ನೇರೆಂಕಿಗುತ್ತು: ದೈವಗಳ ನೇಮೋತ್ಸವ-ಧರ್ಮ ಜಾಗೃತಿ ಸಭೆ

0

ಮೂಲ ನಂಬಿಕೆ, ಆರಾಧನೆ ಉಳಿಸಿಕೊಂಡಲ್ಲಿ ದೈವ ಸಾನಿಧ್ಯ ವೃದ್ಧಿ: ಡಾ. ರವೀಶ್ ಪಡುಮಲೆ

ರಾಮಕುಂಜ: ಹಳೆನೇರೆಂಕಿ ಗ್ರಾಮದ ನೇರೆಂಕಿಗುತ್ತು ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ನಡೆದ ಶ್ರೀ ದೈವಗಳ ನೇಮೋತ್ಸವ ಮತ್ತು ಶ್ರೀ ಬ್ರಹ್ಮಬೈದರ್ಕಳ ಜಾತ್ರೋತ್ಸವದ ಸಂದರ್ಭದಲ್ಲಿ ಡಿ.26ರಂದು ರಾತ್ರಿ ಧರ್ಮಜಾಗೃತಿ ಸಭೆ ನಡೆಯಿತು.


ಧಾರ್ಮಿಕ ಉಪನ್ಯಾಸ ನೀಡಿದ ಸಿವಿಲ್ ಇಂಜಿನಿಯರ್ ಆಗಿರುವ ದೈವ ನರ್ತಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆದ ಡಾ. ರವೀಶ್ ಪಡುಮಲೆಯವರು, ತುಳುನಾಡಿನ ಜನ ಪ್ರಕೃತಿಯ ಆರಾಧಕರು. ದೈವಕ್ಕೆ ಕೇಪುಳು ಹೂ ಸಮರ್ಪಿಸಿ ಭಕ್ತಿಯಿಂದ ಕೈಮುಗಿದಲ್ಲಿ ದೈವದ ಅನುಗ್ರಹ ಪ್ರಾಪ್ತಿಯಾಗಲಿದೆ. ಆರಾಧನೆಯಲ್ಲಿ ಹೊಸತನ ತರುವ ಬದಲು ಮೂಲ ನಂಬಿಕೆ, ಮೂಲ ಆರಾಧನೆ ಉಳಿಸಿಕೊಂಡಲ್ಲಿ ದೈವ ಸಾನಿಧ್ಯ ವೃದ್ಧಿಯಾಗಲಿದೆ. ಆದ್ದರಿಂದ ಸ್ವಾರ್ಥ ಭಾವನೆ ಬಿಟ್ಟು ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ದೈವರಾಧನೆಯಲ್ಲಿ ತೊಡಗಿಕೊಳ್ಳಬೇಕು. 16 ವರ್ಗದವರೂ ಒಟ್ಟಾಗಿ ಸೇರಿಕೊಂಡು ದೈವದ ಸೇವೆಯಲ್ಲಿ ತೊಡಗಿಕೊಳ್ಳಬೇಕೆಂದು ಹೇಳಿದರು. ಕೋಟಿ, ಚೆನ್ನಯರ ಜೀವನ ಎಲ್ಲರಿಗೂ ಮಾದರಿ. ಕೋಟಿ ಚೆನ್ನಯರ ಜೀವನ ಚರಿತ್ರೆ ಬಗ್ಗೆ ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕು. ಕೋರ್ಟ್‌ಗಳಲ್ಲಿ ಬಗೆಹರಿಯದ ಸಮಸ್ಯೆಗಳೂ ದೈವದ ಮುಂದೆ ಬಗೆಹರಿದ ಸಾಕಷ್ಟೂ ಉದಾಹರಣೆಗಳಿವೆ. ಹಳೆನೇರೆಂಕಿಯಲ್ಲಿ ಮೂಲ ನಂಬಿಕೆ ಉಳಿಸಿಕೊಂಡು ದೈವದ ಆರಾಧನೆ ನಡೆಯುತ್ತಿರುವುದು ಹಾಗೂ ಇದರಲ್ಲಿ ಮಾಸ್ಟರ್ ಪ್ಲಾನರಿಯ ಎಸ್.ಕೆ.ಆನಂದ ಅವರ ಕುಟುಂಬಸ್ಥರೂ ನಿಷ್ಠೆಯಿಂದ ತೊಡಗಿಕೊಂಡಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದರು.


ದೈವಸ್ಥಾನದ ಆಡಳಿತ ಮೊಕ್ತೇಸರ, ಪುತ್ತೂರು ಮಾಸ್ಟರ್ ಪ್ಲಾನರಿಯ ಎಸ್.ಕೆ.ಆನಂದ ಮಾತನಾಡಿ, ಹೆಡ್, ಹಾರ್ಟ್, ಕೈ ಸರಿಯಾಗಿ ಕೆಲಸ ಮಾಡಬೇಕು.
ಮಾತು ಸರಿಯಾಗಿದಲ್ಲಿ ಬದುಕಿನಲ್ಲಿ ಯಶಸ್ಸು ಪಡೆಯಬಹುದು. ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುವ. ಆದರೆ ನಮ್ಮಲ್ಲಿ ಪೈಪೋಟಿ ಬೇಡ. ಪರಸ್ಪರ ಸಹಕಾರ ಮನೋಭಾವನೆ ಬೇಕು. ಈ ರೀತಿಯಾದಲ್ಲಿ ಬದುಕಿನಲ್ಲಿ ಗೆದ್ದು ಸುಖ ಅನುಭವಿಸಲು ಸಾಧ್ಯವಿದೆ. ಆದ್ದರಿಂದ ಪರಸ್ಪರ ಸಹಕಾರ ಮನೋಭಾವನೆಯಿಂದ ಕೆಲಸ ಮಾಡುವ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಟಿ.ನಾರಾಯಣ ಭಟ್‌ ಮಾತನಾಡಿ, ಲೌಕಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣ ದೊರೆತಲ್ಲಿ ಬದುಕು ಸುಂದರವಾಗಲಿದೆ. ನಾವು ಮಕ್ಕಳಿಗೆ ಲೌಕಿಕ ಶಿಕ್ಷಣ ಮಾತ್ರ ನೀಡುತ್ತಿದ್ದೇವೆ. ಇದರ ಜೊತೆಗೆ ಆಧ್ಯಾತ್ಮಿಕ ಶಿಕ್ಷಣವೂ ನೀಡಬೇಕು. ಮನುಷ್ಯನಿಗೆ ಜ್ಞಾನಕೋಶದ ಜೊತೆಗೆ ಭಾವನಾಕೋಶವನ್ನೂ ತುಂಬಿಸಿದಲ್ಲಿ ಮಾತ್ರ ಆತ ಸಮಾಜಕ್ಕೆ ಸಂಪತ್ತು ಆಗಬಲ್ಲ. ದೈವಚಿಂತನೆ, ದೇವತರಾಧನೆ ಬದುಕಿನ ಪಾಠ ಶಾಲೆಯಾಗಿದೆ. ಇಂದಿನ ಧಾರ್ಮಿಕ ಸಭೆ ಜನತೆಗೆ ಸಂದೇಶ ನೀಡಿದೆ ಎಂದರು.

ಆಡಳಿತ ಸಮಿತಿ ಕಾರ್ಯದರ್ಶಿ ಕಿರಣ್ ಪಾದೆ ಮಾತನಾಡಿ, ನೇರೆಂಕಿಗುತ್ತುವಿನಲ್ಲಿ ದೈವಗಳ ನೇಮೋತ್ಸವ 42 ವರ್ಷ ನಿಂತು ಹೋಗಿತ್ತು. 14 ವರ್ಷದ ಹಿಂದೆ ಇಲ್ಲಿನ ದೈವಸ್ಥಾನ ಜೀರ್ಣೋದ್ದಾರಗೊಂಡು ಬ್ರಹ್ಮಕಲಶೋತ್ಸವ ನಡೆದಿತ್ತು. ಇದಕ್ಕೆ ಟಿ.ನಾರಾಯಣ ಭಟ್ ಅವರು ಪ್ರೇರಣೆ ನೀಡಿದ್ದರು. ಎಸ್.ಕೆ.ಆನಂದ ಅವರ ಶ್ರಮವಿತ್ತು. ಇದೀಗ ಸಂಕ್ರಮಣ ತಂಬಿಲ, ನೇಮೋತ್ಸವ ನಡೆಯುತ್ತಿದೆ. ಊರು, ಪರವೂರಿನ ಜನರು ಬಂದು ದೈವದ ಮುಂದೆ ಪ್ರಾರ್ಥನೆ ಸಲ್ಲಿಸಿ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ ಎಂದರು.

ಮಾಸ್ಟರ್ ಪ್ಲಾನರಿಯ ಅಕ್ಷಯ್ ಎಸ್.ಕೆ ಸ್ವಾಗತಿಸಿ, ಅರ್ಜುನ್ ಎಸ್.ಕೆ.ವಂದಿಸಿದರು. ಆಡಳಿತ ಸಮಿತಿ ಜೊತೆ ಕಾರ್ಯದರ್ಶಿ ಶ್ಯಾಮ್ ಪ್ರಸಾದ್ ಕಾಯಾರ ಕಾರ್ಯಕ್ರಮ ನಿರೂಪಿಸಿದರು. ರೇಖಾ ಆನಂದ್, ದೈವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘಸಂಸ್ಥೆಗಳ ಸದಸ್ಯರು, ಗ್ರಾಮಸ್ಥರು, ಮಾಸ್ಟರ್ ಪ್ಲಾನರಿಯವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಗೌರವಾರ್ಪಣೆ:
ಧಾರ್ಮಿಕ ಉಪನ್ಯಾಸ ನೀಡಿದ ಡಾ.ರವೀಶ್ ಪಡುಮಲೆ, ದೈವದ ಸೇವೆ ಮಾಡುತ್ತಿರುವ ಸಂಜೀವ ಮುಳಿಮಜಲು, ದೈವದ ಮಧ್ಯಸ್ಥ ಶಶಾಂಕ್ ನೆಲ್ಲಿತ್ತಾಯ, ಆಡಳಿತ ಸಮಿತಿ ಕಾರ್ಯದರ್ಶಿ ಕಿರಣ್ ಪಾದೆ, ಜೊತೆ ಕಾರ್ಯದರ್ಶಿ ಶ್ಯಾಮ್ ಪ್ರಸಾದ್ ಕಾಯಾರ ಅವರನ್ನು ದೈವಸ್ಥಾನದ ಆಡಳಿತ ಮೊಕ್ತೇಸರರಾದ ಎಸ್.ಕೆ.ಆನಂದ ಅವರು ಗೌರವಿಸಿದರು. ಮಾಸ್ಟರ್ ಪ್ಲಾನರಿಯ ಆಕಾಶ್ ಎಸ್.ಕೆ.ಅವರು ಹೆಸರು ವಾಚಿಸಿದರು.

LEAVE A REPLY

Please enter your comment!
Please enter your name here