ಪುತ್ತೂರು: ರಾಮಲಕ್ಷ್ಮಣರು ಹಾಗೇ ಕೋಟಿ ಚೆನ್ನಯರು ಅಡ್ಡಾಡಿದ ಭೂಮಿ ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲು ಎಂಬಲ್ಲಿ ನೆಲೆಯಾಗಿ ಭಕ್ತಿಯಿಂದ ನಂಬಿದ ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸಿಕೊಂಡು ಬರುತ್ತಿರುವ ತುಳುನಾಡಿನ ವೀರಪುರುಷರಾದ ಶ್ರೀ ಕೋಟಿ ಚೆನ್ನಯರ ಆರಾಧನ ಗರಡಿ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ಶ್ರೀ ಬೈದೆರ್ಕಳ ನೇಮೋತ್ಸವದ ಅಂಗವಾಗಿ ದ.30 ರಂದು ವಿವಿಧ ವೈಧಿಕ ಕಾರ್ಯಕ್ರಮಗಳು ನಡೆಯಿತು.
ಅರ್ಚಕ ಪ್ರಕಾಶ್ ನಕ್ಷತ್ರಿತ್ತಾಯ ಮತ್ತು ಬಳಗದವರು ವಿವಿಧ ವೈಧಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಬೆಳಿಗ್ಗೆ ಶ್ರೀ ಗಣಪತಿ ಹೋಮ, ಶ್ರೀ ನಾಗದೇವರ ತಂಬಿಲ, ಶ್ರೀ ಬ್ರಹ್ಮದೇವರ ತಂಬಿಲ ನಡೆದು ಶ್ರೀ ಕೋಟಿ ಚೆನ್ನಯರಿಗೆ ಕಲಶಾಭಿಷೇಕ ಹಾಗೂ ತಂಬಿಲ ಸೇವೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಸುಮಾರು 400 ಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ಭಕ್ತಾಧಿಗಳಿಗೆ ಪ್ರಸಾದ ನೀಡಿ ಸತ್ಕರಿಸಿದರು. ಗರಡಿಯ ಅರ್ಚಕ ಹರೀಶ್ ಶಾಂತಿ, ಹರ್ಷಿತ್ ಕುಮಾರ್ ಕೂರೇಲು, ಸರಸ್ವತಿ ಸಂಜೀವ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಕಾರಣಿಕತೆಯ ಗರಡಿ
ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರಿನಿಂದ 8 ಕಿ.ಮೀ ದೂರದ ಪರ್ಪುಂಜದಲ್ಲಿರುವ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಗೆ ತನ್ನದೇ ಆದ ಇತಿಹಾಸವಿದೆ. ಇಲ್ಲಿ ಭಕ್ತಿಯಿಂದ ಕೈ ಮುಗಿದರೆ ಸಕಲ ದೋಷಗಳು ಪರಿಹಾರಗೊಂಡು ಸುಖ,ಸಮೃದ್ಧಿ ಪ್ರಾಪ್ತಿಯಾಗುತ್ತದೆ ಎಂಬುದಕ್ಕೆ ಹಲವು ಜೀವಂತ ನಿದರ್ಶನಗಳು ಇಲ್ಲಿವೆ. ಇಂತಹ ಪವಿತ್ರ ಗರಡಿಯಲ್ಲಿ ನಡೆಯುವ ಶ್ರೀ ಬ್ರಹ್ಮಬೈದೆರ್ಕಳ ನೇಮೋತ್ಸವವು ತಾಲೂಕಿನ ಬ್ರಹ್ಮಬೈದೆರ್ಕಳ ಜಾತ್ರೋತ್ಸವ ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.
ಇಂದು ರಾತ್ರಿ ಶ್ರೀ ಬ್ರಹ್ಮಬೈದೆರ್ಕಳ ಜಾತ್ರೋತ್ಸವ, ಪುದರ್ ದೀದಾಂಡ್ ತುಳು ನಾಟಕ
ದ.30 ರಂದು ಸಂಜೆ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದ ಬಳಿಕ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಬಳಿಕ ಸಭಾ ಕಾರ್ಯಕ್ರಮ, ಶಾಸಕರಾದ ಅಶೋಕ್ ಕುಮಾರ್ ರೈಯವರಿಗೆ ಅಭಿನಂದನೆ ನಡೆಯಲಿದೆ. ಬಳಿಕ ಶ್ರೀ ಬೈದೆರ್ಕಳ ಗರಡಿ ಇಳಿಯುವ ಕಾರ್ಯಕ್ರಮ ನಡೆದು ರಾತ್ರಿ 1 ರಿಂದ ತೆಲಿಕೆದ ಬೊಳ್ಳಿ ಡಾ.ದೇವದಾಸ್ ಕಾಪಿಕಾಡ್‌ರವರ ಚಾ ಪರ್ಕ ಕಲಾವಿದರಿಂದ ‘ ಪುದರ್ ದೀದಾಂಡ್’ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೇಮೋತ್ಸವದಲ್ಲಿ ಪಾಲ್ಗೊಂಡು ಶ್ರೀ ದೈವ ದೇವರ ಕೃಪೆಗೆ ಪಾತ್ರರಾಗುವಂತೆ ಶ್ರೀ ರಾಮಜಾಲು ಕ್ಷೇತ್ರದ ಪ್ರಕಟಣೆ ತಿಳಿಸಿದೆ.