದಿ ಬರಲಿದ್ದು, ಗ್ರಾಮಸ್ಥರು ಸಹಕಾರ ನೀಡಬೇಕೆಂದು ಹಿರೇಬಂಡಾಡಿ ಗ್ರಾ.ಪಂ.ನ ಪ್ರಭಾರ ಅಭಿವೃದ್ಧಿ ಅಧಿಕಾರಿ ರವಿಚಂದ್ರ ತಿಳಿಸಿದರು.
ಇಲ್ಲಿನ ಗ್ರಾ.ಪಂ. ಸಮುದಾಯ ಭವನದಲ್ಲಿ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದ ಅವರು, ಏಕರೂಪದ ತೆರಿಗೆ ಪದ್ಧತಿಯನ್ನು ಅನುಷ್ಠಾನಿಸಲು ನಿವೇಶನ, ಅಂಗಡಿ, ಫ್ಯಾಕ್ಟರಿಗಳ ಸರ್ವೇ ಕಾರ್ಯಗಳನ್ನು ತುರ್ತಾಗಿ ನಡೆಸಬೇಕಾಗಿದೆ. ಇದಕ್ಕಾಗಿ ಗ್ರಾ.ಪಂ.ನಿಂದ ನಿಯೋಜಿಸಲ್ಪಟ್ಟ ಸಿಬ್ಬಂದಿ ನಿಮ್ಮಲ್ಲಿಗೆ ಭೇಟಿ ನೀಡಿದಾಗ ಅವರಿಗೆ ಅಗತ್ಯ ದಾಖಲೆಗಳನ್ನು ನೀಡಬೇಕೆಂದು ಮನವಿ ಮಾಡಿದರು. ಈ ಸಂದರ್ಭ ಗ್ರಾಮಸ್ಥ ಸೇಸಪ್ಪ ನೆಕ್ಕಿಲು ಮಾತನಾಡಿ, ಈಗಾಗಲೇ ಅನುಷ್ಠಾನಗೊಂಡ ತೆರಿಗೆ ನಿಯಮ ನಮ್ಮ ಗ್ರಾಮದಲ್ಲಿ ಜಾರಿಯಲ್ಲಿದೆ. ಅದು ಇರುವಾಗ ಈಗ ಮತ್ತೊಂದು ನಿಯಮ ಅನುಷ್ಠಾನ ಅಗತ್ಯವೇ ಎಂದರು. ಅದಕ್ಕುತ್ತರಿಸಿದ ಪಿಡಿಒ ಅವರು ಇದು ಸರಕಾರದ ಆದೇಶವಾಗಿದೆ. ಇದನ್ನು ಅನುಷ್ಠಾನ ಮಾಡಲೇ ಬೇಕು. ಇದರಲ್ಲಿ ತೆರಿಗೆ ಕಟ್ಟುವವರಿಗೂ ಅನುಕೂಲವಿದೆ ಎಂದರು.
ವಸತಿ ಯೋಜನೆಯಡಿಯಲ್ಲಿ ಮನೆ ಪಡೆದುಕೊಂಡ ಕೆಲವರು ಮನೆ ಕಾಮಗಾರಿಗಳನ್ನು ಅರ್ಧದಲ್ಲೇ ನಿಲ್ಲಿಸಿದ್ದಾರೆ. ಕೆಲವರು ಇನ್ನೂ ಪ್ರಾರಂಭನೇ ಮಾಡಿಲ್ಲ. ನಿರ್ದಿಷ್ಟ ಅವಧಿಯಲ್ಲಿ ಮನೆಯನ್ನು ಮುಗಿಸದಿದ್ದಲ್ಲಿ ಅನುದಾನ ರದ್ದುಗೊಳ್ಳಲಿದೆ. ಅಂಥವರು ಮತ್ತೊಮ್ಮೆ ಈ ಯೋಜನೆಯನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಈ ಯೋಜನೆಯಡಿ ಮನೆ ಪಡೆದುಕೊಂಡವರು ಆದಷ್ಟು ಬೇಗ ಕೆಲಸ ಪೂರ್ಣಗೊಳಿಸಬೇಕು. ಇನ್ನೂ ಮನೆ ಕೆಲಸ ಪ್ರಾರಂಭ ಮಾಡದವರು ಈ ವಾರದೊಳಗೆ ಫೌಂಡೇಶನ್ ಕೆಲಸ ಮುಗಿಸಬೇಕು ಎಂದು ತಿಳಿಸಿದ ಪಿಡಿಒ ರವಿಚಂದ್ರ ಅವರು, ನಮ್ಮ ಗ್ರಾಮದಲ್ಲಿ ಪ್ರತಿ ಮನೆಯಿಂದ ಒಣ ಕಸ ಸಂಗ್ರಹಿಸಲು ಯೋಜನೆ ಹಾಕಿಕೊಳ್ಳಲಾಗಿದ್ದು, ಅದಕ್ಕೆ ಸ್ವಲ್ಪ ಕರ ವಿಧಿಸಲಾಗುವುದು ಎಂದರು.
ಗ್ರಾಮಸ್ಥ ಸೇಸಪ್ಪ ನೆಕ್ಕಿಲು ಮಾತನಾಡಿ, ಗ್ರಾಮಸ್ಥರಿಗೆ ಸಮಸ್ಯೆಗಳನ್ನು ಹೇಳಲು ಅವಕಾಶವಿರುವುದು ಗ್ರಾಮ ಸಭೆಗಳಲ್ಲಿ. ಆದರೆ ಪ್ರತಿ ಗ್ರಾಮ ಸಭೆಯಲ್ಲಿಯೂ ಇಲಾಖಾಧಿಕಾರಿಗಳ ಗೈರು ಹಾಜರಿ ಎದ್ದು ಕಾಣುತ್ತಿದೆ. ಅಧಿಕಾರಿಗಳು ಗ್ರಾಮ ಸಭೆಯನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಎಂದರು. ಅದಕ್ಕುತ್ತರಿಸಿದ ಪಿಡಿಒ ಅವರು ನಾವು ಪ್ರತಿ ಇಲಾಖೆಗಳಿಗೆ ಆಮಂತ್ರಣ ನೀಡಿದ್ದೇವೆ ಎಂದರು. ಈ ಬಗ್ಗೆ ಚರ್ಚೆಯಾಗಿ ಸಭೆಗೆ ಗೈರು ಹಾಜರಾಗುವ ಅಧಿಕಾರಿಗಳಿಗೆ ನೋಟೀಸ್ ನೀಡುವ ನಿರ್ಣಯ ಕೈಗೊಳ್ಳಲಾಯಿತು.
ಹಿರೇಬಂಡಾಡಿ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆಯ ಬಗ್ಗೆ ಪ್ರಸ್ತಾಪವಾದಾಗ ಉತ್ತರಿಸಿದ ಮೆಸ್ಕಾಂನ ಸಹಾಯಕ ಎಂಜಿನಿಯರ್ ನಿತಿನ್ ಕುಮಾರ್, ಈ ಭಾಗದಲ್ಲಿ ಶೇ.90ರಷ್ಟು ವಿದ್ಯುತ್ ಲೈನ್ಗಳು ತೋಟದ ನಡುವೆ ಹೋಗಿದೆ. ಆದ್ದರಿಂದ ಗಾಳಿ ಬಂದಾಗ ಅಡಿಕೆ ಗಿಡದ ಸೋಗೆಗಳು ಬಿದ್ದು ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ವಿದ್ಯುತ್ ಕಡಿತವುಂಟಾಗುತ್ತಿದೆ ಎಂದರು. ಖಾಸಗಿ ತೋಟದೊಳಗಿರುವ ವಿದ್ಯುತ್ ಲೈನ್ಗಳನ್ನು ಶಿಫ್ಟ್ ಮಾಡಲು ಸಾಧ್ಯವೇ? ಎಂಬ ಪ್ರಶ್ನೆ ಬಂದಾಗ, ಉತ್ತರಿಸಿದ ಮೆಸ್ಕಾಂ ಜೆಇಯವರು, ಅದಕ್ಕೆ ಇಲಾಖೆಯ ಅನುದಾನವಿಲ್ಲ. ಸ್ವಂತ ಖರ್ಚು ನೀವು ಭರಿಸುವುದಾದರೆ ವಿದ್ಯುತ್ ತಂತಿಗಳ ಸ್ಥಳಾಂತರ ಮಾಡಿ ಕೊಡಬಹುದು ಎಂದರಲ್ಲದೆ, ವಿದ್ಯುತ್ ಕಂಬದಿಂದ 500 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ದೂರವಿರುವ ಪಂಪ್ಶೆಡ್ಗಳಿಗೆ ಮೆಸ್ಕಾಂನಿಂದ ವಿದ್ಯುತ್ ಸಂಪರ್ಕ ನೀಡಲು ಬರುವುದಿಲ್ಲವೆಂಬ ಹೊಸ ನಿಯಮ ಬಂದಿದೆ. ಅವರು ಸೋಲಾರ್ ಹಾಕಿಸಿಕೊಳ್ಳಬೇಕಾಗುತ್ತದೆ. ಅದಕ್ಕೆ ಸರಕಾರದಿಂದ ಸಹಾಯಧನ ಕೂಡಾ ಲಭ್ಯವಿದೆ ಎಂದರು. ಮುರದಮೇಲು ಎಂಬಲ್ಲಿ ಮೈನ್ ಲೈನ್ನ ವಿದ್ಯುತ್ ಕಂಬಗಳು ದೂರ ದೂರವಿದ್ದು, ತಂತಿಗಳು ಜೋತಾಡ್ತಾ ಇವೆ ಎಂಬ ದೂರು ಗ್ರಾಮಸ್ಥರಿಂದ ವ್ಯಕ್ತವಾದಾಗ, ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪುತ್ತೂರು ಕೃಷಿ ಇಲಾಖೆಯ ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ಜಯಪ್ರಕಾಶ್ ನೋಡಲ್ ಅಧಿಕಾರಿಯಾಗಿ ಸಭೆಯನ್ನು ಮುನ್ನಡೆಸಿದರು. ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಶಾಂಭವಿ, ಸದಸ್ಯರಾದ ಚಂದ್ರಾವತಿ, ಹಮ್ಮಬ್ಬ ಶೌಕತ್ ಅಲಿ, ಭವಾನಿ, ಸವಿತಾ, ಗೀತಾ, ನಾರಾಯಣ ಎಸ್., ನಿತಿನ್ ತಾರಿತ್ತಡಿ, ಸತೀಶ್ ಶೆಟ್ಟಿ ಎನ್., ಲಕ್ಷ್ಮೀಶ, ಹೇಮಾವತಿ, ವಾರಿಜಾಕ್ಷಿ, ಹೇಮಂತ ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು. ಗ್ರಾಮಸ್ಥರಾದ ಲೋಕೇಶ್ ಪೆಲತ್ತಡಿ, ಅನುರಾಧ ಆರ್. ಶೆಟ್ಟಿ, ನಿತ್ಯಾನಂದ ಶೆಟ್ಟಿ, ಭವ್ಯ, ದೇವಪ್ಪ ಪಡ್ಪು, ಬಶೀರ್, ಜಗನ್ನಾಥ ಆರಿಜಾಲು, ಮೋನಪ್ಪ ಸಾಲಿಯಾನ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.