ಮಕ್ಕಳನ್ನು ತಿದ್ದುವ,ಉತ್ತಮ ದಾರಿ ತೋರಿಸುವ ಕೆಲಸ ಶಿಕ್ಷಕರಿಂದ ಮಾತ್ರವಲ್ಲ ಪೋಷಕರಿಂದಲೂ ಆಗಬೇಕು- ಬೆಳಿಯೂರುಕಟ್ಟೆ ಸರಕಾರಿ ಪ ಪೂ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಶಾಸಕ ಅಶೋಕ್‌ ರೈ

0

ಪುತ್ತೂರು: ಮಕ್ಕಳನ್ನು ತಿದ್ದುವ ಮತ್ತು ಅವರಿಗೆ ಉತ್ತಮ ದಾರಿ ತೋರಿಸುವ ಕೆಲಸ ಕೇವಲ ಶಿಕ್ಷಕರಿಂದ ಮಾತ್ರವಲ್ಲ ಪೋಷಕರಿಂದಲೂ ಆಗಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.ಅವರು ಬೆಳಿಯೂರು ಕಟ್ಟೆ ಸರಕಾರಿ ಪ ಪೂ ಕಾಲೇಜು ಹಾಗೂ ಪ್ರೌಢ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ದ.18 ರಂದು ಉದ್ಘಾಟಿಸಿ ಮಾತನಾಡಿದರು.


ಸರಕಾರಿ ಶಾಲೆಯಲ್ಲಿ ಶಿಸ್ತು ಕಡಿಮೆ ಎಂದು ಕೆಲವರು ಆಪಾದನೆ ಮಾಡುತ್ತಾರೆ. ಸರಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಶಿಸ್ತು ಪಾಲನೆ ಮಾಡಬೇಕಾದರೆ ಪೋಷಕರ ಸಹಕಾರ ಅತೀ ಅಗತ್ಯವಾಗಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡುವ ಕನಸು ಕಾಣಬೇಕು. ಕನಸೇ ಕಾಣದಿದ್ದರೆ ನನಸು ಮಾಡುವುದಾದರೂ ಏನು ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ವಿದ್ಯೆ ಕಲಿತು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಬೇಕು,ದುಶ್ಚಟಗಳಿಗೆ ಯಾರೂ ಬಲಿಯಾಗಬಾರದು. ತಂದೆ ತಾಯಿಯ ಹೆಸರನ್ನು ಕೆಡಿಸುವ ಕೆಲಸವನ್ನು ಎಂದೂ ಮಾಡಬೇಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಎರಡು ಗ್ರಾಮಕ್ಕೊಂದು ಕೆಪಿಎಸ್ ಸ್ಕೂಲ್
ಎರಡು ಗ್ರಾಮಕ್ಕೊಂದು ಕೆಪಿಎಸ್ ಸ್ಕೂಲ್ ಆರಂಭ ಮಾಡುವ ಉದ್ದೇಶ ಸರಕಾರಕ್ಕಿದ್ದು ,ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಮುಖ್ಯ ಶಾಲೆಗೆ ಮರ್ಜಿ ಮಾಡಲಾಗುವುದು ಎಂದು ಹೇಳಿದರು.


15 ತಿಂಗಳಲ್ಲಿ 24 ಗಂಟೆಯೂ ನೀರು
ಮುಂದಿನ 15 ತಿಂಗಳೊಳಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ದಿನದ 24 ಗಂಟೆ ನೀರು ವಿತರಣೆಯಾಗಲಿದೆ ಎಂದು ಶಾಸಕರು ತಿಳಿಸಿದರು.
ಬಲ್ನಾಡು ಗ್ರಾಪಂ ಅಧ್ಯಕ್ಷೆ ಪರಮೇಶ್ವರಿ ಸಭಾಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ತಾಪಂ ಮಾಜಿ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಸಂಪನ್ಮೂಲ ವ್ಯಕ್ತಿಗಳಾದ ನಿವೃತ್ತ ಉಪನ್ಯಾಸಕ ರಾಧಾಕೃಷ್ಣ ಕಲ್ಚಾರ್ ವಿಟ್ಲ, ಕರ್ನಾಟಕ ರಾಜ್ಯ ಭಾವೈಕೈತಾ ಪರಿಷತ್ತುನ ಜಿಲ್ಲಾ ಅಧ್ಯಕ್ಷ ಇಕ್ಬಾಲ್ ಬಾಳಿಲ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಎ.ಎಂ ಪ್ರಕಾಶ್ಚಂದ್ರ ಆಳ್ವ, ಪ್ರೌಢ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಬಿ.ಮಹಮ್ಮದ್ ಅಶ್ರಫ್, ಹಿರಿಯ ಪದವೀಧರ ಶಿಕ್ಷಕಿ ಸುನೀತ ಎಂ, ಪ್ರವೀಣ್‌ಚಂದ್ರ ಆಳ್ವ, ರಾಧಾಕೃಷ್ಣ ಆಳ್ವ, ಚಂದಪ್ಪ ಪೂಜಾರಿ, ಯೂಸುಫ್ ಗೌಸಿಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪ್ರಾಂಶುಪಾಲ ಹರಿಪ್ರಕಾಶ್ ಬೈಲಾಡಿ ಸ್ವಾಗತಿಸಿ, ವಂದಿಸಿದರು. ಶಿಕ್ಷಕ ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಹಳೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here