ಆನ್‌ಲೈನ್ ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ಹೇಳಿ 16.11 ಲಕ್ಷ ರೂ.ವಂಚನೆ: ಸಿಇಎನ್ ಅಪರಾಧ ಠಾಣೆಯಲ್ಲಿ ಕೇಸು ದಾಖಲು

0

ಪುತ್ತೂರು: ಆನ್‌ಲೈನ್ ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ಹೇಳಿ ಅಪರಿಚಿತ ವ್ಯಕ್ತಿಗಳು ಹಂತ ಹಂತವಾಗಿ 16,11,239 ರೂ. ಪಡೆದು ವಂಚಿಸಿರುವ ಬಗ್ಗೆ ಪುತ್ತೂರಿನಲ್ಲಿರುವ ಸುಬ್ರಹ್ಮಣ್ಯ ಸಹಕಾರ ಸಂಘದ ಶಾಖಾಧಿಕಾರಿ ಪ್ರದೀಪ್(40ವ.)ಎಂಬವರು ಮಂಗಳೂರಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.


ಪ್ರದೀಪ್ ಅವರು ಮೂಲತ: ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಚಾರಾ ಗ್ರಾಮದ ಮಹಿಷಮರ್ದಿನಿ ದೇವಸ್ಥಾನದ ಬಳಿಯ ನಿವಾಸಿಯಾಗಿದ್ದು ಸುಬ್ರಹ್ಮಣ್ಯ ಸಹಕಾರಿ ಸಂಘದ ಪುತ್ತೂರು ಶಾಖೆಯಲ್ಲಿ ಎರಡು ವರ್ಷಗಳಿಂದ ಶಾಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಪುತ್ತೂರು ಕಸಬಾ ಗ್ರಾಮದ ಪತ್ರಾವೋ ಆಸ್ಪತ್ರೆಯ ಸಮೀಪ ವಾಸ್ತವ್ಯವಿದ್ದಾರೆ. ಇವರಿಗೆ 8-11-2023 ರಂದು ಟೆಲಿಗ್ರಾಂನಲ್ಲಿ DABS INDIA ಎಂಬವರು ಪಾರ್ಟ್ ಟೈಮ್ ಜಾಬ್ ನೀಡಲು ಅಂಕಿತ ಶರ್ಮಾ ಎಂಬವರು ಸಂಪರ್ಕಿಸುತ್ತಾರೆ ಎಂದು ಹೇಳಿರುತ್ತಾರೆ. ಅದರಂತೆ ಅಂಕಿತ ಶರ್ಮಾರವರ ಟೆಲಿಗ್ರಾಂನಿಂದ ಸಂಪರ್ಕ ಮಾಡಿ ಪಾರ್ಟ್ ಟೈಮ್ ಜಾಬ್ ಕೊಡುವುದಾಗಿ ಲಿಂಕ್ ಕಳಿಸಿ ಸದ್ರಿ ಲಿಂಕ್‌ನಲ್ಲಿ ಆನ್‌ಲೈನ್ ಐಡಿಯನ್ನು ನೀಡಿದ್ದಾರೆ. ಅದರಂತೆ ಟಾಸ್ಕ್ ಮಾಹಿತಿ ನೀಡುತ್ತಿದ್ದರು. ಫ್ಲೈಟ್ ಬುಕ್ಕಿಂಗ್ ಮಾಡುವ ಟಾಸ್ಕ್ ಡೆಮೋ ಮಾಡಿಸಿ 900 ರೂಪಾಯಿಯನ್ನು ಪ್ರದೀಪ್ ಅವರ ಬ್ಯಾಂಕ್ ಖಾತೆಗೆ ಹಾಕಿದ್ದಾರೆ.

05-12-2023ರಂದು 8,000 ರೂ.ಹಾಕಿ ಫ್ಲೈಟ್ ಬುಕ್ಕಿಂಗ್ ಟಾಸ್ಕ್ ಮಾಡಿದ್ದಕ್ಕೆ ರೂ.14,062 ಮತ್ತು 6-12-2023ರಂದು ರೂ.11,000 ಹಾಕಿದಾಗ ಎನ್‌ಕ್ವೆಯರಿ ಫ್ಲೈಟ್ ಬುಕ್ಕಿಂಗ್ ಟಾಸ್ಕ್‌ಗಾಗಿ 12,630 ರೂಪಾಯಿ ಹಾಕಲು ತಿಳಿಸಿದ್ದಕ್ಕೆ ಪ್ರದೀಪ್ ಅವರು ಪಾವತಿಸಿದ್ದಕ್ಕೆ ಅವರ ಬ್ಯಾಂಕ್ ಖಾತೆಗೆ 31,644 ರೂ.ಕಳುಹಿಸಿರುತ್ತಾರೆ. ನಂತರ ಅವರು 90 ಫ್ಲೈಟ್ ಬುಕ್ಕಿಂಗ್ ಟಾಸ್ಕ್ ಮಾಡುವ ಸಲುವಾಗಿ ಹಣ ಪಾವತಿಸುವಂತೆ ತಿಳಿಸಿದ್ದಕ್ಕೆ ಪ್ರದೀಪ್ ಅವರು ತನ್ನ ಬ್ಯಾಂಕ್ ಖಾತೆಗಳಿಂದ ಹಂತಹಂತವಾಗಿ ಅಪರಿಚಿತ ವ್ಯಕ್ತಿಗಳು ಕಳುಹಿಸಿದ ಐದು ಬ್ಯಾಂಕ್ ಖಾತೆಗಳಿಗೆ ಒಟ್ಟು 16,11,239.80 ರೂ., ಕಳುಹಿಸಿರುತ್ತಾರೆ. ಟೆಲಿಗ್ರಾಮ್‌ನಲ್ಲಿ ಪರಿಚಯವಾಗಿ ಆನ್‌ಲೈನ್ ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ಹೇಳಿ 16,11,239.80 ರೂಪಾಯಿ ಪಡೆದಿರುವುದಾಗಿ ಮಂಗಳೂರಿನ ಸಿಇಎನ್ ಅಪರಾಧ ಪೊಲೀಸು ಠಾಣೆಯಲ್ಲಿ ಪ್ರದೀಪ್ ಅವರು ಕೇಸು ದಾಖಲಿಸಿದ್ದಾರೆ. ಕಲಂ: 66 (ಅ), 66 (ಆ) IT Act and 420 IPC. ಯಂತೆ ಪ್ರಕರಣ ದಾಖಲಿಸಿಕೊಂಡು ಸಿಇಎನ್ ಅಪರಾಧ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here