ಕಮ್ಯುನಿಟಿ ರಿಸರ್ಚ್ ಎಂಡ್ ಡೆವಲಪ್ಪ್ ಮೆಂಟ್ ಫೌಂಡೇಶನ್ ನ ಅಧೀನ ಸಂಸ್ಥೆ ಕಮ್ಯೂನಿಟಿ ಸೆಂಟರ್ ಮೂಲಕ ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ 470 ವಿದ್ಯಾರ್ಥಿಗಳಿಗೆ ಎರಡನೇ ಹಂತದ ವಿದ್ಯಾರ್ಥಿವೇತನ ನೀಡುವ ಕಾರ್ಯಕ್ರಮ ಪುತ್ತೂರಿನಲ್ಲಿ ನಡೆಯಿತು. ಕಾನೂನು, ವೈಧ್ಯಕೀಯ, ಇಂಜಿನಿಯರಿಂಗ್, ಬಿಎಸ್ಸಿ, ಎಂಕಾಂ, ಸಿ.ಎ. ನೀಟ್, ಜೆಇಇ, ಕ್ಲ್ಯಾಟ್ ಪರೀಕ್ಷೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳ ಸಹಿತ ಸರಕಾರಿ ಉಧ್ಯೋಗಕ್ಕೆ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ಪ್ರಯೋಜನ ಪಡೆದರು.
ಶಾಹೀನ್ ಶಿಕ್ಷಣ ಸಂಸ್ಥೆಯ ಸ್ಥಾಪಕರಾದ ಡಾ. ಅಬ್ದುಲ್ ಖದೀರ್ ಸಾಬ್ ರವರು ತಾಲೂಕಿನ ವಿದ್ಯಾರ್ಥಿಗಳಿಗೆ ಕಳೆದ ಎರಡು ವರ್ಷದಿಂದ ನೀಡಿರುವ ಪ್ರೋತ್ಸಾಹಕ್ಕಾಗಿ ಅವರನ್ನು ಸೆಂಟರಿನ ಪರವಾಗಿ ಅಲ್ ಮುಝೈನ್ ನ ಮಾಲಕರಾದ ಜನಾಬ್ ಝಕರಿಯಾ ಹಾಜಿ ಜೋಕಟ್ಟೆಯವರು ಅಭಿನಂದಿಸಿ ಗೌರವಿಸಿದರು. ಮುಂದಿನ ವರ್ಷದ ನೀಟ್ ವಿದ್ಯಾರ್ಥಿಗಳಿಗೆ ಅಲ್ ಮುಝೈನ್ ಮೂಲಕ ಪ್ರೋತ್ಸಾಹ ಧನವನ್ನು ನೀಡಿದರು. ಈ ವರ್ಷದಲ್ಲಿ ಸೆಂಟರ್ ಮೂಲಕ ರಾಜ್ಯದ ವಿವಿಧ ಮೆಡಿಕಲ್ ಕಾಲೇಜಿನಲ್ಲಿ ದಾಖಲಾದ ವಿದ್ಯಾರ್ಥಿಗಳಿಗೆ ಡೆಲ್ಟಾ ಸಂಸ್ಥೆಯ ಮೂಲಕ ಜನಾಬ್ ಅಹ್ಮದ್ ಮೊಹಿದ್ದೀನ್ ರವರು ವಿದ್ಯಾರ್ಥಿ ವೇತನ ನೀಡಿದರು. ಸೌದಿಯ ರಕ್ವಾನಿ ಕಂಪೆನಿಯ ಮೂಲಕ ಸಿ.ಎ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಅದರ ಮಾಲಕರಾದ ಜನಾಬ್ ಅಬ್ದುಲ್ ಸಲಾಂ ರವರು ವಿದ್ಯಾರ್ಥಿ ವೇತನ ನೀಡಿದರು. ಸುಲ್ತಾನ್ ಗೋಲ್ಡ್ ನ ಮಾಲಕರಾದ ಡಾ. ರವೂಫ್ ರವರು ವೃತ್ತಿಪರ ಕೋರ್ಸ್ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದರು. ಉದ್ಯಮಿ ಇಸ್ಮಾಯಿಲ್ ಕೂರ್ನಡ್ಕ, ಡೈಮಂಡ್ ಸ್ಕೂಲ್ ನ ಅಲ್ತಾಫ್ ಪರಂಗಿಪೇಟೆ, ಈಸ್ಟರ್ನ್ ಕಂಪೆನಿಯ ಮಾಲಕರಾದ ಕಲಂದರ್ ರವರು ವಿದ್ಯಾರ್ಥಿ ವೇತನ ವಿತರಿಸಿದರು.
ಸೆಂಟರಿನ ಶೈಕ್ಷಣಿಕ ಪ್ರಗತಿಯ ಪ್ರಯತ್ನದಲ್ಲಿ ಸಹಕರಿಸಿದ ಬ್ಯಾರೀಸ್ ಕಾಲೇಜು, ಬೆಂಗಳೂರಿನ ಫಾಲ್ಕನ್ ಕಾಲೇಜ್, ಕಣಚೂರು ಕಾಲೇಜು, ಮೀಫ್ ಸಂಸ್ಥೆ, ಯಾನಪೊಯ, ಬರಕಾ ಕಾಲೇಜುಗಳಿಗೆ ಈ ಸಂದರ್ಭ ಕೃತಜ್ಞತೆ ಸಲ್ಲಿಸಲಾಯಿತು. ಸುಮಾರು ಹನ್ನೊಂದು ಸೆಂಟರನ್ನು ಹೊಂದಿರುವ ಕಮ್ಯುನಿಟಿ ಸೆಂಟರ್ ನಲ್ಲಿ 6 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಕಳೆದ ಮೂರು ವರ್ಷದ ಅವಧಿಯಲ್ಲಿ ಕೌನ್ಸಿಲಿಂಗ್ ನೀಡಲಾಗಿದೆ. ಗ್ರಾಮೀಣ ಮತ್ತು ನಗರ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಂಬಂದಿಸಿದ ಪ್ರೋತ್ಸಾಹ, ಮಾರ್ಗದರ್ಶನ ಸೆಂಟರ್ ನೀಡುತ್ತಿದೆ.
ನೂರಾರು ಗ್ರಾಮೀಣ ವಿದ್ಯಾರ್ಥಿಗಳ ಬದುಕನ್ನು ಬದಲಾಯಿಸಿರುವ ಸೆಂಟರ್ ನ ಕಾರ್ಯಕ್ರಮಗಳನ್ನು ಅತಿಥಿಗಳು ಅಭಿನಂದಿಸಿದರು. ಸೆಂಟರಿನ ಅಧ್ಯಕ್ಷರಾದ ಅಮ್ಜದ್ ಖಾನ್ ಪೋಳ್ಯ ಪ್ರಾಸ್ತವಿಕ ಮಾತನಾಡಿದರು. ಡಾ.ವಾಜಿದಾ ಕಾರ್ಯಕ್ರಮದಲ್ಲಿ ಸೆಂಟರಿನ ಕಾರ್ಯಾಚರಣೆಯ ಕುರಿತು ಪ್ರಸ್ತುತಿ ನೀಡಿದರು.