ಡಿ.25-27 ಪಾಲಿಂಜೆ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜಾತ್ರೋತ್ಸವದ ಸಂಭ್ರಮ

0

ಪುತ್ತೂರು:ಕುರಿಯ ಗ್ರಾಮದ ಅಮ್ಮುಂಜ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವವು ಡಿ.25ರಿಂದ ಪ್ರಾರಂಭಗೊಂಡು ಡಿ.27ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.


ಡಿ.25ರಂದು ಸಂಜೆ ಭಕ್ತಾದಿಗಳಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಲಿದ್ದು, ಮೊಟ್ಟತ್ತಡ್ಕ ಮಿಶನ್‌ಮೂಲೆ ಶ್ರೀಚಾಮುಂಡೇಶ್ವರಿ ದೇವಸ್ಥಾನದ ಬಳಿಯಲ್ಲಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಬಳಿಕ ಮುಖ್ಯರಸ್ತೆಯ ಮೂಲಕ ಸಾಗಿ ದೇವಸ್ಥಾನದಲ್ಲಿ ಸಮಾಪನಗೊಳ್ಳಲಿದೆ. ರಾತ್ರಿ ದೇವಸ್ಥಾನದಲ್ಲಿ ಶ್ರೀದೇವತಾ ಪ್ರಾರ್ಥನೆ ಹಾಗೂ ಉಗ್ರಾಣಪೂಜೆ ನಡೆಯಲಿದೆ. ಡಿ.26ರಂದು ಅರ್ಧ ಏಕಾಹ ಭಜನೆ ನಡೆಯಲಿದ್ದು ಬೆಳಿಗ್ಗೆ 6 ಗಂಟೆಗೆ ಭಜನೆ ಪ್ರಾರಂಭಗೊಳ್ಳಲಿದೆ. ನಂತರ ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆಯಲಿದೆ. ಬೆಳಿಗ್ಗೆ 7.30ಕ್ಕೆ ಗಣಹೋಮ, ನಾಗಸನ್ನಿಧಿಯಲ್ಲಿ ಆಶ್ಲೇಷ ಬಲಿ, ನಾಗತಂಬಿಲ, ಮಹಾವಿಷ್ಣುಮೂರ್ತಿ ದೇವರಿಗೆ ಪವಮಾನಾಭಿಷೇಕ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಯಿಂದ ಶ್ರೀದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಚಾಮುಂಡೇಶ್ವರಿ ದೇವಸ್ಥಾನದ ತನಕ ದೇವರ ಪೇಟೆ ಸವಾರಿ, ನಂತರ ದೇವಸ್ಥಾನಕ್ಕೆ ಹಿಂತಿರುಗಿ ದೇವರಿಗೆ ಕಲಶಾಭಿಷೇಕ, ಸಂಪ್ರೋಕ್ಷಣೆ, ವೈದಿಕ ಮಂತ್ರಾಕ್ಷತೆ, ತೀರ್ಥಪ್ರಸಾದ ನಡೆಯಲಿದೆ.
ಜ.೭ರಂದು ಸಂಜೆ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ಭಜನಾ ಮಂಡಳಿಯವರಿಂದ ಭಜನೆ, ಸಂಜೆ 6ರಿಂದ ದುರ್ಗಾಪೂಜೆ ಹಾಗೂ ಕಾರ್ತಿಕ ಪೂಜೆ ನಡೆಯಲಿದೆ. ರಾತ್ರಿ ದೈವಗಳ ನೇಮೋತ್ಸವ ಹಾಗೂ ಅನ್ನಸಂತರ್ಪಣೆಯೊಂದಿಗೆ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here