ಹಿರಿಯ, ಮಹಿಳೆ,ಯುವಕರಲ್ಲಿ ಮೂವರಿಗೆ ಗೌಡ ಸಾಧಕ ಪ್ರಶಸ್ತಿ ಪ್ರದಾನ ಕಾರ್ಯಾರಂಭ
ಅದೃಷ್ಟವಂತ 10 ಮಹಿಳೆಯರಿಗೆ ಪ್ರಸಾದ ರೂಪದಲ್ಲಿ ಸೀರೆ ವಿತರಣೆ
ಪುತ್ತೂರು: ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ, ಗೌಡ ಮಹಿಳಾ ಸಂಘ ಮತ್ತು ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ಇದರ ಸಹಯೋಗದೊಂದಿಗೆ ಡಿ. 24 ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನ ತೆಂಕಿಲ ಇಲ್ಲಿ ವಾರ್ಷಿಕ ಕಾರ್ಯಕ್ರಮ ನಡೆಯಲಿದ್ದು ಇದರ ಅಂಗವಾಗಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ, ತಾಲೂಕಿನ ಯುವ ಸಂಘ, ಮಹಿಳಾ ಸಂಘ ಮತ್ತು ತಾಲೂಕು ಸಮಿತಿಯ ಪದ ಪ್ರಧಾನ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆಯಲಿದೆ ಎಂದು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಭಾ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಯುವ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಹಾಗೂ ಆಯ್ದ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮ ಕೂಡಾ ನಡೆಯಲಿದೆ. ಅಲ್ಲದೇ ಒಕ್ಕಲಿಗ ಸ್ವ ಸಹಾಯ ಒಕ್ಕೂಟದ ಕೆಲವೊಂದು ಗುಂಪುಗಳ ಪದ ಪ್ರಧಾನ ಕೂಡ ನಡೆಯಲಿದೆ. ಆ ದಿನ ಪೂರ್ವಾಹ್ನ ಗಂಟೆ 6.00 ರಿಂದ ಗಣಪತಿ ಹವನ, ಗಂಟೆ 8.00 ರಿಂದ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಗಂಟೆ 10.00 ರಿಂದ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಪರಮಪೂಜ್ಯ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಉಪ ವಿಭಾಗದ ಸಹಾಯಕ ಕಮೀಷನರ್ ಗಿರೀಶ್ ನಂದನ್ ಮುಂತಾದವರು ಭಾಗವಹಿಸಲಿದ್ದಾರೆ. ಸುಮಾರು 4000ಕ್ಕೂ ಮಿಕ್ಕಿ ಪೂಜಾ ರಶೀದಿಗಳ ನಿರೀಕ್ಷೆಯಲ್ಲಿದ್ದು, ಸಭಾ ಕಾರ್ಯಕ್ರಮದ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಕೂಡಾ ನಡೆಯಲಿದೆ ಎಂದವರು ಹೇಳಿದರು.
ಸಾಧಕ ಪ್ರಶಸ್ತಿ:
ಈ ಭಾರಿ ವಿಶೇಷವಾಗಿ ಹಿರಿಯ ಸಂಘ, ಯುವ ಸಂಘ ಮತ್ತು ಮಹಿಳಾ ಸಂಘದಿಂದ, ವಿಶೇಷ ಸಾಧನೆ ಮಾಡಿದ ತಲಾ ಒಬ್ಬರನ್ನು ಗುರುತಿಸಿ ಸಾಧಕ ಪ್ರಶಸ್ತಿಯನ್ನು ನೀಡಲಾಗುವುದು. ಇನ್ನು ಮುಂದಕ್ಕೆ ಈ ಸಾಧಕ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುವುದು ಎಂದು ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ, ನಿಯೋಜಿತ ಅಧ್ಯಕ್ಷ ರವಿ ಮುಂಗ್ಲಿಮನೆ, ಖಜಾಂಚಿ ಲಿಂಗಪ್ಪ ಗೌಡ, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ್ ಗೌಡ ಕಣಜಾಲು, ಯುವ ಗೌಡ ಸೇವಾ ಸಂಘದ ನಿಯೋಜಿತ ಅಧ್ಯಕ್ಷ ಅಮರನಾಥ ಗೌಡ ಉಪಸ್ಥಿತರಿದ್ದರು.
10 ಅದೃಷ್ಟ ಮಹಿಳೆಯರಿಗೆ ಸೀರೆ ಪ್ರಸಾದ:
ವಿಶೇಷ ಆಕರ್ಷಣೆಯಾಗಿ 10 ಮಂದಿ ಮಹಿಳೆಯರ ಹೆಸರನ್ನು ಚೀಟಿ ಎತ್ತುವ ಮೂಲಕ ಅದೃಷ್ಟವಂತ ಮಹಿಳೆ ಎಂದು ಗುರುತಿಸಿ ಪ್ರಸಾದ ರೂಪದಲ್ಲಿ ಸೀರೆಯನ್ನು ಸ್ವಾಮೀಜಿಯವರ ಮೂಲಕ ನೀಡಲಾಗುವುದು. ಈ ವಿಶೇಷ ಆಕರ್ಷಣಾ ಕಾರ್ಯಕ್ರಮಕ್ಕೆ ಆ ದಿನ ಪೂರ್ವಹ್ನ 10.30 ರ ಒಳಗೆ ಟೋಕನ್ ಪಡೆದುಕೊಂಡು ಚೀಟಿಯನ್ನು ಹಾಕತಕ್ಕದ್ದು, ತದ ನಂತರ ಬಂದವರಿಗೆ ಈ ಅವಕಾಶವಿರುವುದಿಲ್ಲ ಎಂದು ಚಿದಾನಂದ ಬೈಲಾಡಿ ತಿಳಿಸಿದರು.