ಗಸ್ತು ಅರಣ್ಯ ಪಾಲಕರು ಮತ್ತು ಅರಣ್ಯ ವೀಕ್ಷಕರ ಸಂಘದ ದಿನಚರಿ ಬಿಡುಗಡೆ, ಸನ್ಮಾನ

0

ಪುತ್ತೂರು: ಗಸ್ತು ಅರಣ್ಯ ಪಾಲಕರು ಮತ್ತು ವೀಕ್ಷಕರು ಅರಣ್ಯ ಇಲಾಖೆಯ ಮುಂಚೂನಿ ಸಿಬ್ಬಂದಿಗಳು ಇಲಾಖೆಯ ಸೇನಾನಿಗಳು. ಹಲವು ಸಮಸ್ಯೆ, ಸಂಘರ್ಷಗಳ ಮಧ್ಯೆ ಅಪಾಯದಲ್ಲಿ ಕರ್ತವ್ಯ ನಿರ್ವಹಿಸುವವರು. ಮುಂಚೂನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿಮ್ಮ ಸೇವೆ ಇಲಾಖೆಗೆ ದೊಡ್ಡ ಕೊಡುಗೆ. ನಿಮ್ಮ ಕೆಲಸ ಇಲಾಖೆಯ ಮೇಲೆ ನೇರ ಪರಿಣಾಮ ಬೀರುತ್ತಿದ್ದು ನಾವು ಗುರಿ ಸಾಧಿಸಲು ಸಾಧ್ಯ. ಮುಂಚೂನಿ ಸಿಬ್ಬಂದಿಗಳು ಮಾಡದಿದ್ದರೆ ಅದು ಅಧಿಕಾರಿಗಳು ಮೇಲೆ ಪರಿಣಾಮ ಬೀಳಲಿದೆ. ಸಂಘರ್ಷದಲ್ಲಿ ಕೆಲಸ ಮಾಡುತ್ತಿರುವ ನಿಮ್ಮ ಸಾಧನೆ ಶ್ಲಾಘನೀಯ ಎಂದು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಥೋನಿ ಎಸ್ ಮರಿಯಪ್ಪ ಹೇಳಿದರು.


ದರ್ಬೆ ಅಶ್ವಿನಿ ಹೊಟೇಲ್ ಸಭಾಂಗಣದಲ್ಲಿ ಡಿ.30ರಂದು ನಡೆದ ಅರಣ್ಯ ಇಲಾಖೆಯ ಗಸ್ತು ಅರಣ್ಯ ಪಾಲಕರು ಮತ್ತು ವೀಕ್ಷಕರ ಸಂಘದ 2024ರ ಸಾಲಿನ ದಿನಚರಿ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ, ದಿನಚರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಸಿಬ್ಬಂದಿಗಳಿಗೆ ರೈಫಲ್ ತರಬೇತಿ ನೀಡುವ ಬಗ್ಗೆ ಸಿಬ್ಬಂದಿಗಳ ಪಟ್ಟಿ ಮಾಡಿದ್ದು, ತರಬೇತಿ ಬಗ್ಗೆ ಜಿಲ್ಲಾ ವರಿಷ್ಠಾಧಿಕಾರಿಗಳಲ್ಲಿ ಮಾತನಾಡಿದ್ದು ದಿನಾಂಕ ನಿಗದಿಯಾಗಬೇಕಿದೆ. ಸಿಬ್ಬಂದಿಗಳಿಗೆ ವಲಯದ ವ್ಯಾಪ್ತಿಯಲ್ಲಿ ವಸತಿಗೃಹ, ವಿವಿಧ ಭತ್ಯೆ, ಸೌಲಭ್ಯಗಳಿಗಿರುವ ತಾಂತ್ರಿಕ ತೊಂದರೆಗಳನ್ನು ಆದ್ಯತೆ ಮೇರೆಗೆ ಪರಿಶೀಲಿಸಿ ಪರಿಹರಿಸಲಾಗುವುದು. ಕರ್ತವ್ಯದ ಸಮಯದಲ್ಲಿ ಅನಾಹುತಗಳಾದರೆ ಕುಟುಂಬದವರಿಗೆ ನೆರವಾಗಲು ವೇತನ ಬ್ಯಾಂಕಿನಲ್ಲಿಟ್ಟು ಅದರಿಂದ ವಿವಿಧ ಸವಲತ್ತುಗಳ ಪಡೆಯುವ ನಿಟ್ಟಿನಲ್ಲಿ ವಿವಿಧ ಬ್ಯಾಂಕ್‌ಗಳ ಮೂಲಕ ಮಾಹಿತಿ ನೀಡಲಾಗಿದ್ದು ಎಲ್ಲರ ಇದನ್ನು ಸದುಪಯೋಗ ಪಡೆದುಕೊಳ್ಳುವಂತೆ ಅವರು ತಿಳಿಸಿದರು.
ಪುತ್ತೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ಮಾತನಾಡಿ, ಜನರ ಜೊತೆ ಬೆರೆತು, ಘರ್ಷಣೆಯ ಮಧ್ಯೆಯು ಅರಣ್ಯ ಪಾಲಕರ ಸೇವೆ ಇಲಾಖೆಯಲ್ಲಿ ಪ್ರಮುಖವಾಗಿದೆ. ಮುಂಚೂನಿಯಲ್ಲಿರುವ ನಿಮ್ಮ ಉತ್ತಮ ಕಾರ್ಯದಿಂದಾಗಿ ಅಧಿಕಾರಿಗಳು, ಇಲಾಖೆಗೆ ಉತ್ತಮ ಹೆಸರು ಬರುತ್ತಿದೆ. ತಮ್ಮ ಕರ್ತವ್ಯದ ಜೊತೆಗೆ ಮುಂಜಾಗ್ರತೆಯೂ ಆವಶ್ಯಕ. ಅರಣ್ಯ ಇಲಾಖೆಯಲ್ಲಿಯೂ ಉತ್ತಮ ಪ್ರತಿಭೆಗಳಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಗಸ್ತು ಅರಣ್ಯ ಪಾಲಕರ ಮತ್ತು ವೀಕ್ಷಕರ ಸಂಘದ ಅಧ್ಯಕ್ಷ ಚಿದಾನಂದ ಬಿ.ಮಾತನಾಡಿ, ಗಸ್ತು ಅರಣ್ಯ ಪಾಲಕರು ಹಾಗೂ ಅರಣ್ಯಯ ವೀಕ್ಷಕರು ಕಾರ್ಯದ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ. ಸಿಬ್ಬಂದಿಗಳ ಸಂಖ್ಯೆ ಶೇ.50ರಷ್ಟು ಕಡಿಮೆಯಿದೆ. ಸಿಬ್ಬಂದಿಗಳು ಸಂಖ್ಯೆ ಗಣನೀಯ ಇಳಿಕೆಯಾಗಿದ್ದು, ಪ್ರತಿಯೊಬ್ಬರಿಗೂ ಹೆಚ್ಚುವರಿ ಜವಾಬ್ದಾರಿಯ ಹೊರೆಯಿದೆ. ಬೇಸಿಗೆಯಲ್ಲಿ ಸಮಸ್ಯೆಗಳಿಗೆ ಸ್ಪಂದಿಸಲು, ಅತಿಕ್ರಮಣ ತೆರವುಗೊಳಿಸಲು ಸಿಬ್ಬಂದಿ ಕೊರತೆಯಾಗಲಿದೆ. ನಾಲ್ಕನೇ ಅಧಿಸೂಚಿತ ಅರಣ್ಯ ಪ್ರದೇಶಗಳ ಬಗ್ಗೆ ಗಡಿ ಗುರುತು ದಾಖಲೆಗಳಿಲ್ಲ. ಸಂಪೂರ್ಣ ನಾಶವಾಗಿದ್ದು ತಿಳಿದುಕೊಳ್ಖುವುದು ಅಸಾಧ್ಯ. ಇದರ ಕುರಿತು ಸೂಕ್ತ ಕ್ರಮಕೈಗೊಂಡು ಅರಣ್ಯ ದಾಖಲೆಗಳನ್ನು ಮಾಡುವಂತೆ ಅವರು ವಿನಂತಿಸಿದರು.
ಪ್ರಧಾನ ಕಾರ್ಯದರ್ಶಿ ಬರಮಪ್ಪ ಎಚ್ ಬಳಗಲ್ಲ ಪ್ರಾಸ್ತಾವಿಕವಾಗಿ ಮಾತನಾಡಿ, ರಜಾ ದಿನಗಳಲ್ಲಿ ನಿರ್ವಹಿಸುವ ಕೆಲಸಗಳಿಗೆ ಹಿಂದಿನ ದರದಲ್ಲಿ ದಿನಕ್ಕೆ ರೂ.30 ಮಾತ್ರ ನೀಡಲಾಗುತ್ತಿದೆ. ಈ ತನಕ ಪರಿಷ್ಕರಣೆಯಾಗಿಲ್ಲ. ಮಂಜೂರಾದ ಹುದ್ದೆಗಳಿಗಿಂತ ಸಿಬ್ಬಂದಿಗಳ ಸಂಖ್ಯೆ ಶೇ.50 ಕಡಿಮೆ ಇದ್ದು ಹೆಚ್ಚವರಿಯಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಪ್ರಯಾಣ ಭತ್ತೆ, ದಿನ ಭತ್ತೆಗಳು ಸಿಗುತ್ತಿಲ್ಲ. ವೀಕ್ಷಕ ಹುದ್ದೆಯಿಂದ ಪದೋನ್ನತಿ ಹೊಂದಿದವರಿಗೆ ರೈಪಲ್ ತರಬೇತಿ ನೀಡಬೇಕು, ವಸತಿ ಗೃಹಗಳು ದುರಸ್ತಿ, ವಲಯಗಳ ಸಮೀಪದಲ್ಲಿ ಹೊಸ ವಸತಿ ಗೃಹಗಳ ನಿರ್ಮಾಣವಾಗಬೇಕು ಎಂದು ಹೇಳಿದರು.
ಪುತ್ತೂರು ವಲಯದ ವಲಯ ಅರಣ್ಯಾಧಿಕಾರಿ ಬಿ.ಎಮ್ ಕಿರಣ್, ಪಂಜ ವಲಯಾರಣ್ಯಾಧಿಕಾರಿ ಗಿರೀಶ್, ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ವಿಮಲ್ ಬಾಬು, ಬಂಟ್ವಾಳ ವಲಯಾರಣ್ಯಾಧಿಕಾರಿ ಪ್ರಪುಲ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ನಡೆದ ಸನ್ಮಾನದಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ.95 ಅಂಕ ಪಡೆದ ಫಾತಿಮತ್ ಸಹನಾ, ವಿಜ್ಞಾನ ವಿಭಾಗದಲ್ಲಿ ಶೇ.85 ಅಂಕಗಳಿಸಿದ ಸಿಂಚನಾ, ಕೇರಳ ವಿಶ್ವವಿದ್ಯಾನಿಲಯದ ಮೂಲಕ ಪ್ರಥಮ ಬಾರಿಗೆ ಪಿಎಚ್‌ಡಿ ಪದವಿ ಪಡೆಯಲು ಇಲಾಖೆಯಿಂದ ಅನುಮತಿ ಪಡೆದುಕೊಂಡಿರುವ ಸೋಮನಿಂಗ ಪೊನ್ನಪ್ಪ ಹಿಪ್ಪರಗಿಯವರನ್ನು ಸನ್ಮಾನಿಸಲಾಯಿತು. ನಿಕಟಪೂರ್ವ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವಿದ್ಯಾಶ್ರೀ ಕಲ್ಲಡ್ಕ ಪ್ರಾರ್ಥಿಸಿದರು. ಕರ್ನಾಟಕ ರಾಜ್ಯ ಗಸ್ತು ಅರಣ್ಯ ಪಾಲಕರ ಮತ್ತು ವೀಕ್ಷಕರ ಮಂಗಳೂರು ವೃತ್ತದ ಅಧ್ಯಕ್ಷ ಜಗದೀಶ ಕೆ.ಎನ್ ಸ್ವಾಗತಿಸಿದರು. ಕಾರ್ಯದರ್ಶಿ ಬರಮಪ್ಪ ಎಚ್ ಬಳಗಲ್ಲ ಪ್ರಾಸ್ತಸವಿಕವಾಗಿ ಮಾತನಾಡಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿ ಉಪ್ಪಿನಂಗಡಿ ಗಸ್ತು ಅರಣ್ಯ ಪಾಲಕ ರಾಜೇಶ್ ಕೆ. ವಂದಿಸಿದರು. ಶಿವಾನಂದ ಕುದರಿ, ಜಯಪ್ರಕಾಶ್, ದಿವಾಕರ ಎಂ.ಎನ್., ಪ್ರಕಾಶ್, ದೀಪಕ್ ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು. ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಹಾಗೂ ನಂತರ ವಿದ್ಯಾಶ್ರೀ ಕಲ್ಲಡ್ಕರವರಿಂದ ಸಂಗೀತ ರಸಮಂಜರಿ ನಡೆಯಿತು.

LEAVE A REPLY

Please enter your comment!
Please enter your name here