ಸಂಸತ್ ಕಲಾಪದ ಭವನಕ್ಕೆ ಜಿಗಿದು ಪ್ರದರ್ಶನ ಮಾಡಿದವರು ದುಷ್ಕರ್ಮಿಗಳೇ?

0

ತಾರೀಕು ದ.13ರಂದು ದೆಹಲಿಯಲ್ಲಿ ಸಂಸತ್ ಕಲಾಪ ನಡೆಯುತ್ತಿರುವಾಗಲೇ ಪ್ರೇಕ್ಷಕರ ಗ್ಯಾಲರಿಯಿಂದ ಸಭಾಂಗಣಕ್ಕೆ ಜಿಗಿದು ಘೋಷಣೆ ಕೂಗುತ್ತಾ ತಮ್ಮ ಶೂನಲ್ಲಿ ಅಡಗಿಸಿಟ್ಟಿದ್ದ ಕ್ಯಾನ್‌ನಿಂದ ಬಣ್ಣದ ಹೊಗೆಯನ್ನು ಬಿಟ್ಟು ಆತಂಕ ಸೃಷ್ಠಿಸಿದ ಲಕ್ನೋದ ಸಾಗರ್ ಶರ್ಮಾ, ಮೈಸೂರಿನ ಮನೋರಂಜನ್‌ರವರ ಕ್ರಿಯೆ ದೇಶವನ್ನೇ ದಿಗ್ಭ್ರಮೆಗೊಳಿಸಿದೆ. ಅದೇ ಸಮಯದಲ್ಲಿ ಸಂಸತ್ ಭವನದ ಹೊರಗಡೆ ಘೋಷಣೆ ಕೂಗುತ್ತಾ ಬಣ್ಣದ ಹೊಗೆಯನ್ನು ಕ್ಯಾನ್‌ನಿಂದ ಬಿಡುಗಡೆಗೊಳಿಸಿದ ಹಿಸಾರ್‌ನ ನೀಲಂ ಆಝಾದ್ ಮತ್ತು ಮಹಾರಾಷ್ಟ್ರದ ಲಾತೂರ್‌ನ ಅಮೋಲ್ ಶಿಂದೆ ಇಬ್ಬರ ಕ್ರಿಯೆಯೂ ಅಷ್ಟೇ ಆಶ್ಚರ್ಯವನ್ನು ಉಂಟು ಮಾಡಿದೆ. ಅವರ ಕ್ರಿಯೆಗಳ ವೀಡಿಯೋವನ್ನು ಮಾಡಿ ಪ್ರಚಾರ ಮಾಡಿದವರ ಕಾರ್ಯ ದೇಶದಾದ್ಯಂತ ಸದ್ದು ಮಾಡಿದೆ. ಅದರ ಕಿಂಗ್‌ಪಿನ್ ಕೋಲ್ಕತ್ತಾ ನಿವಾಸಿ ಲಲಿತ್ ಝಾ ಮತ್ತು ಅವನಿಗೆ ಸಹಾಯ ನೀಡಿದ ರಾಜಸ್ಥಾನದ ನಿವಾಸಿ ಮಹೇಶ್‌ರವರು ತಾವೇ ಪೊಲೀಸರಿಗೆ ಶರಣಾಗತರಾಗಿದ್ದಾರೆ.


ಸಂಸತ್‌ಗೆ ಪ್ರವೇಶಿಸಿದವರಾಗಲೀ, ಹೊರಗಡೆ ಘೋಷಣೆ ಕೂಗಿದವರಾಗಲೀ ಅವರು ಯಾರಿಗೂ ಅಪಾಯ ತಂದೊಡ್ಡಲಿಲ್ಲ. ಯಾವುದೇ ಹಾನಿ ಮಾಡುವುದು ಅವರ ಉದ್ದೇಶವಾಗಿರಲಿಲ್ಲ. ಯಾಕೆಂದರೆ ಅವರಲ್ಲಿ ಯಾರಲ್ಲಿಯೂ ಅಪಾಯಕಾರಿ ವಸ್ತುಗಳು ಇರಲಿಲ್ಲ. ತಾವು ಒಳಿತನ್ನು ಮಾಡುತ್ತಿದ್ದೇವೆ ಎಂಬ ಭ್ರಮೆಯಿಂದ, ಒಳಿತನ್ನು ಮಾಡಬೇಕೆಂಬ ಉದ್ದೇಶದಿಂದ ತಪ್ಪು ಕೆಲಸ ಮಾಡಿದ್ದಾರೆ. ಆ ಕೆಲಸ ಮಾಡಲು ಹೋಗಿ ತಮ್ಮ ಜೀವನವನ್ನು, ಭವಿಷ್ಯತ್ತನ್ನು ಬಲಿ ಕೊಟ್ಟಿದ್ದಾರೆ ಎಂದೇ ಅರ್ಥ ಮಾಡಿಕೊಳ್ಳಬೇಕು.


ಅದರಲ್ಲಿ ಭಾಗಿಯಾದ ಪ್ರತಿಯೊಬ್ಬರ ಹಿನ್ನಲೆ ನೋಡಿದರೆ ಸಾಮಾನ್ಯ ಕುಟುಂಬದಿಂದ ಬಂದ ವಿದ್ಯಾವಂತರಾಗಿದ್ದಾರೆ. ಅವರಾಗಲೀ ಅವರ ಕುಟುಂಬದವರಾಗಲೀ ಎಂದೂ ಯಾರಿಗೂ ಅನ್ಯಾಯ ಮಾಡಿದವರಲ್ಲ. ಆ ಯುವಕರು ದೇಶಕ್ಕೆ, ಸಮಾಜಕ್ಕೆ ಜನತೆಗೆ ಏನಾದರೂ ಒಳಿತು ಮಾಡಬೇಕೆಂಬ ಅಭಿಪ್ರಾಯ ಹೊಂದಿದ್ದವರಾಗಿದ್ದು, ಅದನ್ನು ಸಂಸದರ ಮತ್ತು ದೇಶದ ಗಮನಕ್ಕೆ ತರುವ ಉದ್ದೇಶವಿಟ್ಟುಕೊಂಡು ಈ ಅಪಾಯಕಾರಿ ಕೆಲಸಕ್ಕೆ ಕೈ ಹಾಕಿದ್ದಾರೆ ಎಂಬುದು ಅವರ ಕ್ರಿಯೆ ಮತ್ತು ಹೇಳಿಕೆಗಳಿಂದ ಸ್ಪಷ್ಟವಾಗಿ ಗೋಚರಿಸುತ್ತದೆ. ಹೀಗಿರುವಾಗ ಅದನ್ನು 22 ವರ್ಷಗಳ ಹಿಂದಿನ ಸಂಸತ್‌ನ ಮೇಲಿನ ದಾಳಿಗೆ ಹೋಲಿಸಿ ದುಷ್ಕರ್ಮಿಗಳ ದಾಳಿ ಎಂದು ಮಾಧ್ಯಮದವರು, ಸಂಸದರು, ರಾಜಕೀಯ ಪಕ್ಷಗಳ ನಾಯಕರು ಬಿಂಬಿಸುತ್ತಿರುವುದನ್ನು ನೋಡಿದರೆ ನಾವು ಸೂಕ್ಷ್ಮತೆಯನ್ನು ಮತ್ತು ತಿಳುವಳಿಕೆಯನ್ನು ಕಳೆದುಕೊಳ್ಳುತ್ತಿದ್ದೇವೆಯೇ ಎಂದು ಅನಿಸುವುದಿಲ್ಲವೇ?


ಸಂಸದ ಪ್ರತಾಪ್ ಸಿಂಹರು ಪಾರ್ಲಿಮೆಂಟ್ ಭವನಕ್ಕೆ ಪ್ರವೇಶ ಪಡೆದ ವ್ಯಕ್ತಿಗಳಿಗೆ ಅನುಮತಿ ಪತ್ರ ಕೊಟ್ಟದ್ದು ತಪ್ಪು ಅಲ್ಲವೇ ಅಲ್ಲ. ಯಾಕೆಂದರೆ ಈ ಅನುಮತಿ ಪಡೆದವರು ಅತ್ಯಂತ ಪ್ರಾಮಾಣಿಕ ವ್ಯಕ್ತಿಗಳು ಎಂದು ಗುರುತಿಸಲ್ಪಟ್ಟವರು. ಆದುದರಿಂದ ಜನಪರವಾದ ಸಂಸದರಾಗಿ ಪ್ರತಾಪ್ ಸಿಂಹರು ಮಾಡಿದ ಕೆಲಸವನ್ನು ಟೀಕಿಸುತ್ತಾ ಅವರು ಅನುಮತಿ ಪತ್ರ ಕೊಡಿಸಿರುವುದರಿಂದ ರಾಜೀನಾಮೆ ಕೊಡಬೇಕು, ಶಿಕ್ಷೆಗೆ ಗುರಿಯಾಗಬೇಕು ಎಂದು ವಾದಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅವಮಾನ. ಆದರೆ ಭದ್ರತಾ ಸಿಬ್ಬಂದಿ, ಯಾರೇ ಒಳಗಡೆ ಹೋಗುವಾಗ ಅವರಲ್ಲಿ ಅನಗತ್ಯ ವಸ್ತುಗಳು ಇರದಂತೆ ನೋಡಿಕೊಳ್ಳದೆ ಒಳಗಡೆ ಹೋಗಲು ಬಿಟ್ಟಿರುವುದು ಗಂಭೀರ ಲೋಪ ಎಂದೇ ಪರಿಗಣಿಸಬೇಕು. ಯಾಕೆಂದರೆ ಒಳಗಡೆ ಬಿಡುವಾಗ ಅದು ವಿಷಾನಿಲವೇ ಆಗಿದ್ದರೆ ಏನಾಗಬಹುದಿತ್ತು? ಅದು ಮಾತ್ರವಲ್ಲದೇ ಕಲಾಪದ ಸಭಾಂಗಣಕ್ಕೆ ಜಿಗಿಯದಂತೆ ನೋಡಿಕೊಳ್ಳುವುದು ಮತ್ತು ಅವರನ್ನು ಕೂಡಲೇ ಬಂಽಸಲು ವಿ-ಲರಾದದ್ದು ಕೂಡ ಗಂಭೀರವಾದ ಭದ್ರತಾ ಲೋಪವೇ ಸರಿ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸ್ಪೀಕರ್ ತೆಗೆದುಕೊಳ್ಳುತ್ತಿರುವ ಕ್ರಮ ಸ್ವಾಗತಾರ್ಹ.


ಈ ಎಲ್ಲಾ ಗಲಭೆ, ಆತಂಕ, ಗೊಂದಲಗಳಿಗೆ ಕಾರಣರಾದವರು ತಮ್ಮ ಅಭಿಪ್ರಾಯ ದೇಶಕ್ಕೆ ತಲುಪಲು ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಳ್ಳಲು ತಯಾರಾಗಿದ್ದರು ಎಂಬ ವಿಚಾರವನ್ನು ದೇಶ ಗಂಭೀರವಾಗಿ ಪರಿಗಣಿಸಬೇಕು. ಅದೇನಿದ್ದರೂ ಅವರು ಯಾವುದೇ ಜೀವಹಾನಿ ಮಾಡಲು ಚಿಂತನೆ ಮಾಡಲಿಲ್ಲ ಎಂಬ ಅಂಶವನ್ನು ಗಮನಿಸಿ ಅವರನ್ನು ದುಷ್ಕರ್ಮಿಗಳಲ್ಲ. ತಮ್ಮ ಚಿಂತನೆಯನ್ನು ದೇಶದ ಎಲ್ಲಾ ಸಂಸದರು, ಮಾಧ್ಯಮದ ಗಮನಕ್ಕೆ ತರಲಿಕ್ಕಾಗಿ ಗಂಭೀರ ತಪ್ಪು ಎಸಗಿದ್ದಾರೆ ಎಂದು ಪರಿಗಣಿಸಿ ಪ್ರಧಾನಿ ಮೋದಿಜೀ ಹಾಗೂ ಇತರ ಸಂಸದರು ಅವರಿಗೆ ಕ್ಷಮೆ ನೀಡಿ ದೇಶದ್ರೋಹದ ಶಿಕ್ಷೆಗೆ ಗುರಿಪಡಿಸದೆ ಅವರ ಮತ್ತು ಅಂತಹ ಚಿಂತನೆ ಇರುವ ಸಮುದಾಯಗಳ, ಯುವಕರ ವಿಶ್ವಾಸ ಗಳಿಸಿ ಅವರುಗಳ ತ್ಯಾಗ ಮತ್ತು ಯೋಚನೆಗಳು ಸಮಾಜದ ಅಭಿವೃದ್ಧಿಯ ಕಡೆ ಹರಿಯುವಂತೆ ಮಾಡಬೇಕೆಂಬ ಆಶಯ ನಮ್ಮದು.


ರಾಷ್ಟ್ರಪಿತ ಮಹಾತ್ಮಗಾಂಽಯವರು ಅಂತಹ ಸಂದರ್ಭದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದರು ಎಂಬ ಚಿಂತನೆ ನಮಗೆ ಇಂತಹ ಸಂದರ್ಭಗಳಲ್ಲಿ ದಾರಿದೀಪವಾಗಬಹುದು. ಸಣ್ಣ ಸಣ್ಣ ವಿಷಯಗಳಿಗೆ ಕೊಲೆ ಮಾಡುವವರು ಮತ್ತು ಆತ್ಮಹತ್ಯೆ ಮಾಡುವವರು ಇರುವ ಸಮಾಜದಲ್ಲಿ, ಸಮಾಜ ಸೇವೆಗಾಗಿ ಮತ್ತು ಉತ್ತಮ ಚಿಂತನೆಗಳಿಗಾಗಿ ಜನರನ್ನು ಪ್ರೇರೇಪಿಸಲು ಈ ಘಟನೆ ಸಹಕಾರಿಯಾಗಬಹುದು. ಮೋದಿಜೀಯವರು ತಮ್ಮ ರಾಜಕೀಯದ ಆರಂಭದಿಂದಲೂ ಕಾಶ್ಮೀರದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲು, 370 ವಿಝಾಯನ್ನು ರದ್ದು ಪಡಿಸಲು ತಮ್ಮ ಜೀವವನ್ನೇ ಪಣವಿಟ್ಟು ಕೆಲಸ ಮಾಡಿದ್ದಾರೆ. (ಸುಪ್ರೀಂ ಕೋರ್ಟ್ ಕೂಡಾ ಮೋದಿ ಸರಕಾರದ ಈ ನಿರ್ಧಾರವನ್ನು ಎತ್ತಿ ಹಿಡಿದಿದೆ)ಅವರು ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ಆಯ್ಕೆಯಾಗಿರುವುದರಿಂದ ಆ ಕೆಲಸವನ್ನು ಅವರು ಮಾಡಲು ಸಾಧ್ಯವಾಯಿತು. ಆದರೆ ಆ ದಿಕ್ಕಿನಲ್ಲಿ ಚಿಂತನೆ ಮಾಡಿದ ಎಷ್ಟೋ ಜನರು ಜೀವ ಮತ್ತು ಜೀವನವನ್ನು ಕಳೆದುಕೊಂಡಿದ್ದಾರೆ. ಅದನ್ನು ತಪ್ಪು ಎಂದು ಹೇಳುತ್ತಿದ್ದವರು ಇಂದು ಸರಿ ಎಂದು ಒಪ್ಪಿಕೊಳ್ಳುತ್ತಿಲ್ಲವೇ?


ನಾನು ಲಂಚ, ಭ್ರಷ್ಟಾಚಾರದ ವಿರುದ್ದ ಹೋರಾಟವಾಗಿ ಮತ್ತು ಪ್ರಜಾಪ್ರಭುತ್ವದ ಪ್ರಜೆಗಳ ಜವಾಬ್ದಾರಿಯ ಪ್ರಚಾರಕ್ಕಾಗಿ ಹಲವಾರು ಪ್ರಯತ್ನ ಮಾಡಿದ್ದೇನೆ. ಅದು ಸಂಪೂರ್ಣ ಕೈಗೂಡದಿದ್ದಾಗ ಪ್ರಧಾನಿ ಮೋದಿಜೀ ಮತ್ತು ರಾಹುಲ್ ಗಾಂಧಿಯವರ ಕ್ಷೇತ್ರದಲ್ಲಿ ಆ ವಿಷಯವನ್ನು ಇಟ್ಟುಕೊಂಡು, ಅವರುಗಳ ಗಮನಕ್ಕೆ ಬರಬೇಕೆಂದು ಚುನಾವಣೆಗೆ ಸ್ಪರ್ಧಿಸ ಬಯಸಿದ್ದೆ. ಮಾಜಿ ಮುಖ್ಯಮಂತ್ರಿ ಬೊಮ್ಮಾಯಿಯವರ ಮತ್ತು ಹಾಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಕ್ಷೇತ್ರದಲ್ಲಿ ಅದೇ ವಿಚಾರವನ್ನು ಇಟ್ಟುಕೊಂಡು ಸ್ಪರ್ಧಿಸಿ ಪ್ರಚಾರ ಮಾಡಿದ್ದೆ. ಅದು ಯಶಸ್ವಿಯಾಗುತ್ತದೆ ಎಂದಲ್ಲ. ಆದರೆ ನಾವು ಮಾಡುವ ಪ್ರಯತ್ನದಿಂದ ಕಿಂಚಿತ್ತಾದರೂ ಪ್ರಯೋಜನವಾಗಲಿ ಎಂಬ ಆಶಯದಿಂದ ಅದನ್ನು ಮಾಡಿದ್ದೇನೆ ಎಂದು ತಿಳಿಸಲು ಇಚ್ಚಿಸುತ್ತೇನೆ. ದೇಶದ ಬಗ್ಗೆ ಚಿಂತನೆ ಇರುವ, ಏನಾದರೂ ಮಾಡಬೇಕೆಂದು ಬಯಸುವ ಲಕ್ಷಾಂತರ ಜನರು ನಮ್ಮಲ್ಲಿದ್ದಾರೆ. ಅವರು ತಮ್ಮ ಪ್ರಯತ್ನದಲ್ಲಿ ವಿಫಲರಾದರೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ಮೀರಿ, ದಾರಿಯನ್ನು ತಪ್ಪಿ ಹೋಗಬಾರದು. ಒಂದುವೇಳೆ ಅಂಥವರು ಕಾನೂನು ಪ್ರಕಾರ ತಪ್ಪು ಮಾಡಿದರೂ ದೇಶಕ್ಕೆ ಹಾನಿಯ ಕೆಲಸ ಮಾಡದಿದ್ದರೆ ಅವರನ್ನು ಕ್ಷಮಿಸಿ, ಸರಿದಾರಿಗೆ ತರಬೇಕು ಎಂಬ ಕಾರಣಕ್ಕೆ ಈ ಲೇಖನವನ್ನು ಬರೆದಿದ್ದೇನೆ.

LEAVE A REPLY

Please enter your comment!
Please enter your name here