ಆ. 27ರಂದು ಬೆಳಿಗ್ಗೆ ಗಣೇಶ ಪ್ರತಿಷ್ಠೆ, ಭಜನಾ ಸಂಕೀರ್ತನೆ, ಯಕ್ಷಗಾನ ತಾಳಮದ್ದಳೆ, ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ನೃತ್ಯಾರ್ಪಣೆ ನಡೆಯಲಿದೆ. ಸಂಜೆ ಶ್ರೀ ಗೌರಿ ಗಣೇಶನ ಶೋಭಾಯಾತ್ರೆ ಜರುಗಲಿದೆ.
ಪಾಣಾಜೆ: ಆರ್ಲಪದವು ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ 40 ನೇ ವರ್ಷದ ಗೌರಿ ಗಣೇಶೋತ್ಸವ ಆ. 26 ರಂದು ಆರಂಭಗೊಂಡಿತು. ಬೆಳಿಗ್ಗೆ ಗೌರಿ ಪ್ರತಿಷ್ಟಾಪನೆಗೊಂಡು ನಂತರ ವಿವಿಧ ಕಾರ್ಯಕ್ರಮಗಳು ಬ್ರಹ್ಮಶ್ರೀ ವೇ.ಮೂ. ಶ್ರೀಕೃಷ್ಣ ಭಟ್ ಬಟ್ಯಮೂಲೆಯವರ ಪೌರೋಹಿತ್ಯದಲ್ಲಿ ಜರುಗಿದವು. ಸುಳ್ಯ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾI ಲೀಲಾಧರ ಡಿ.ವಿ. ಮಹಾಗಣಪತಿಗೆ ಬೆಳ್ಳಿಕಿರೀಟವನ್ನು ಸೇವಾರ್ಥವಾಗಿ ಸಮರ್ಪಿಸಿದರು.

ಅಪರಾಹ್ನ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿಯವರು ಮಾತನಾಡಿ ‘ಸಮಾಜದಲ್ಲಿ ಯಾವುದು ನಡೆಯಬಾರದೆಂದು ಹೇಳುತ್ತೇವೆಯೋ ಅದೇ ನಡೆಯುತ್ತಿದೆ. ವಿಶ್ವದಲ್ಲೇ ಭಾರೀ ಗೌರವ ಮರ್ಯಾದೆ ಇರುವ ದೇಶ ನಮ್ಮದು. ಸ್ವಾತಂತ್ರ್ಯ ದ ಅರ್ಥ ಸ್ವೇಚ್ಛಾಚಾರಕ್ಕೆ ತಿರುಗುತ್ತಿದೆ. ವೃದ್ಧಾಶ್ರಮಕ್ಕೆ ಕಾರಣರಾದವರು ನಾವೇ. ನಮ್ಮ ಮಕ್ಕಳಿಗೆ ಸರಿಯಾದ ದಾರಿಯಲ್ಲಿ ಶಿಕ್ಷಣ ಮತ್ತು ಜೀವನದ ಕ್ರಮಗಳನ್ನು ಕಲಿಸಿಕೊಡದ ಪರಿಣಾಮವನ್ನು ನಾವೇ ಅನುಭವಿಸುವಂತಾಗಿದೆ’ ಎಂದರು.
ಸಭಾ ಕಾರ್ಯಕ್ರಮವನ್ನು ನಿವೃತ್ತ ಮುಖ್ಯಗುರು ಪ್ರತಿಭಾ ಟೀಚರ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಧಾರ್ಮಿಕ ಪ್ರವಚನ ನೀಡಿದ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ಶೋಭಿತಾ ಸತೀಶ್ ರವರು ಮಾತನಾಡಿ ‘ಮನೆಯೊಳಗೆ ಆಚರಿಸುವ ಗೌರಿ ಹಬ್ಬ ಸಮೃದ್ಧಿ, ಆತ್ಮವಿಶ್ವಾಸದ ಪ್ರತೀಕವಾದುದು. ಮಹಿಳೆಯರು ಸಂಭ್ರಮದಿಂದ ಪಾಲ್ಗೊಂಡು ಆಚರಿಸುವ ಹಬ್ಬವನ್ನು ಯುವಕರು ಮುನ್ನಡೆಸುತ್ತಿರುವುದು ವಿಶೇಷವಾದುದು. ಸ್ಕಂದ ಪುರಾಣದಲ್ಲಿ ಗೌರಿ ವ್ರತ ಶ್ರೇಷ್ಠತೆಯನ್ನು ಹೇಳಲಾಗಿದೆ. ಗೌರಿ ಎಂದರೆ ಭಾವನೆಗಳನ್ನು ಗಟ್ಟಿಗೊಳಿಸಿ ಸರ್ವರನ್ನೂ ಒಗ್ಗೂಡಿಸುವ ಶಕ್ತಿ. ಇಂದೋರ್ ನ ಕೈಗಾರಿಕಾ ಶಕ್ತಿ, ದೇವಾಲಯಗಳ ರಾಣಿ ಅಹಲ್ಯಾ ಬಾಯಿ ಹೋಳ್ಕರ್, ಉಳ್ಳಾಲದ ರಾಣಿ ಅಬ್ಬಕ್ಕ, 50 ಕ್ಕಿಂತ ಹೆಚ್ಚು ವರ್ಷ ಒಂದು ಊರನ್ನಾಳಿದ ಚೆನ್ನಬೈರಾದೇವಿ ಗೌರಿ ತಾಯಿಯ ಸ್ವರೂಪಗಳಾಗಿದ್ದಾರೆ. ಅವರ ಆದರ್ಶಗಳು ನಮಗೆ ಪ್ರೇರಣೆದಾಯಿಯಾಗಿವೆ.
ಹೈಕೋರ್ಟ್ ನ್ಯಾಯವಾದಿ ರಾಜರಾಮ್ ಸೂರ್ಯಂಬೈಲು ರವರು ಮಾತನಾಡಿ ‘ಸನಾತನ ಹಿಂದೂ ಪರಂಪರೆ ಅವಿಚ್ಛಿನ್ನ ಪರಂಪರೆಯಾಗಿ ಕಂಗೊಳಿಸುತ್ತಿದೆ. ಹಿಂದು ಶ್ರದ್ದಾಕೇಂದ್ರಗಳನ್ನು ಒಂದು ಕಾಲದಲ್ಲಿ ಕೆಡಹಿದರೂ ಇಂದು ಪುನರುತ್ಹಾನಗೊಳ್ಳುತ್ತಿರುವುದು ಧರ್ಮದ ಶ್ರೇಷ್ಠತೆಯನ್ನು ಬಿಂಬಿಸುತ್ತದೆ. ಧರ್ಮಸ್ಥಳದಂತಹ ಹಿಂದು ಕೇಂದ್ರಗಳಿಗೆ ದಾಳಿಯ ಷಡ್ಯಂತ್ರ ನಡೆಯುತ್ತಿದೆಯೆಂದರೆ ನಾವು ಎಚ್ಚೆತ್ತುಕೊಳ್ಳಬೇಕೆನ್ನುವುದು ಇದರ ಸಾರವಾಗಿದೆ. ಹಿಂದು ಮಹಿಳಾ ದೌರ್ಜನ್ಯದ ವಿರುದ್ದ ನಾವು ಎಚ್ಚೆತ್ತುಕೊಳ್ಳಬೇಕು’ ಎಂದರು.
ಮುಖ್ಯ ಅತಿಥಿಯಾಗಿದ್ದ ಪಾಣಾಜೆ ಪ್ರಾ.ಕೃ.ಪ.ಸಹಕಾರಿ ಸಂಘದ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್ ರವರು ಮಾತನಾಡಿ ‘ಸಂಘಟನೆಗಳು ಬಲಗೊಂಡಾಗ ಒಂದು ಊರಿನಲ್ಲಿ ಎಷ್ಟೆಲ್ಲಾ ಉತ್ತಮ ಕೆಲಸಗಳು ನಡೆಯುತ್ತವೆ ಎಂಬುದಕ್ಕೆ ಪಾಣಾಜೆಯಂತಹ ಊರು ಉದಾಹರಣೆಯಾಗುತ್ತದೆ. ಹಿಂದು ಧಾರ್ಮಿಕ ಆಚರಣೆಗಳನ್ನು ಬೇರೆ ಬೇರೆ ಸಂಘಟನೆಗಳು ಮೂಲಕ ನಡೆಯುತ್ತಿರುವುದು ಈ ಊರಿನ ಬೌದ್ಧಿಕ ಶ್ರೀಮಂತಿಕೆಯನ್ನು ವೃದ್ಧಿಸಿದೆ’ ಎಂದರು.
ಕುದ್ರೊಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿಯವರು ಮಾತನಾಡಿ ‘ಪಾಣಾಜೆ ಮತ್ತು ನನಗೂ ಒಂದು ಸಂಬಂಧವಿದೆ. ಗೌರಿ ವ್ರತ ಆಚರಣೆ ಆರಂಭಿಸಿರುವುದು ಇಲ್ಲಿನ ವಿಶೇಷವಾಗಿದೆ. ದೇವರು ಅನುಗ್ರಹಿಸಿದ ಸುಖ ಶಾಂತಿ ನೆಮ್ಮದಿಯನ್ನು ಚೆನ್ನಾಗಿ ಬಳಸಿಕೊಳ್ಳುವುದನ್ನು ತಿಳಿದುಕೊಳ್ಳಬೇಕು. ಹಿರಿಯರು ತೋರಿಸಿಕೊಟ್ಟ ದಾರಿಯಲ್ಲಿ ನಾವು ಸಾಗಬೇಕು’ ಎಂದರು.
ಜಿ.ಪಂ. ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿಯವರು ಮಾತನಾಡಿ ‘ಆರ್ಲಪದವುನಲ್ಲಿ ನಡೆಯುವ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ, ಯಾವುದೇ ಜಾತಿ ಮತ ಬೇಧಭಾವವಿಲ್ಲದೇ ಸಹೋದರತ್ವ ಭಾವನೆಯಿಂದ ನಡೆಸುತ್ತಿರುವುದು ಪಾಣಾಜೆಯ ಉತ್ತಮ ಗುಣ ಎನ್ನಬಹುದು.
ಸಂತೋಷ್ ಭಂಡಾರಿ ಚಿಲ್ಮೆತ್ತಾರು ಮಾತನಾಡಿ ‘ಗಣೇಶನ ಆರಾಧನೆಯಿಂದಾಗಿ ನಮಗೆ ಸ್ವಾತಂತ್ರ್ಯ ದೊರೆತಿತು ಎಂದು ಹೇಳಲು ಸಂತೋಷವಾಗುತ್ತದೆ. ಮಂಗಳವಾರದ ಶುಭದಿನದ ಮಂಗಳ ಗೌರಿ ವ್ರತ ಆಚರಣೆ ನಡೆಯುತ್ತಿರುವುದು ವಿಶೇಷವಾಗಿದೆ’ ಎಂದರು.
ಗೌರಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪಿ.ಜಿ. ಶಂಕರನಾರಾಯಣ ಭಟ್ ರವರು ಮಾತನಾಡಿ ‘ಕಾರ್ಯಕರ್ತರ ಹುರುಪು ಉತ್ಸಾಹದ ಕಾರ್ಯಕ್ರಮವಾಗಿ ಗೌರಿ ಗಣೇಶ ಹಬ್ಬ ಮೂಡಿಬಂದಿದೆ’ ಎಂದರು.
ಭೂನ್ಯಾಯ ಮಂಡಳಿಯ ಸದಸ್ಯ ಬೂಡಿಯಾರು ಪುರುಷೋತ್ತಮ ರೈ ಮಾತನಾಡಿ ‘ಸರ್ವರನ್ನೂ ಒಗ್ಗೂಡಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರೇಪಣೆ ನೀಡಿದ ಗಣೇಶೋತ್ಸವ ಇಂದು ಸಾರ್ವಜನಿಕವಾಗಿ ಉತ್ಸವವಾಗಿ ಸಂಭ್ರಮಕ್ಕೆ ಕಾರಣವಾಗಿದೆ. ನಮ್ಮ ಎಲ್ಲಾ ಉತ್ಸವಗಳು, ಆಚರಣೆಗಳನ್ನು ಭಕ್ತಿಪೂರ್ವಕವಾಗಿ ನಡೆಸುತ್ತಿದ್ದೇವೆ. ಸಮಾಜ ಉದ್ದಾರದ ಚಿಂತನೆ ಇಲ್ಲಿ ನಡೆಯುತ್ತದೆ’ ಎಂದು ಹೇಳಿ ಶುಭ ಹಾರೈಸಿದರು.
ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಮುಖ್ಯಗುರು ಸತೀಶ್ ಕುಮಾರ್ ರೈ ಮಾತನಾಡಿ ‘ಸಮಾಜದಲ್ಲಿ ಸಕಾರಾತ್ಮಕ ಮತ್ತು ಧನಾತ್ಮಕ ಶಕ್ತಿಯ ಪ್ರೇರಣಾ ಶಕ್ತಿಗಳಾಗಿ ಯುವಶಕ್ತಿ ತೊಡಗಿಸಿಕೊಂಡಿದೆ. ಅವರ ಜೊತೆಗೆ ಹಿರಿಯರೂ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳುತ್ತಿರುವುದು ಅಭಿನಂದನಾರ್ಹ’ ಎಂದರು.
ಪಡುಮಲೆ ಕೂವೆಶಾಸ್ತಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಜನಾರ್ದನ ಪೂಜಾರಿ ಪದಡ್ಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಣಾಜೆ ಗ್ರಾ.ಪಂ. ಉಪಾಧ್ಯಕ್ಷ ಜಯಶ್ರೀ, ಕೆಯ್ಯೂರು ಪಬ್ಲಿಕ್ ಸ್ಕೂಲ್ ನ ಉಪನ್ಯಾಸಕ ಬಾಲಕೃಷ್ಣ ಬೇರಿಕೆ, ಸದಾಶಿವ ರೈ ಸೂರಂಬೈಲು, ಸ್ನೇಹ ಟೆಕ್ಸ್ಟೈಲ್ಸ್ನ ಉದ್ಯಮಿ ವರದರಾಜ್ ನಾಯಕ್, ಪ್ರಗತಿಪರ ಕೃಷಿಕರಾದ ಸಂಜೀವ ಪೂಜಾರಿ ಕಾನ, ಶೀನಪ್ಪ ಪೂಜಾರಿ ಬೊಳ್ಳಿಂಬಳ, ಪಾಣಾಜೆ ಸರಕಾರಿ ಹಿ.ಪ್ರಾ.ಶಾಲೆಯ ಸಹಶಿಕ್ಷಕಿ ವಿಶಾಲಾಕ್ಷಿ ಶೆಟ್ಟಿ ಉಪಸ್ಥಿತರಿದ್ದರು.
ಗೌರಿ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಸತ್ಯನಾರಾಯಣ ಶರ್ಮ ದೇವತಲಡ್ಕ, ವಿಶ್ವನಾಥ ಪೂಜಾರಿ ಉಡ್ಡಂಗಳ, ಜಾಣು ನಾಯ್ಕ ಭರಣ್ಯ, ವಸಂತ ಕುರೂಪ್ ಭರಣ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ, ಕಾರ್ಯದರ್ಶಿ ಪ್ರೀತಮ್ ರೈ ದೇವಸ್ಯ, ಕೋಶಾಧಿಕಾರಿ ಕರುಣಾಕರ ಕುಲಾಲ್ ಆರ್ಲಪದವು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಬಾಲಕೃಷ್ಣ ಪೂಜಾರಿ ಉಡ್ಡಂಗಳ, ಅಧ್ಯಕ್ಷ ಬಾಬು ರೈ ಕೋಟೆ, ಉಪಾಧ್ಯಕ್ಷರಾದ ಪ್ರೇಮ್ರಾಜ್ ಆರ್ಲಪದವು, ಪ್ರಕಾಶ್ ಕುಲಾಲ್ ಆರ್ಲಪದವು, ಪ್ರಧಾನ ಕಾರ್ಯದರ್ಶಿ ಗಿರೀಶ್ ಗೋಲ್ವಲ್ಕರ್ ಅತಿಥಿ ಅಭ್ಯಾಗತರನ್ನು ಗೌರವಿಸಿದರು.
ಧೃತಿ, ಜ್ಯೋತ್ಸ್ನಾ, ಯಶ್ವಿತಾ ಪ್ರಾರ್ಥಿಸಿದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ನಿತಿನ್ ರೈ ಕೋಟೆ ಸ್ವಾಗತಿಸಿ, ಗೌರಿ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ ಆರ್ಲಪದವು ವಂದಿಸಿದರು. ರವಿ ಶೋಭಾ, ಧನ್ವಿ ರೈ ಕೋಟೆ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ವಿವಿಧ ಭಜನಾ ತಂಡದವರಿಂದ ಭಜನಾ ಸಂಕೀರ್ತನೆ, ಕಥಾ ಪ್ರವಚನ, ಮಹಾಪೂಜೆ ಅನ್ನಸಂತರ್ಪಣೆ ಜರಗಿತು. ಮಧ್ಯಾಹ್ನ ಶಾಲಾ ಮಕ್ಕಳು ಮತ್ತು ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಂಜೆ ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಕಲಾಸಂಘದ ಆಶ್ರಯದಲ್ಲಿ ಬಾಲಕೃಷ್ಣ ಪೂಜಾರಿಯರ ನಿರ್ದೇಶನದಲ್ಲಿ ‘ಮಹಿಷಮರ್ದಿನಿ’ ಯಕ್ಷಗಾನ ಜೋಡಾಟ ಪ್ರದರ್ಶನಗೊಂಡಿತು. ರಾತ್ರಿ ಅನ್ನಸಂತರ್ಪಣೆ ನಡೆಯಿತು.