ಕೊರೋನಾ ಆತಂಕ ಬೇಡ, ಎಚ್ಚರಿಕೆ ವಹಿಸಿ – ಮಾರ್ಗಸೂಚಿ ಪ್ರಕಟಿಸಿದ ಖಾಸಗಿ ಶಾಲೆಗಳ ಒಕ್ಕೂಟ

0

ಬೆಂಗಳೂರು:ರಾಜ್ಯದಲ್ಲಿ ಮಹಾಮಾರಿ ಕೊರೋನಾ ಸೋಂಕು ಮತ್ತೆ ಹೆಚ್ಚಾಗುತ್ತಿರುವ ಈ ನಡುವಲ್ಲೇ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ(ಕ್ಯಾಮ್ಸ್)ವು ತನ್ನ ವ್ಯಾಪ್ತಿಯ ಶಾಲೆಗಳಿಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾರ್ಗಸೂಚಿಯನ್ನು ಪ್ರಕಟಿಸಿದೆ.
ವಿದ್ಯಾರ್ಥಿಗಳಿಗೆ ಜ್ವರ, ಸಾಂಕ್ರಾಮಿಕವಿದ್ದರೆ ನಿರ್ಲಕ್ಷಿಸದೆ ವೈದ್ಯಕೀಯ ಆರೈಕೆ ಪಡೆಯಲು ನಿರ್ದೇಶನ ನೀಡಿ. ಪರೀಕ್ಷೆ ಅಥವಾ ತರಗತಿಗಳು ಕೈ ತಪ್ಪಲಿವೆ ಎಂಬ ನೆಪ ನೀಡಿ ಮಕ್ಕಳನ್ನು ಶಾಲೆಗೆ ಕಳಹಿಸುವ ಪಾಲಕರನ್ನು ಪ್ರೋತ್ಸಾಹಿಸಬೇಡಿ. ಸಾಂಕ್ರಾಮಿಕ ರೋಗ ಕುರಿತು ಶಾಲೆಗಳಲ್ಲಿ ಆತಂಕ ಸೃಷ್ಟಿಸಬೇಡಿ. ಅದರ ಬದಲಾಗಿ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಬೇಕು. ವಿವಿಧ ರೂಪಾಂತರ ಇರುವುದರಿಂದ ಹೆಚ್ಚಿನ ಕಾಳಜಿ ವಹಿಸಿ ಸೋಂಕುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಸೂಚಿಸಿದೆ.
ಶಾಲೆ ಮತ್ತು ಮನೆಯ ವಾತಾವರಣ ನೈರ್ಮಲ್ಯವಾಗಿರುವಂತೆ ಕ್ರಮ ಕೈಗೊಳ್ಳುವುದು. ಶಾಲೆಯಲ್ಲಿ ಹಠಾತ್ ಅಸ್ವಸ್ಥರಾದ ಮಕ್ಕಳನ್ನು ಪ್ರತ್ಯೇಕವಾಗಿರಿಸಿ ಎಚ್ಚರಿಕೆ ವಹಿಸುವುದು. ತಕ್ಷಣವೇ ಪಾಲಕರ ಗಮನಕ್ಕೆ ತಂದು ಸಲಹೆ ನೀಡುವುದು. ರಜಾ ದಿನಗಳಂದು ಪಾಲಕರೊಂದಿಗೆ ಯಾತ್ರಾ ಸ್ಥಳಗಳು, ಜನಸಂದಣಿಯಿಂದ ಕೂಡಿರುವ ಪ್ರವಾಸಿ ತಾಣಗಳಿಗೆ ಹೋಗುವ ವೇಳೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಶಾಲಾ ಪ್ರವಾಸ ಕೈಗೊಂಡಿದ್ದಲ್ಲಿ ಪೋರ್ಟೆಬಲ್ ಆಮ್ಲಜನಕ ಕಿಟ್ ಅನ್ನು ಕೊಂಡೊಯ್ಯಿರಿ. ಅಗತ್ಯವಿದ್ದಲ್ಲಿ ಕ್ಯಾಮ್ಸ್ ಅನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ. ಕ್ಯಾಮ್ಸ್ ಹೊರಡಿಸಿರುವ ಈ ಮಾರ್ಗಸೂಚಿಗೆ ಪೋಷಕರ ಸಮನ್ವಯ ಸಮಿತಿ ವಿರೋಧ ವ್ಯಕ್ತಪಡಿಸಿದೆ. ಸಲಹೆ ನೀಡುವ ಮುನ್ನ ಕ್ಯಾಮ್ಸ್ ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಿಲ್ಲ ಎಂದು ಆರೋಪಿಸಿದೆ. ಸರ್ಕಾರ ಯಾವುದೇ ಹೇಳಿಕೆ ನೀಡದಿರುವಾಗ ಬೇರೆ ಯಾವುದೇ ಸಂಸ್ಥೆ ಮಾರ್ಗಸೂಚಿಗಳನ್ನು ಹೇಗೆ ಹೊರಡಿಸುತ್ತದೆ ಎಂದು ಅದು ಪ್ರಶ್ನಿಸಿದೆ.

LEAVE A REPLY

Please enter your comment!
Please enter your name here