ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನ ಬರುವುದಿಲ್ಲ ಎಂದು ಹೇಳಿದವರು ಈಗ ಮೌನವಾಗಿದ್ದಾರೆ: ಅಶೋಕ್ ರೈ
ಪುತ್ತೂರು: ಕೊಳ್ತಿಗೆ ಗ್ರಾಮದ ಮಣಿಕ್ಕರ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಕಾಲು ಸಂಕ ನಿರ್ಮಾಣಕ್ಕೆ ಶಾಸಕರಾದ ಅಶೋಕ್ ರೈ ಶಿಲಾನ್ಯಾಸ ನೆರವೇರಿಸಿದರು. ದೇವಳಕ್ಕೆ ತೆರಳುವ ಈ ರಸ್ತೆಯಲ್ಲಿ ಕಿರಿದಾದ ತೋಡು ಇದ್ದು ಇಲ್ಲಿ ಸೇತುವೆಯ ನಿರ್ಮಾಣ ಮಾಡುವಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಸಾರ್ವಜನಿಕರು ಶಾಸಕರಲ್ಲಿ ಮನವಿ ಮಾಡಿದ್ದರು. ಇಲ್ಲಿ ಸೇತುವೆ ನಿರ್ಮಾಣಕ್ಕೆ ರೂ.20 ಲಕ್ಷ ಅನುದಾನವನ್ನು ಶಾಸಕರು ಒದಗಿಸಿದ್ದು ಈ ಮೂಲಕ ಇಲ್ಲಿನ ನಿವಾಸಿಗಳ ಮತ್ತು ದೇವಳದ ಭಕ್ತಾದಿಗಳ ಬಹುವರ್ಷದ ಬೇಡಿಕೆ ಈಡೇರಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಕ್ಷೇತ್ರದಾದ್ಯಂತ ಅಭಿವೃದ್ದಿ ಕಾರ್ಯಗಳು ಶರವೇಗದಲ್ಲಿ ನಡೆಯುತ್ತಿದ್ದು ಅನುದಾನ ಬರುತ್ತಲೇ ಇದೆ. ಗ್ಯಾರಂಟಿ ಯೋಜನೆಯಿಂದಾಗಿ ಈ ಬಾರಿ ಅನುದಾನ ಬರುವುದಿಲ್ಲ ಎಂದು ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದರೂ ಪುತ್ತೂರಿನಲ್ಲಿ ದಿನದಿಂದ ದಿನಕ್ಕೆ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಲೇ ಇದೆ. ಸುಮಾರು 60 ರಸ್ತೆಗೆ ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು ಅದರ ಶಿಲಾನ್ಯಾಸ ಕಾರ್ಯಕ್ರಮ ಏಕಕಾಲದಲ್ಲಿ ನಡೆಯಲಿದೆ ಎಂದು ಹೇಳಿದರು.
ಇಲ್ಲಿ ಕಾಲು ಸಂಕ ನಿರ್ಮಾಣವಾಗಬೇಕೆಂದು ಕಳೆದ ಎರಡು ತಿಂಗಳ ಹಿಂದೆ ಕಾಂಗ್ರೆಸ್ ಮುಖಂಡರು ಹಾಗೂ ದೇವಳದ ಭಕ್ತರು ಮನವಿ ಮಾಡಿದ್ದು ಇಲ್ಲಿಗೆ 20 ಲಕ್ಷ ಅನುದಾನವನ್ನು ನೀಡಿದ್ದು ಮುಂದಿನ ದಿನಗಳಲ್ಲಿ ಇಲ್ಲಿನ ರಸ್ತೆಯನ್ನು ಕಾಂಕ್ರೀಟ್ ಮಾಡಲಾಗುವುದು ಎಂದು ಶಾಸಕರು ಹೇಳಿದರು. ಈ ಸಂದರ್ಭದಲ್ಲಿ ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷರಾದ ಪ್ರಮೋದ್ ಕೆ ಎಸ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರ ಕೊಳ್ತಿಗೆ ಗ್ರಾಪಂ ಸದಸ್ಯರುಗಳಾದ ಶುಭಲತಾ ಜೆ ರೈ, ಸುಂದರ, ಬೂತ್ ಅಧ್ಯಕ್ಷರಾದ ಜಗನ್ನಾಥ ರೈ, ವಿನೋದ್ ರೈ,ವಿಲಾಸ್ ರೈ,ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳು ಸೇರಿದಂತೆ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.