2 ಕಾಣಿಕೆ ಡಬ್ಬಿಯಲ್ಲಿತ್ತು ರೂ.12 ಲಕ್ಷ ನೋಟಿನ ಕಂತೆಗಳು
ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಿಂಗಳ ಹುಂಡಿ ಸಂಗ್ರಹ ದುಪ್ಪಟ್ಟು ಆಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಡಿ.29 ರಂದು ನಡೆದ ಹುಂಡಿ ಲೆಕ್ಕದಲ್ಲಿ ಸುಮಾರು ರೂ.22 ಲಕ್ಷ ಹಣ ಸಂಗ್ರಹವಾಗಿದೆ. ವಾರ್ಷಿಕ ಜಾತ್ರೆಯ ಎಪ್ರಿಲ್ ತಿಂಗಳ ಸಂದರ್ಭದಲ್ಲೂ ಇಷ್ಟೊಂದು ಹಣ ಸಂಗ್ರಹವಾಗದ್ದು ಡಿಸೆಂಬರ್ ತಿಂಗಳಲ್ಲಿ ಆಗಿರುವುದು ಆಶ್ಚರ್ಯ ಚಕಿತಗೊಳಿಸಿದೆ. ದೇವಳದ ಗಣಪತಿ ಗುಡಿ ಮತ್ತು ಮಹಾಲಿಂಗೇಶ್ವರ ದೇವರ ನಡೆಯ ಕಾಣಿಕೆ ಡಬ್ಬಿಯಲ್ಲಿ ರೂ.500 ರ ಕಂತೆಯಂತೆ ರೂ.12 ಲಕ್ಷ ಸಂಗ್ರಹವಾಗಿದೆ. ಪ್ರತಿ ತಿಂಗಳ ಹುಂಡಿಯ ಲೆಕ್ಕದಲ್ಲಿ ಸುಮಾರು ರೂ.11 ಲಕ್ಷ ಹಣ ಸಂಗ್ರಹವಾಗುತ್ತಿದ್ದು ಇದೀಗ ಒಮ್ಮೇಲೆ ಹುಂಡಿ ಹಣ ದುಪ್ಪಟ್ಟು ಆಗಿರುವುದು ದೇವಳದ ವಠಾರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಅಯ್ಯಪ್ಪ ದೀಪೋತ್ಸವದ ಮಹಿಮೆಯೋ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ತನ್ನ ಇಷ್ಟಾರ್ಥ ಸಿದ್ದಿಯಾಗಿ ಸಂಕಲ್ಪದಂತೆ ಭಕ್ತರೊಬ್ಬರು ಹುಂಡಿಗೆ ಕಾಣಿಕೆ ಹಾಕಿರಬಹುದೆಂಬುದು ಸ್ಪಷ್ಟ.