ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದ ಚರಂಡಿಗೆ ತಡೆ-ನಿಂತ ಮಲೀನ ನೀರಿನಿಂದಾಗಿ ಸಾಂಕ್ರಾಮಿಕ ರೋಗದ ಭೀತಿ

0

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದ ಉಪ್ಪಿನಂಗಡಿಯಲ್ಲಿ ಚರಂಡಿಯಲ್ಲಿ ಮಲೀನ ನೀರಿನ ಹರಿಯುವಿಕೆಗೆ ತಡೆಯಾಗಿದ್ದು, ಇದರಿಂದಾಗಿ ಸಾಂಕ್ರಾಮಿಕ ರೋಗ ಭೀತಿ ಆವರಿಸಿದ್ದಲ್ಲದೆ, ಪರಿಸರದ ಬಾವಿಗಳೂ ಮಲೀನಗೊಳ್ಳುವಂತಾಗಿದೆ.
ಉಪ್ಪಿನಂಗಡಿ ಪೇಟೆಯ ಮಲೀನ ನೀರೆಲ್ಲಾ ಹರಿದು ಕುಮಾರಧಾರ ನದಿಗೆ ಹೋಗುವ ಚರಂಡಿ ಇದಾಗಿದ್ದು, ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಹಿಂಬದಿಯಿರುವ ಈ ಚರಂಡಿಯನ್ನು ಆವರಿಸಿಕೊಂಡೇ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ತಡೆಗೋಡೆ ಕಾಮಗಾರಿ ನಡೆಯುತ್ತಿದೆ. ಇದರಿಂದ ಚರಂಡಿಯಲ್ಲಿ ಮಣ್ಣು ತುಂಬಿ ಮಲೀನ ನೀರು ಚರಂಡಿಯಲ್ಲಿ ಹರಿಯದೇ ಅಲ್ಲೇ ನಿಲ್ಲುವಂತಾಗಿದೆ. ಇದರಿಂದಾಗಿ ಶಾಲಾ ಪರಿಸರ ಹಾಗೂ ಅದರ ಸುತ್ತಮುತ್ತಲಿನ ಪರಿಸರ ದುರ್ನಾತ ಬೀರುತ್ತಿದ್ದು, ಇದು ಸೊಳ್ಳೆ ಉತ್ಪಾದನಾ ತಾಣವಾಗಿ ಸಾಂಕ್ರಾಮಿಕ ರೋಗ ನಿರ್ಮಾಣ ಕೇಂದ್ರವಾಗಿದೆ. ಇದರೊಂದಿಗೆ ಪರಿಸರದಲ್ಲಿರುವ ಬಾವಿಗಳಲ್ಲೂ ಒಸರಿನ ಮೂಲಕ ಮಲೀನ ನೀರು ತುಂಬಿಕೊಂಡಿದ್ದು, ಕುಡಿಯುವ ನೀರಿನ ಬಾವಿ ಕೂಡಾ ಕಲುಷಿತಗೊಂಡಿದೆ.

ಚರಂಡಿಯಲ್ಲಿ ಶೇಖರಗೊಂಡಿರುವ ಮಲೀನ ನೀರು


ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ವೈದ್ಯರಾದ ಡಾ. ಎಂ.ಆರ್. ಶೆಣೈ, ಮಳೆ ನೀರು ಹಾಗೂ ಮಲೀನ ನೀರು ಚರಂಡಿಯಲ್ಲಿ ಸರಾಗವಾಗಿ ಹರಿದರೆ ಸಮಸ್ಯೆಯಿಲ್ಲ. ಆದರೆ ನೀರು ಒಂದೆಡೆ ನಿಂತರೆ ಅದು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿ ಸಾಂಕ್ರಾಮಿಕ ರೋಗಗಳು ಹರಡಬಹುದು. ನಿಂತ ಈ ನೀರಿನಿಂದಾಗಿ ಪರಿಸರದ ಎಲ್ಲಾ ಬಾವಿಗಳು ಕಲುಷಿತಗೊಳ್ಳುವಂತಾಗಿದೆ. ಸುಣ್ಣ ಹಾಗೂ ಬ್ಲೀಚಿಂಗ್ ಪೌಡ್‌ರಗಳನ್ನು ಎರಡು ದಿನಕ್ಕೊಮ್ಮೆ ಬಳಸುವ ಅನಿವಾರ್ಯತೆ ಮೂಡಿದೆ ಎಂದರು.

ಮಲೀನ ನೀರಿನಿಂದಾಗಿ ಕಲುಷಿತಗೊಂಡಿರುವ ಬಾವಿ

LEAVE A REPLY

Please enter your comment!
Please enter your name here