ಬೆಥನಿ ವಿದ್ಯಾಸಂಸ್ಥೆಯಲ್ಲಿ ‘ಸೃಷ್ಟಿ 2023’ ಸಮಾರೋಪ

0

ಎನ್‌ಇಪಿ, ಎಸ್‌ಇಪಿ ಜಾರಿಗಿಂತ ಶಿಕ್ಷಕರ ಹುದ್ದೆ ಭರ್ತಿ ಮುಖ್ಯ: ಭೋಜೇಗೌಡ

ನೆಲ್ಯಾಡಿ: ಜ್ಞಾನೋದಯ ಬೆಥನಿ ಪಿ.ಯು.ಕಾಲೇಜು, ಎಸ್.ಬಿ.ಕಾಲೇಜು ಹಾಗೂ ಬೆಥನಿ ಐಟಿಐ ಆಶ್ರಯದಲ್ಲಿ ಬೆಥನಿ ವಿದ್ಯಾಸಂಸ್ಥೆಯಲ್ಲಿ ಡಿ.21 ಹಾಗೂ 22 ರಂದು ನಡೆದ ಕಲೆ, ಜೀವನ ಕೌಶಲ್ಯ, ವಿಜ್ಞಾನ ಮತ್ತು ಸಂಸ್ಕೃತಿ ಪ್ರದರ್ಶನ ‘ಸೃಷ್ಟಿ 2023’ರ ಸಮಾರೋಪ ಸಮಾರಂಭ ಡಿ.22ರಂದು ಸಂಜೆ ನಡೆಯಿತು.


ಮುಖ್ಯ ಅತಿಥಿಯಾಗಿದ್ದ ವಿಧಾನಪರಿಷತ್ ಸದಸ್ಯ ಭೋಜೇಗೌಡ ಅವರು ಮಾತನಾಡಿ, ರಾಜ್ಯದಲ್ಲಿ ಶೇ.45ರಷ್ಟು ಶಿಕ್ಷಕರ ಹುದ್ದೆ ಖಾಲಿ ಇದೆ. ರಾಜ್ಯ ಸರಕಾರ ಎನ್‌ಇಪಿ. ಎಸ್‌ಇಪಿ ಜಾರಿಗಿಂತ ಮೊದಲು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿಗೊಳಿಸಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವುದು ಮುಖ್ಯವಾಗಿದೆ. ಸರಕಾರದಿಂದ ಆಗದ ಕೆಲಸಗಳನ್ನು ಜ್ಞಾನೋದಯ ಬೆಥನಿಯಂತಹ ಸಾವಿರಾರು ವಿದ್ಯಾಸಂಸ್ಥೆಗಳು ಶಿಕ್ಷಣ ದಾನ, ಅಕ್ಷರ ದಾನದ ಮೂಲಕ ಮಾಡುತ್ತಿವೆ. ಶಿಕ್ಷಕರ ಕೊರತೆಯ ನಡುವೆಯೂ ಗುಣಮಟ್ಟದ ಶಿಕ್ಷಣ ನೀಡುತ್ತಿವೆ ಎಂದು ಹೇಳಿದರು. ಮನೆಯೇ ಮೊದಲ ಪಾಠ ಶಾಲೆಯಾದರೂ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆ ಎಂದು ತಿಳಿದು ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮಕ್ಕಳಿಗೆ ಶಿಸ್ತು ಬದ್ಧ ಶಿಕ್ಷಣ ದೊರೆತಲ್ಲಿ ಅವರು ಮನೆಗೆ, ಸಮಾಜಕ್ಕೆ ಬೆಳಕಾಗಿ ಸಾಮರಸ್ಯ, ಸ್ವಾಸ್ಥ್ಯ ಸಮಾಜ ನಿರ್ಮಾಣ ಆಗಲಿದೆ. ಸಂವಿಧಾನದ ಆಶಯದಂತೆ ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣವಾಗಬೇಕೆಂದು ಭೋಜೇಗೌಡ ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೆ.ಫಾ.ಜೈಸನ್ ಸೈಮನ್ ಒಐಸಿ ಅವರು ಮಾತನಾಡಿ, ಎರಡು ದಿನ ನಡೆದ ಕಲೆ, ಜೀವನ ಕೌಶಲ್ಯ, ವಿಜ್ಞಾನ ಮತ್ತು ಸಂಸ್ಕೃತಿಯ ಪ್ರದರ್ಶನ ‘ಸೃಷ್ಟಿ 2023’ಯಶಸ್ವಿಯಾಗಿದೆ. ಇದೊಂದು ಮಕ್ಕಳಿಗೆ ದೊರೆತಿರುವ ಸದಾವಕಾಶವಾಗಿದೆ. ಮಕ್ಕಳು ತಮಗೆ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಪ್ರತಿಭೆಯ ಪ್ರದರ್ಶನ ಮಾಡಿದ್ದಾರೆ. ಎರಡು ದಿನದಲ್ಲಿ ನೆರೆಯ ಶಾಲೆಯ ಮಕ್ಕಳು, ಸಾರ್ವಜನಿಕರು ಸೇರಿದಂತೆ 5 ಸಾವಿರ ಮಂದಿ ಕಾರ್ಯಕ್ರಮ ವೀಕ್ಷಿಸಿದ್ದಾರೆ ಎಂದರು.

ಅತಿಥಿಯಾಗಿದ್ದ ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್ ಅವರು ಮಾತನಾಡಿ, ಎರಡು ದಿನ ನಡೆದ ಸೃಷ್ಟಿ 2023ರಲ್ಲಿ ಮಕ್ಕಳು ತಮ್ಮ ಪ್ರತಿಭೆಯನ್ನು ತೋರ್ಪಡಿಸಿದ್ದಾರೆ. ಇದೊಂದು ಮಕ್ಕಳು ಮುಂದಿನ ಜೀವನದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ. ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿ ಮಾಡಿಕೊಳ್ಳಬೇಕೆಂದು ಹೇಳಿದರು.

ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕರಾದ ರೆ.ಫಾ.ನೋಮಿಸ್ ಕುರಿಯಾಕೋಸ್ ಅವರು ಮಾತನಾಡಿ, ಮಕ್ಕಳು ವಿದ್ಯಾರ್ಜನೆಯೊಂದಿಗೆ ನೈತಿಕ ಮೌಲ್ಯವನ್ನೂ ರೂಢಿಸಿಕೊಂಡು ಆದರ್ಶರಾಗಿ ಬೆಳೆಯಬೇಕು. ಸೃಷ್ಟಿ 2023 ಆಯೋಜಿಸುವ ಮೂಲಕ ಬೆಥನಿ ವಿದ್ಯಾಸಂಸ್ಥೆಯೂ ಮಕ್ಕಳಿಗೆ ತಮ್ಮಲ್ಲಿನ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.

ಬಿಜೆಪಿ ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಮಿತಿ ಮಾಜಿ ಸದಸ್ಯ ಡಾ.ಅನಿಲ್ ಈಶೋ ಅವರು ಮಾತನಾಡಿ, ಬೆಥನಿ ವಿದ್ಯಾಸಂಸ್ಥೆಯು ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಇದಕ್ಕೆ ಪೂರಕವಾಗಿ ಸೃಷ್ಟಿ 2023 ಆಯೋಜಿಸಿ ನೆರೆಯ ಶಾಲೆಗಳೂ ಇದರಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು. ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ ಅವರು ಮಾತನಾಡಿ, 45ವರ್ಷ ಹಿಂದೆ ನೆಲ್ಯಾಡಿಯಲ್ಲಿ ಬೆಥನಿ ವಿದ್ಯಾಸಂಸ್ಥೆ ಆರಂಭಗೊಂಡಿದ್ದರಿಂದ ಇಲ್ಲಿ ವಿದ್ಯಾರ್ಜನೆ ಮಾಡಿದ ಸಾವಿರಾರು ಮಂದಿ ಉನ್ನತ ಹುದ್ದೆ ಪಡೆದುಕೊಂಡು ಬದುಕು ರೂಪಿಸಿಕೊಂಡಿದ್ದಾರೆ ಎಂದರು. ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್ ಅವರು ಮಾತನಾಡಿ, ಸೃಷ್ಟಿ 2023 ಅತ್ಯುದ್ಭುತವಾಗಿ ಮೂಡಿಬಂದಿದೆ. ಬೆಥನಿ ವಿದ್ಯಾಸಂಸ್ಥೆಯಿಂದ ಇಂತಹ ಕಾರ್ಯಕ್ರಮ ಇನ್ನಷ್ಟೂ ಮೂಡಿಬರಲಿ ಎಂದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌ರವರು ಮಾತನಾಡಿ, ಬೆಥನಿ ವಿದ್ಯಾಸಂಸ್ಥೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಯಶಸ್ವಿಯಾಗಿ ಕಾರ್ಯಕ್ರಮ ಸಂಘಟಿಸಿದೆ. ಎರಡು ದಿನ ನಡೆದ ಕಾರ್ಯಕ್ರಮಕ್ಕೆ ಸುಮಾರು 5 ಸಾವಿರ ಮಂದಿ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ ಎಂದರು.

ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ವರ್ಗೀಸ್ ಕೈಪುನಡ್ಕ, ಎಸ್.ಬಿ.ಪದವಿ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ಜಿಜನ್ ಅಬ್ರಹಾಂ, ಬೆಥನಿ ಐಟಿಐನ ಉಪಪ್ರಾಂಶುಪಾಲ ಜಾನ್ ಪಿ.ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಥನಿ ಐಟಿಐನ ಪ್ರಾಂಶುಪಾಲರಾದ ಸಜಿ ಕೆ.ತೋಮಸ್ ಸ್ವಾಗತಿಸಿ, ಬೆಥನಿ ಪ.ಪೂ.ಕಾಲೇಜಿನ ಉಪಪ್ರಾಂಶುಪಾಲ ಜೋಸ್ ಎಂ.ಜೆ.ವಂದಿಸಿದರು. ವಿದ್ಯಾರ್ಥಿನಿ ವಿಲ್ಸಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಗೊಂಡಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

ಉಚಿತ ವೈದ್ಯಕೀಯ ಶಿಬಿರ:
‘ಸೃಷ್ಟಿ 2023’ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗಾಗಿ ಬೆಥನಿ ವಿದ್ಯಾಸಂಸ್ಥೆಯ ಆವರಣದಲ್ಲಿ ಸುರತ್ಕಲ್ ಮುಕ್ಕ ಶ್ರೀನಿವಾಸ ಆಸ್ಪತ್ರೆಯ ವೈದ್ಯರಿಂದ ಉಚಿತ ವೈದ್ಯಕೀಯ ಶಿಬಿರ ನಡೆಯಿತು. ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿಜ್ಞಾನ ಮಾದರಿ ಸೇರಿದಂತೆ ಇತರೇ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.

LEAVE A REPLY

Please enter your comment!
Please enter your name here