ಪುತ್ತೂರು: ಆದಿಪುರುಷ ಶ್ರೀರಾಮನ ಅಯೋಧ್ಯೆಯು ವರ್ಣನೆಗೂ ನಿಲುಕದ ಸಮೃದ್ಧವಾದ ನೆಲೆ. ಶ್ರೀರಾಮನ ಬದುಕು ಭಾರತೀಯರ ಅಸ್ಮಿತೆಯಾಗಿ ಬೆಸೆದಿದೆ. ಅಯೋಧ್ಯೆಯ ಅದೇ ಸ್ಥಳದಲ್ಲಿ ರಾಮ ಮಂದಿರ ನಿರ್ಮಿಸಬೇಕು ಎನ್ನುವುದು ಕೋಟ್ಯಂತರ ಭಾರತೀಯರ ಕನಸಾಯಿತು. ತಲೆಮಾರುಗಳು ಉರುಳಿದರೂ ರಾಮ ಮಂದಿರದ ಕನಸು, ನಿರ್ಧಾರ ಬದಲಾಗಿರಲಿಲ್ಲ. ಅನೇಕ ಸಂಘರ್ಷ, ಸವಾಲುಗಳ ಬಳಿಕ ಕೊನೆಗೂ ರಾಮ ಜನ್ಮಭೂಮಿಯಲ್ಲಿ ರಾಮನ ಪ್ರತಿಷ್ಟಾಪನೆಯ ಪುಣ್ಯ ಸಮಯ ಬಂದೇ ಬಿಟ್ಟಿದೆ. ಆದರ್ಶ ಪುರುಷನ ಅಯೋಧ್ಯೆಯ ಭವ್ಯ ಮಂದಿರ ಈಗ ಭಕ್ತರ ದರ್ಶನಕ್ಕೆ ಸನ್ನದ್ಧಗೊಂಡಿದೆ. ರೋಚಕ ಇತಿಹಾಸದ ಭೂಮಿಯಲ್ಲಿ ಭವ್ಯ ಮಂದಿರದ ಕನಸು ಸಾಕಾರಗೊಳ್ಳುತ್ತಿದೆ. ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ. ಇವರು ಹೇಳಿದರು.
ಪುತ್ತೂರಿನ ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ , ನರೇಂದ್ರ ಪ.ಪೂ. ಕಾಲೇಜು ಇವರ ಸಹಯೋಗದಲ್ಲಿ ಆಯೋಜಿಸಿದ ರಾಮನ ವ್ಯಕ್ತಿತ್ವದ ಸಮಗ್ರ ವರ್ಣನೆಯ ಉಪನ್ಯಾಸ ಮಾಲಿಕೆ ಅಯೋಧ್ಯಾ ರಾಮ ಕಾರ್ಯಕ್ರಮದಲ್ಲಿ ,ಅಯೋಧ್ಯೆಯಲ್ಲಿನ ಹೋರಾಟ ಎಂಬ ವಿಚಾರವಾಗಿ ಅವರು ಮಾತನಾಡಿದರು.
ಅಯೋಧ್ಯೆಯು ಕೇವಲ ಐತಿಹಾಸಿಕ ಸ್ಥಳವಲ್ಲ. ಆಧ್ಯಾತ್ಮಿಕ ನಂಬಿಕೆಗಳು ಮತ್ತು ಸಂಪ್ರದಾಯಗಳ ಕೇಂದ್ರಬಿಂದುವಾಗಿದೆ. ಲಕ್ಷಾಂತರ ಕರಸೇವಕರು ರಾಮಮಂದಿರ ನಿರ್ಮಾಣದ ಸಂಕಲ್ಪದಿಂದ ಹೋರಾಟ ಮಾಡಿದ ಸಂದರ್ಭದಲ್ಲಿ ಅಯೋಧ್ಯೆಗೆ ಹೋಗುವಾಗ ದಾರಿಯ ಕಲ್ಲುಮುಳ್ಳುಗಳ ಮೇಲೆ ನಡೆದು, ಉಪವಾಸ, ಕಷ್ಟ, ನೋವುಗಳನ್ನು ಸಹಿಸಿಕೊಂಡು ನಿರ್ಧಾರ ಬಲಗೊಳಿಸಿ ಹೋರಾಟಕ್ಕಾಗಿ ಮುನ್ನುಗ್ಗಿದ ರಾಮಸೇವಕರ ಆ ಕನಸು ನನಸಾಗುವ ಕ್ಷಣ ಈಗ ಒದಗಿಬಂದಿದೆ. ಎಂದು ಹೇಳಿದರು.
1885ರಲ್ಲಿ ಪ್ರಾರಂಭವಾದ ಕಾನೂನು ಹೋರಾಟ 1980ರ ದಶಕದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಾರತೀಯ ಜನತಾ ಪಾರ್ಟಿ ನೇತೃತ್ವದಲ್ಲಿ ರಾಮ ಜನ್ಮಭೂಮಿ ಚಳುವಳಿಯಾಗಿ ಮಾರ್ಪಟ್ಟಿತು, 1990ರಲ್ಲಿ ಕರಸೇವಕರ ಮೇಲೆ ಗುಂಡಿನ ದಾಳಿ ನಡೆದಾಗ ಸಾವಿರಾರು ಕರಸೇವಕರ ಮಾರಣಹೋಮವೇ ನಡೆದುಹೋಯಿತು. ಆದರೆ ಇಂದು ಅವರೆಲ್ಲರ ಹೋರಾಟ ದಿಂದ ರಾಮಮಂದಿರ ನಿರ್ಮಾಣವಾಗಿದ್ದು ಜನವರಿ 22ರಂದು ಉದ್ಘಾಟನೆ ಆಗುತ್ತಿದೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ದೊರೆತ ಮನ್ನಣೆಯಾಗಿದೆ ಎಂದು ಹೇಳಿದರು.
ಅಬುದಾಬಿಯ ಖ್ಯಾತ ಉದ್ಯಮಿಗಳು, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಿತ್ರಂಪಾಡಿ ಜಯರಾಮ ರೈ ಇವರು ಮಾತನಾಡುತ್ತಾ ಇಡೀ ಮನುಷ ಕುಲಕ್ಕೆ ಆದರ್ಶ ಪುರುಷನಾದ ಶ್ರೀರಾಮಚಂದ್ರನ ಜೀವನ ಮಾರ್ಗ, ನಡೆದ ಹಾದಿ, ಆತನ ಗುಣ ಇಂದಿಗೂ ಆದರ್ಶನೀಯ. ವಿದ್ಯಾರ್ಥಿಗಳು ಕರ್ತವ್ಯ ಪ್ರಜ್ಞೆಯೊಂದಿಗೆ ಛಲವನ್ನು ಹೊಂದಿ ಕನಸು ಈಡೇರಿಸುವ ಜವಾಬ್ದಾರಿ ಹೊಂದಬೇಕು.ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಕೆಯ ಜೊತೆಗೆ ಬದುಕಿಗೆ ಆಸರೆಯಾಗುವ ಉನ್ನತ ಶಿಕ್ಷಣವನ್ನು ಪಡೆದು ಸಮುದಾಯದ ಏಳಿಗೆಗಾಗಿ ಸಹಕಾರಿಯಾಗಬೇಕಿದೆ. ಸೋಲು ಗೆಲುವು ಶಾಶ್ವತವಲ್ಲ ಎಂಬ ಸತ್ಯದ ಅರಿವಿನೊಡನೆ ಮುನ್ನಡೆಯಿರಿ. ಅವಕಾಶಗಳನ್ನು ಉತ್ತಮ ಅಭಿಲಾಷೆಯೊಂದಿಗೆ ನಿಮ್ಮದಾಗಿಸಿಕೊಳ್ಳಿ ಮತ್ತು ಈ ದೇಶದ ಉತ್ತಮ ನಾಗರಿಕರಾಗಿ ಬಾಳಿಎಂದು ಹೇಳಿದರು.
ವೇದಿಕೆಯಲ್ಲಿ ಪುತ್ತೂರಿನ ವಿಶ್ವ ಹಿಂದೂ ಪರಿಷತ್ ಇದರ ಜಿಲ್ಲಾ ಪ್ರಮುಖರಾದ ಮತ್ತು ಹಿಂದೂ ಹೆರಿಟೇಜ್ ಫೌಂಡೇಷನ್ ನವದೆಹಲಿ ಇದರ ಸದಸ್ಯರಾದ ಡಾ. ಹರ್ಷ ಕುಮಾರ ರೈ ಮಾಡಾವು ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪುತ್ತೂರಿನ ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ,ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ , ನರೇಂದ್ರ ಪ.ಪೂ. ಕಾಲೇಜು ಇದರ ಆಡಳಿತ ಮಂಡಳಿಯ ಅಧ್ಯಕ್ಷರು,ಸಂಚಾಲಕರು,ಸದಸ್ಯರು,ಮುಖ್ಯಗುರುಗಳು, ಶಿಕ್ಷಕವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕಿ ಧನ್ಯಾ ಸ್ವಾಗತಿಸಿ, ನರೇಂದ್ರ ಪ.ಪೂ. ಕಾಲೇಜಿನ ಉಪನ್ಯಾಸಕಿ ಅನಘಾ ವಂದಿಸಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕರಾದ ಗೀತಾ ಕಾರ್ಯಕ್ರಮವನ್ನು ನಿರೂಪಿಸಿದರು.