ಕಲ್ಪಣೆ ಶಾಲೆಯ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪರೀಕ್ಷಾ ಮಾರ್ಗದರ್ಶನ

0

ಸರಿಯಾದ ಸಿದ್ಧತೆಯೊಂದಿಗೆ ಪರೀಕ್ಷೆ ಎದುರಿಸಿ: ಲಕ್ಷ್ಮೀಕಾಂತ ರೈ ಅನಿಕೂಟೇಲ್

ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಶೈಕ್ಷಣಿಕ ಜೀವನದ ಹಂತದಲ್ಲಿ ಕಠಿಣ ಪ್ರಯತ್ನವನ್ನು ಮಾಡಿದಾಗ ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಸಾಧ್ಯವಾಗುತ್ತದೆ. ಎಸ್ ಎಸ್ ಎಲ್ ಸಿ ಎನ್ನುವುದು ವಿದ್ಯಾರ್ಥಿ ಜೀವನದ ಅತ್ಯಂತ ಪ್ರಮುಖ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಅದನ್ನು ಸರಿಯಾದ ಸಿದ್ಧತೆಯೊಂದಿಗೆ ಎದುರಿಸಬೇಕು. ಯಾವುದೇ ರೀತಿಯ ಪರೀಕ್ಷೆ ಎಂದರೆ ಭಯ, ಒತ್ತಡ ಇದ್ದೇ ಇರುತ್ತದೆ. ಆದರೆ ಅದಕ್ಕಾಗಿ ನಾವು ಸರಿಯಾದ ಸಿದ್ಧತೆಗಳನ್ನು ಮಾಡಿಕೊಂಡು ಪರೀಕ್ಷೆ ಬರೆದರೆ ಮಾತ್ರ ಉತ್ತಮ ಅಂಕ ಗಳಿಕೆ ಸಾಧ್ಯವಿದೆ. ಹೀಗಾಗಿ ಪರೀಕ್ಷೆ ಬರೆಯುವ ಮುಂಚೆ ಕಠಿಣ ಹಾಗೂ ಸಮರ್ಥವಾದ ಸಿದ್ಧತೆಯನ್ನು ಮಾಡಿಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ ಎಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಹೇಳಿದರು.

ಸರ್ವೆಯಲ್ಲಿರುವ ಕಲ್ಪಣೆ ಸರಕಾರಿ ಪ್ರೌಢಶಾಲೆಯಲ್ಲಿ ಬಿ.ಎಡ್ ಪ್ರಶಿಕ್ಷಣಾರ್ಥಿಗಳ ನೇತೃತ್ವದಲ್ಲಿ ನಡೆದ ‘ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪರೀಕ್ಷಾ ಭಯವೇಕೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಯಾವುದೇ ಪರೀಕ್ಷೆಯಾದರೂ ಸರಿಯಾದ ಪೂರ್ವ ತಯಾರಿ ಇದ್ದಲ್ಲಿ, ನಿರಂತರವಾದ ಅಧ್ಯಯನ ಇದ್ದಲ್ಲಿ ಸುಲಭವಾಗಿ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಇನ್ನೂ 95 ದಿನಗಳ ಕಾಲಾವಕಾಶವಿದ್ದು, ಅದಕ್ಕೆ ಪೂರಕವಾದ ವೇಳಾಪಟ್ಟಿಯನ್ನು ತಯಾರಿಸಿ ಓದುವುದನ್ನು ರೂಡಿಸಿಕೊಳ್ಳಿ. ಜೊತೆಗೆ ಹಳೇ ಪ್ರಶ್ನೆಪತ್ರಿಕೆಗಳನ್ನು ಅಥವಾ ಮಾದರಿ ಪ್ರಶ್ನೆಪತ್ರಿಕೆಗಳನ್ನು ಅಯ್ದುಕೊಂಡು ಸರಿಯಾದ ಅಭ್ಯಾಸ ಮಾಡಿ ಎಂದ ಅವರು, ಗೆಲುವಿಗಾಗಿ ಕಠಿಣ ಪರಿಶ್ರಮ ನಿಮ್ಮಲ್ಲಿರಲಿ. ನಿಮ್ಮ ಭವಿಷ್ಯದ ಶಿಲ್ಪಿಗಳು ನೀವೇ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಲ್ಪಣೆ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಜಯರಾಮ್ ಶೆಟ್ಟಿ ಕೆ. ಮಾತನಾಡಿ, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ತಮ್ಮ ಓದಿನಲ್ಲಿ ಶಿಸ್ತು ಮತ್ತು ಉತ್ತಮ ರೀತಿಯಿಂದ ಪ್ರಯತ್ನಿಸಿದರೆ ಯಶಸ್ಸು ಎನ್ನುವುದು ಅವರಿಗೆ ಲಭಿಸುತ್ತದೆ. ಆದರೆ ಈ ಹಿನ್ನಲೆಯಲ್ಲಿ ಕಠಿಣ ಅಧ್ಯಯನ ಮಾಡುವ ಅಗತ್ಯ ವಿದ್ಯಾರ್ಥಿಗಳಿಗಿದೆ. ಪರೀಕ್ಷೆಗೆ ಇನ್ನೂ 3 ತಿಂಗಳಿನಷ್ಟು ಸಮಯವಿದ್ದು, ಸರಿಯಾಗಿ ಓದಿ ರೆಡಿಯಾಗಬಹುದು ಎಂದು ಹೇಳಿದರಲ್ಲದೆ, ಶಾಲೆಯಲ್ಲಿರುವ ಬಿ.ಎಡ್ ಪ್ರಶಿಕ್ಷಣಾರ್ಥಿಗಳ ನೇತೃತ್ವದಲ್ಲಿ ಒಂದು ಉತ್ತಮ ಕಾರ್ಯಕ್ರಮವು ನಡೆಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೇದಿಕೆಯಲ್ಲಿ ಕಲ್ಪಣೆ ಸರಕಾರಿ ಪ್ರೌಢಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ಅದೇ ರೀತಿ ಕಾರ್ಯಕ್ರಮದಲ್ಲಿ ಬೋಧಕ ಹಾಗೂ ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಬಿ.ಎಡ್ ಪ್ರಶಿಕ್ಷಣಾರ್ಥಿಗಳಾದ ನಿವೇದಿತಾ ಸ್ವಾಗತಿಸಿ, ಧನ್ಯಶ್ರೀ ವಂದಿಸಿದರು. ಬಿ.ಎಡ್ ಪ್ರಶಿಕ್ಷಣಾರ್ಥಿ ಬಾಲಕೃಷ್ಣ ಕಾರ್ಯಕ್ರಮವನ್ನು ನಿರೂಪಿಸಿದರು.

“ಕಠಿಣ ವಿಷಯಗಳು ಎಂದು ಕರೆಸಿಕೊಳ್ಳುವ ಗಣಿತ, ಇಂಗ್ಲಿಷ್, ವಿಜ್ಞಾನಗಳ ಕುರಿತು ವಿಶೇಷ ಕಾಳಜಿ ವಹಿಸಿ, ಅದಕ್ಕಾಗಿ ವಿಶೇಷ ವೇಳಾಪಟ್ಟಿಯನ್ನು ರಚಿಸಿಕೊಂಡು ಜಾಸ್ತಿ ಅಧ್ಯಯನ ಮಾಡಬೇಕು. ಇಂಗ್ಲೀಷ್ ಗ್ರಾಮರ್, ಗಣಿತ ಅಥವಾ ವಿಜ್ಞಾನದ ಸೂತ್ರಗಳನ್ನು ವಿವಿಧ ರೀತಿಯಲ್ಲಿ ಅರ್ಥ ಮಾಡಿಕೊಂಡು ಕಲಿಯಿರಿ. ಜೊತೆಗೆ ಆಯಾ ವಿಷಯದ ಕುರಿತು ಶಾಲಾ ಶಿಕ್ಷಕರ ನಿರಂತರವಾದ ಮಾರ್ಗದರ್ಶನ ಪಡೆದುಕೊಳ್ಳಿ. ಈಗ ನಿಮ್ಮ ಮುಂದಿರುವ 95ರಷ್ಟು ದಿನಗಳಲ್ಲಿ ಉತ್ತಮವಾದ ಒಂದು ವೇಳಾಪಟ್ಟಿಯನ್ನು ರಚಿಸಿ, ಸರಿಯಾದ ಪರಿಶ್ರಮವನ್ನು ಹಾಕಿ ನೀವು ಪ್ರಯತ್ನವನ್ನು ಪಟ್ಟಾಗ ಖಂಡಿತ ನಿಮಗೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ”
ಲಕ್ಷ್ಮೀಕಾಂತ ರೈ ಅನಿಕೂಟೇಲ್
ರಾಜ್ಯಶಾಸ್ತ್ರ ವಿಭಾಗ
ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರು

LEAVE A REPLY

Please enter your comment!
Please enter your name here