ಪುತ್ತೂರು: ಎಲ್ಲರೂ ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳಬೇಕು. ಸಾಧನೆಗೆ ಯಾವುದೇ ಪ್ರಾಯ ಅಡ್ಡಿಯಾಗುವುದಿಲ್ಲ. ತಮ್ಮ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿದರೆ ಅದೇ ದೊಡ್ಡ ಸಾಧನೆ ಎಂದು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಗಿರೀಶ್‌ನಂದನ್ ಹೇಳಿದರು. ಪುತ್ತೂರು ಸೈನಿಕ ಭವನದಲ್ಲಿ ನಡೆದ ಮಾಜಿ ಸೈನಿಕರ ಸಂಘದ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.
ಜೀವನದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗಲೂ ಸಮಯ ತೆಗೆದುಕೊಳ್ಳಿ. ನಾನು ಕೂಡ ಓರ್ವ ಸೈನಿಕನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. 1993ರಲ್ಲಿ ನೌಕಾಪಡೆಗೆ ಕರ್ತವ್ಯಕ್ಕೆ ಸೇರಿದೆ. 15 ವರ್ಷ ನೌಕಾಪಡೆಯ ಸಬ್‌ಮೆರಿನ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದೆ. ಬಳಿಕ ನಿವೃತ್ತಿಗೊಂಡು ಜಿಂದಾಲ್ ಗ್ರೂಪ್‌ನಲ್ಲಿ ಕೆಲಸ ಮಾಡಿದೆ. 2014ರಲ್ಲಿ ಕೆಎಎಸ್ ಪರೀಕ್ಷೆ ಬರೆದು 217ರಲ್ಲಿ ಕರ್ತವ್ಯಕ್ಕೆ ಸೇರಿದ್ದೇನೆ ಎಂದು ತಿಳಿಸಿದ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತುಂಬಾ ಸಂತೋಷ ತಂದಿದೆ ಎಂದರು.
ಸಂಘದ ಗೌರವಾಧ್ಯಕ್ಷ ನಿವೃತ್ತ ಕರ್ನಲ್ ರಮಾಕಾಂತನ್ ಮಾತನಾಡಿ ಸೈನಿಕರ ಸಂಘದಿಂದ ಸೈನಿಕರ ಕುಟುಂಬ ಸಮ್ಮಿಲನ ಕಾರ್ಯಕ್ರಮ ಪ್ರತೀವರ್ಷ ಮಾಡುತ್ತಿದ್ದೇವೆ. ಪುತ್ತೂರಿನಲ್ಲಿ ಅನೇಕ ಮಂದಿ ಮಾಜಿ ಸೈನಿಕರಿದ್ದಾರೆ. ಇವರೆಲ್ಲರೂ ಸಂಘದ ಸದಸ್ಯತ್ವ ಪಡೆದುಕೊಳ್ಳಿ ಎಂದರು. ಸಂಘದ ಅಧ್ಯಕ್ಷ ಎಂ.ಕೆ.ನಾರಾಯಣ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಸುಮಾರು 60 ವರ್ಷದ ಹಿಂದೆ ಸಂಘ ಸ್ಥಾಪನೆಯಾಗಿದೆ. ಮಾಜಿ ಸೈನಿಕರಿಗೆ ಸಮಾಜದಲ್ಲಿ ಗುರುತಿಸಕೊಳ್ಳಲು ಸಂಘ ಸಹಕಾರಿಯಾಗಿದೆ. ಸಂಘದ ವತಿಯಿಂದ ಯೋಧರಿಗೆ ಉದ್ಯೋಗ, ತರಬೇತಿ ನೀಡುತ್ತಿದ್ದೇವೆ ಎಂದು ಹೇಳಿದರು.
ಸಂಘದ ಜತೆ ಕಾರ್ಯದರ್ಶಿ ಡಿ.ಎಸ್.ಗಣೇಶ್ ವಂದಿಸಿದರು. ಜೋಸೆಫ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಜಗನ್ನಾಥ ರೈ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮಾಜಿ ಸೈನಿಕರು ಹಾಗೂ ಅವರ ಕುಟುಂಬ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಅಗಲಿದ ಯೋಧರಿಗೆ ಮೌನಪ್ರಾರ್ಥನೆ ಸಲ್ಲಿಸಲಾಯಿತು. ಸಭಾ ಕಾರ್ಯಕ್ರಮ ಬಳಿಕ ವಿವಿಧ ಸ್ಪರ್ಧೆಗಳು ನಡೆದು ಮಧ್ಯಾಹ್ನ ಭೋಜನ ಕೂಟ ನಡೆಯಿತು.
ಮಾಜಿ ಹಿರಿಯ ಸೈನಿಕರಿಗೆ ಸನ್ಮಾನ
ಸಂಘದ ಸದಸ್ಯರಾದ ಮಾಜಿ ಹಿರಿಯ ಸೈನಿಕರಾದ ಅಮ್ಮಣ್ಣ ಡಿ. ರೈ ಪಾಪೆಮಜಲು, ಶಿವಪ್ಪ ಕೆದಂಬಾಡಿ ಹಾಗೂ ಚಿದಾನಂದ ನಾಡಾಜೆರವರನ್ನು ಗಣ್ಯರು ಶಲ್ಯ, ಹಾರ, ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಸನ್ಮಾನಿತರು ಅನಿಸಿಕೆ ವ್ಯಕ್ತಪಡಿಸಿದರು.
ಸೈನಿಕರ ಮಕ್ಕಳಿಗೆ ಸನ್ಮಾನ
ಮಾಜಿ ಹಾಲಿ ಸೈನಿಕರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿದ ಹಾಗೂ ಕ್ರೀಡಾ ಸಾಧನೆ ಮಾಡಿದ ಧನ್ಯಶ್ರೀ ಪಿ., ಗಗನ್‌ದೀಪ್ ಎಸ್., ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿದ ವರ್ಣ ರೈ, ಶ್ರಾವ್ಯ ಎಂ.ಆರ್. ಹಾಗೂ ಸೋನಾಲ್ ಡಿಸೋಜರವರನ್ನು ಗಣ್ಯರು ಶಾಲು, ಹಾರ, ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಿದರು.