ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿಗೆ 3 ಕೋ.ರೂ. ಅನುದಾನ ಮಂಜೂರು ಮಾಡಲಾಗಿದ್ದು, ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡು 12 ತರಗತಿ ಕೊಠಡಿಗಳ ನಿರ್ಮಾಣವಾಗಲಿವೆ ಎಂದು ಶಾಸಕ, ಕಾಲೇಜು ಆಡಳಿತ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಿಳಿಸಿದರು.
ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಡಿ.19ರಂದು ನಡೆದ ವಾರ್ಷಿಕೋತ್ಸವ ‘ಸಂಭ್ರಮ’ದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಕಾಲೇಜಿನಲ್ಲಿ ತರಗತಿ ಕೊಠಡಿಗಳ ಅಭಾವವಿದೆ ಎಂಬ ಮಾಹಿತಿ ಸಿಕ್ಕಿದ ತಕ್ಷಣ ಇದಕ್ಕೆ ಸ್ಪಂದಿಸಿ ಶಿಕ್ಷಣ ಇಲಾಖೆಯಡಿ ಮೂರು ಕೋಟಿ ರೂ. ಅನುದಾನವನ್ನು ಕಾಲೇಜಿಗೆ ಮಂಜೂರುಗೊಳಿಸಿದ್ದೇನೆ. ಇದರಲ್ಲಿ 12 ಕೊಠಡಿಗಳ ನಿರ್ಮಾಣ ಕಾರ್ಯವಾಗಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಅಲ್ಪಾವಧಿಯಲ್ಲಿಯೇ ಅಭಿವೃದ್ಧಿಯ ಪರ್ವ ಆರಂಭವಾಗಿದೆ ಎಂದರಲ್ಲದೆ, ಪೋಷಕರ, ಶಿಕ್ಷಕರ, ವಿದ್ಯಾರ್ಥಿಗಳ, ಆಡಳಿತ ಸಮಿತಿಯವರ ಸಹಕಾರವಿದ್ದಾಗ ಮಾತ್ರ ಶಿಸ್ತು ಬದ್ಧವಾಗಿ ಸರಕಾರಿ ಕಾಲೇಜುಗಳು ನಡೆಯಲು ಸಾಧ್ಯ. ಇಲ್ಲಿಯ ಶಿಸ್ತನ್ನು ನೋಡಿದಾಗ ಹೆಮ್ಮೆಯೆನಿಸುತ್ತಿದೆ. ವಿದ್ಯಾರ್ಥಿಗಳಿಗೆ ಕನಸು ಕಾಣುವ ಗುಣವಿರಬೇಕು. ಯೋಚನಾ ಶಕ್ತಿ, ಯೋಜನೆ, ಕಠಿಣ ಪರಿಶ್ರಮವಿದ್ದಾಗ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ. ನನ್ನಲ್ಲಿದ್ದ ಕನಸು, ಕಠಿಣ ಪರಿಶ್ರಮವೇ ನಾನು ಹಂತ ಹಂತವಾಗಿ ಮುಂದೆ ಬರಲು ಸಾಧ್ಯವಾಗಿದೆ. ಅಧಿಕಾರ, ಹೆಸರು, ಹಣ ಗಳಿಸಬೇಕೆಂಬ ಉದ್ದೇಶದಿಂದ ನಾನು ರಾಜಕೀಯಕ್ಕೆ ಬಂದಿದ್ದಲ್ಲ. ಎಲ್ಲರಿಗೂ ಸಮಾನ ನ್ಯಾಯ ದೊರಕಿಸಿಕೊಡಬೇಕು. ಬಡವರ ಕೆಲಸಗಳನ್ನು ಮಾಡಿಕೊಡಬೇಕು ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂಬ ಉದ್ದೇಶದಿಂದ ನಾನು ರಾಜಕೀಯಕ್ಕೆ ಬಂದಿದ್ದೇನೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಕಳೆದ ಶೈಕ್ಷಣಿಕ ಸಾಲಿನಲ್ಲಿ ಇಲ್ಲಿನ ದ್ವಿತೀಯ ಪಿಯುಸಿಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಯೋರ್ವಳು ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲೇ ರಾಜ್ಯಕ್ಕೆ ಪ್ರಥಮ ಸ್ಥಾನ ಬರುವ ಮೂಲಕ ರಾಜ್ಯಮಟ್ಟದಲ್ಲಿ ಈ ಕಾಲೇಜು ಮಿನುಗುವಂತೆ ಮಾಡಿದ್ದಾಳೆ. ಎಲ್ಲರಿಂದಲೂ ಇಂತಹ ಸಾಧನೆ ಸಾಧ್ಯವಾಗಲಿ. ಯಾವತ್ತೂ ಕಲಿತ ಶಾಲೆ, ಕಲಿಸಿದ ಗುರು, ಹಿರಿಯರನ್ನು ಮರೆಯಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ರಂಗಭೂಮಿ ಮತ್ತು ಚಲನಚಿತ್ರ ನಿರ್ದೇಶಕ ಡಾ. ದೇವದಾಸ್ ಕಾಪಿಕಾಡ್ ಮಾತನಾಡಿ, ವಿದ್ಯೆ ನಮ್ಮಲ್ಲಿದ್ದಾಗ ಊಟಕ್ಕೆ ಬರಗಾಲವಿಲ್ಲ. ವಿದ್ಯಾರ್ಥಿಗಳು ನಮ್ಮ ಗುರಿ, ಉದ್ದೇಶಗಳ ಬಗ್ಗೆ ಗಮನದಲ್ಲಿಟ್ಟುಕೊಂಡಿರಬೇಕು. ಉತ್ತಮರ ಸಂಘ ಮಾಡಬೇಕು. ತಮ್ಮ ಗೆಳೆಯರೇನಾದರೂ ತಪ್ಪಿದ್ದಲ್ಲಿ ಅವರನ್ನು ನೀವೇ ತಿದ್ದುವ ಕೆಲಸ ಮಾಡಬೇಕು. ದುಶ್ಚಟಗಳಿಂದ ದೂರವಿರಬೇಕು. ಜೀವನದುದ್ದಕ್ಕೂ ಗುರು- ಶಿಷ್ಯರ ಸಂಬಂಧ ಉತ್ತಮವಾಗಿರಬೇಕು. ಆಗ ಉತ್ತಮ ವಿದ್ಯಾರ್ಥಿಗಳು ನೀವಾಗುವುದಲ್ಲದೆ, ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಅವಿಭಜಿತ ದ.ಕ. ಜಿಲ್ಲೆಯ ಜಮೀಯತುಲ್ ಫಲಾಹ್‌ನ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ. ಮಾತನಾಡಿ, ನಾವು ಎಷ್ಟೇ ಸಂಪಾದಿಸಿದರು ನಮ್ಮ ಹೆಸರಿನ ಜೊತೆಗೆ ಕೊನೆ ತನಕ ನಿಲ್ಲುವುದು ನಾವು ಪಡೆದ ಉನ್ನತ ಶಿಕ್ಷಣ ಮಾತ್ರ. ದ್ವೇಷ ರಹಿತವಾದ, ಸೌಹಾರ್ದತೆಯ ಸಮಾಜವನ್ನು ಕಟ್ಟಬೇಕಾಗಿದ್ದು, ಅದಕ್ಕಾಗಿ ವಿದ್ಯಾರ್ಥಿ ಸಮೂಹ ಮುಂದಾಗಬೇಕು ಎಂದರು.
ವೇದಿಕೆಯಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಲಲಿತಾ , ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಡಾ. ರಾಜಾರಾಂ ಕೆ.ಬಿ., ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಶರ್ಮಿಳಾ ಡಿ. ಕಾಪಿಕಾಡ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಅನಿ ಮಿನೇಜಸ್, ಇಬ್ರಾಹೀಂ ಯು. ಕೆ., ನಝೀರ್ ಮಠ, ನಾಗೇಶ್ ಪ್ರಭು, ಆದಂ ಕೊಪ್ಪಳ, ವೆಂಕಪ್ಪ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 2022-23ನೇ ಸಾಲಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕು. ರಹಿನಾಝ್, ಕ್ರೀಡಾ ಸಾಧಕ ಮುಹಮ್ಮದ್ ನಿಶಾನ್, ಪ್ರಬಂಧ ಮಂಡನೆಗೈದು ಡಾಕ್ಟರೇಟ್ ಪಡೆದ ಉಪನ್ಯಾಸಕಿ ಡಾ. ಮಂಜುಳಾ ಬಣಕಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಅಜೀಜ್ ಬಸ್ತಿಕ್ಕಾರ್ ಸ್ವಾಗತಿಸಿದರು. ಕಾಲೇಜಿನ ಪ್ರಾಚಾರ್ಯರಾದ ಸುಧೀರ್ ಕುಮಾರ್ ಎಂ. ವರದಿ ಮಂಡಿಸಿದರು. ಉಪನ್ಯಾಸಕರಾದ ನವ್ಯಶ್ರೀ ನಾಯ್ಕ, ಡಾ. ಮಂಜುಳಾ ಬಣಕಾರ್, ಇಬ್ರಾಹೀಂ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಸ್ವಂತ ನಿಧಿಯಿಂದ 10 ಲಕ್ಷ ರೂ.: ಅಶೋಕ್ ಕುಮಾರ್ ರೈ
ಸರಕಾರಿ ನೌಕರರಿಗೆ ವೃತ್ತಿಯಲ್ಲಿ ನಿವೃತ್ತಿ ಇರುವಂತೆ ರಾಜಕಾರಣಿಗಳಿಗೂ ನಿವೃತ್ತಿ ಇರಬೇಕು. ವಿದ್ಯಾವಂತ ಯುವ ಸಮೂಹ ರಾಜಕೀಯ ಬರಬೇಕು. ಇದಕ್ಕಾಗಿ ದೇಶದ ಕಾನೂನುನಿನಲ್ಲಿ ಬದಲಾವಣೆಗಳಾಗಬೇಕಿದೆ. ಆಗ ಭ್ರಷ್ಟಾಚಾರ ರಹಿತ ದೇಶ ನಮ್ಮದಾಗಲು ಸಾಧ್ಯ ಎಂಬ ಆಶಯ ವ್ಯಕ್ತಪಡಿಸಿದ ಶಾಸಕ ಅಶೋಕ್ ಕುಮಾರ್ ರೈಯವರು, ಕಾಲೇಜಿನ ಎರಡು ಕೊಠಡಿಗಳಿಗೆ ಮೇಲ್ಚಾವಣಿ ನಿರ್ಮಿಸಲು ಕಾಲೇಜು ಅಭಿವೃದ್ಧಿ ಸಮಿತಿಯವರು ಬೇಡಿಕೆ ಮುಂದಿಟ್ಟಾಗ, ಶಾಸಕರ ಸ್ವಂತ ನಿಧಿಯಿಂದ 10 ಲಕ್ಷ ರೂ.ಗಳನ್ನು ನೀಡುವುದಾಗಿ ಭರವಸೆ ನೀಡಿದರು.