ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶೈವ ಸಂಪ್ರದಾಯದಂತೆ ಕ್ಷೇತ್ರ ಸಾನಿಧ್ಯ ಶಿವ ಪಾರ್ವತಿ ಸಂತೃಪ್ತಿಗಾಗಿ, ಸಮಸ್ತ ಭಕ್ತಾದಿಗಳ ಹಿತಕ್ಕಾಗಿ ಲೋಕಕಲ್ಯಾಣಾರ್ಥವಾಗಿ ಗಿರಿಜಾ ಕಲ್ಯಾಣೋತ್ಸವ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸುವಂತೆ ಶೈವಕ್ಷೇತ್ರ ಸಂರಕ್ಷಣಾ ವೇದಿಕೆಯಿಂದ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಗೆ ಮನವಿ ಮಾಡಲಾಗಿದೆ.
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಕರ್ನಾಟಕ ರಾಜ್ಯ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಎ ಶ್ರೇಣಿಯ ಪುರಾತನ ಪ್ರಸಿದ್ಧ ಕ್ಷೇತ್ರ. ಶ್ರೀ ದೇವಳದಲ್ಲಿ ಶ್ರೀ ಮಹಾಲಿಂಗೇಶ್ವರ (ಶಿವ) ದೇವರು ಪ್ರಧಾನ ದೇವರು. ಜಗನ್ಮಾತೆ ಆದಿಶಕ್ತಿ ಪಾರ್ವತಿ ದೇವಿ (ಗಿರಿಜೆ)ಯ ಸಾನ್ನಿಧ್ಯವು ಪ್ರಧಾನವಾಗಿದೆ. ಈ ಕ್ಷೇತ್ರದಲ್ಲಿ ಶೈವ ಸಂಪ್ರದಾಯದ ಪ್ರಕಾರ ಶಿವ ಮತ್ತು ಶಿವಪರಿವಾರ ದೇವರುಗಳಿಗೆ ಸಂಬಂಧಪಟ್ಟ ಧಾರ್ಮಿಕ ಕಾರ್ಯಕ್ರಮಗಳನ್ನೇ ನಡೆಸಬೇಕು. ದೇವಳದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಶಿವ ಪಾರ್ವತಿ ಸಂತೃಪ್ತಿಗಾಗಿ, ಕ್ಷೇತ್ರ ಸಾನಿಧ್ಯ ವೃದ್ಧಿಗಾಗಿ, ಲೋಕಕಲ್ಯಾಣಾರ್ಥವಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ವತಿಯಿಂದ ಲಕ್ಷಾಂತರ ಭಕ್ತಾದಿಗಳನ್ನು ಸೇರಿಸಿ ಗಿರಿಜಾ ಕಲ್ಯಾಣೋತ್ಸವ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಸುವಂತೆ ಸೂಚಿಸಿದ್ದಾರೆ. ಅದರಂತೆ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಶೈವಕ್ಷೇತ್ರ ಸಂರಕ್ಷಣಾ ವೇದಿಕೆಯ ಸಂಸ್ಥಾಪಕ ಶ್ರೀನಾಥ್ ಟಿ.ಎಸ್ ಅವರು ದೇವಳದ ವ್ಯವಸ್ಥಾಪನಾ ಸಮಿತಿಗೆ ಮನವಿ ಮಾಡಿದ್ದಾರೆ.