ನೆಲ್ಯಾಡಿ: ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಭಜನೆ, ಕುಣಿತ ಭಜನೆ, ಯಕ್ಷಗಾನ ತರಬೇತಿ ನೀಡುತ್ತಿರುವ ಹಾಗೂ ಧರ್ಮಸ್ಥಳ ಕ್ಷೇತ್ರದಿಂದ ‘ಶ್ರೇಷ್ಠ ಭಜನಾ ಸಾಧಕ’ ಪ್ರಶಸ್ತಿ ಪಡೆದುಕೊಂಡಿರುವ ಬಜತ್ತೂರು ಗ್ರಾಮದ ಪಂರ್ದಾಜೆ ನಿವಾಸಿ ಗಂಗಾಧರ ಗೌಡ ಅವರಿಗೆ ಶ್ರೀರಾಮ ಭಜನಾ ಮಂದಿರ ಅಯೋಧ್ಯಾನಗರ ಪೊರೋಳಿ ಎಂಬಲ್ಲಿ ಹುಟ್ಟೂರ ಸನ್ಮಾನ ಕಾರ್ಯಕ್ರಮ ನಡೆಸಿ ಗೌರವಿಸಲಾಯಿತು. ಪ್ರಾಥಮಿಕ ಶಿಕ್ಷಣ ಪಡೆದ ಗಂಗಾಧರ ಗೌಡ ಅವರು ವೃತ್ತಿಯಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದು, ಸುಮಾರು 4೦೦ಕ್ಕೂ ಹೆಚ್ಚು ಮಕ್ಕಳಿಗೆ ಭಜನೆ ಹಾಗೂ ಕುಣಿತ ಭಜನೆಯ ತರಬೇತಿ ನೀಡಿದ್ದಾರೆ. ಅದರೊಂದಿಗೆ ಯಕ್ಷಗಾನ ಕುಣಿತದ ತರಬೇತಿಗಳನ್ನೂ ನೀಡಿದ್ದಾರೆ. ಗ್ರಾಮೀಣ ಪ್ರದೇಶಗಳಾದ ಬೆದ್ರೋಡಿ, ಮುದ್ಯ, ಪೆರಿಯಡ್ಕ, ಶಾಂತಿನಗರ, ಆಲಂತಾಯ, ಪುಳಿತ್ತಡಿ, ನಡ್ಪ ಮತ್ತಿತರ ಭಾಗಗಳಲ್ಲಿ ಕುಣಿತ ಭಜನೆ ಹಾಗೂ ಭಜನಾ ತರಬೇತಿಗಳನ್ನು ನಡೆಸುವ ಮೂಲಕ ಮಕ್ಕಳ ಎಳವೆಯಲ್ಲಿ ಧಾರ್ಮಿಕ ಚಿಂತನೆ ಹುಟ್ಟಿಸುವ ಕೆಲಸ ಮಾಡಿದ್ದಾರೆ. ಇದರೊಂದಿಗೆ ತನ್ನ ಕಂಚಿನ ಕಂಠದಿಂದ ಅವರ ಭಜನಾ ಹಾಡುಗಳು ಈ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಂತ ಜನಪ್ರೀಯವಾಗಿದೆ.
ಪೈಂಟರ್ ವೃತ್ತಿಯಲ್ಲಿದ್ದರೂ ತನ್ನ ಹೆಚ್ಚಿನ ಸಮಯವನ್ನು ಭಜನೆಗಾಗಿ ಮೀಸಲಿಡುವ ಗಂಗಾಧರ ಗೌಡ ಅವರು ತನ್ನ ಬದುಕಿನಲ್ಲಿ ಭಜನೆಗೆ ಮೊದಲ ಸ್ಥಾನ ನೀಡಿದ್ದಾರೆ. ಅನೇಕ ವೇದಿಕೆಗಳಲ್ಲಿ ಅವರನ್ನು ಸನ್ಮಾನಿಸಲಾಗಿತ್ತು. ಇದೀಗ ಶ್ರೀರಾಮ ಭಜನಾ ಮಂದಿರದ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಅವರಿಗೆ ಹುಟ್ಟೂರ ಸನ್ಮಾನ ನೀಡಲಾಯಿತು. ಗಂಗಾಧರ ಗೌಡ ದಂಪತಿಗಳನ್ನು ಬಜತ್ತೂರು ಗ್ರಾಮದ ವಿಠಲ ಗೌಡ ನಾಗೋಜಿ ದಂಪತಿಗಳು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ರಾಧಾಕೃಷ್ಣ ಕುವೆಚ್ಚಾರ್, ಬಜತ್ತೂರು ಗ್ರಾ.ಪಂ.ಅಧ್ಯಕ್ಷರು ಹಾಗೂ ಸಮಿತಿ ಉಪಾಧ್ಯಕ್ಷ ಗಂಗಾಧರ್ ಪಿ.ಎನ್, ನೆಕ್ಕರಾಜೆ, ಸಮಿತಿ ಕಾರ್ಯದರ್ಶಿ ದಾಮೋದರ್ ಕುಲಾಲ್, ಕೋಶಾಧಿಕಾರಿ ಗಣೇಶ್ ಪಿ.ಬಿ ಪಂರ್ದಾಜೆ, ವಕೀಲ ಅಕ್ಷಯ್ ನಾಗೋಜಿ, ವಿಜಿತಾ, ಮಾಲತಿ, ದೇವಕಿ, ಗಣೇಶ್ ಕುಲಾಲ್ ಮತ್ತಿತರರು ಭಾಗವಹಿಸಿದ್ದರು.
ಶ್ರೀರಾಮ ಭಜನಾ ಮಂದಿರದ ವಾರ್ಷಿಕೋತ್ಸವದಲ್ಲಿ ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿ ಶಾಂತಿನಗರ ಕಾಂಚನ, ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕಡಬ, ಶ್ರೀರಾಮ ಭಜನಾ ಮಂದಿರ ಅಯೋಧ್ಯಾನಗರ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ನಾರಾಯಣ ಬಡೆಕ್ಕಿಲ್ಲಾಯ ನಡ್ಪ ಅವರ ನೇತೃತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಹಾಗೂ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕೊಯಿಲ ಯಕ್ಷನಂದನ ಕಲಾ ಸಂಘ ಗೋಕುಲ ನಗರ ಕೊಯಿಲ ಅವರಿಂದ ಕದಂಬ ಕೌಶಿಕೆ ಎಂಬ ಯಕ್ಷಗಾನ ನಡೆಯಿತು.