ಪುತ್ತೂರು:ಕೆಮ್ಮಿಂಜೆ ಗ್ರಾಮದ ಇಡಬೆಟ್ಟು ಸಮೀಪದ ಕರೆಜ್ಜ ಎಂಬಲ್ಲಿ ದಿಗ್ಬಂಧನದಲ್ಲಿದ್ದ ವಿವಾಹಿತ ಮಹಿಳೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಈ ಕುರಿತು ಇನ್ನೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ.ಕೃತ್ಯ ನಡೆದಿರುವ ಸ್ಥಳದ ವ್ಯಾಪ್ತಿಗೆ ಬರುವ ಗ್ರಾಮಾಂತರ ಪೊಲೀಸ್ ಠಾಣೆಯವರು, ಇದು ಮಹಿಳಾ ಠಾಣೆಗೆ ಸಂಬಂಧಿಸಿದ ವಿಚಾರ ಎಂದು ಕೈ ಕಟ್ಟಿ ಕುಳಿತರೆ ಮಹಿಳಾ ಪೊಲೀಸ್ ಠಾಣೆಯವರು, ಇದು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಆದ ಘಟನೆಯಾಗಿರುವುದರಿಂದ ಅವರೇ ಪ್ರಕರಣ ದಾಖಲಿಸಬೇಕೆಂದು ಪಟ್ಟು ಹಿಡಿದಿರುವುದರಿಂದ ಇನ್ನೂ ಪ್ರಕರಣ ದಾಖಲಾಗಿಲ್ಲ ಎಂದು ಹೇಳಲಾಗುತ್ತಿದೆ.
ಸಂತ್ರಸ್ತೆ ಆಶಾಲತಾ ಅವರನ್ನು ರಕ್ಷಣೆ ಮಾಡಿದ ಸ್ಥಳ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ.ಆದರೆ ಇಲ್ಲಿ ಮಹಿಳೆಯೋರ್ವರಿಗೆ ಅನ್ಯಾಯವಾಗಿರುವುದರಿಂದ ಮಹಿಳಾ ಪೊಲೀಸ್ ಠಾಣೆಯವರೇ ಸಂತ್ರಸ್ತೆಯನ್ನು ವಿಚಾರಣೆ ಮಾಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕಾಗುತ್ತದೆ ಎನ್ನಲಾಗುತ್ತಿದೆ.ಜ.2ರಂದು ರಾತ್ರಿಯ ತನಕ ಮಹಿಳೆ ಏನೂ ಮಾತನಾಡುವ ಸ್ಥಿತಿಯಲ್ಲಿಲ್ಲ ಎನ್ನುವ ಕಾರಣಕ್ಕಾಗಿ ಪ್ರಕರಣ ದಾಖಲಿಸಲಾಗಿಲ್ಲ.ಆದರೆ ಜ.3ರಂದು ಸಂತ್ರಸ್ತೆ ಮಾತನಾಡುತ್ತಿದ್ದರೂ ಆಕೆಯನ್ನು ಪೊಲೀಸರು ವಿಚಾರಿಸುವ ಗೋಜಿಗೆ ಹೋಗಿಲ್ಲ ಎನ್ನುವ ಆರೋಪವೂ ಕೇಳಿ ಬರುತ್ತಿದೆ.ಸಂತ್ರಸ್ತೆಯನ್ನು ದಿಗ್ಬಂಧನದಿಂದ ಬಿಡುಗಡೆಗೊಳಿಸಿ ಆಸ್ಪತ್ರೆಗೆ ಸೇರಿಸಲಾಗಿದೆಯಾದರೂ ಆಕೆಯ ಆರೈಕೆ ಮಾಡುವವರು ಯಾರೂ ಇಲ್ಲವಾಗಿದೆ.ಸದ್ಯ ಆಸ್ಪತ್ರೆಯ ರೋಗಿಯೊಬ್ಬರ ಆರೈಕೆ ಮಾಡುತ್ತಿರುವ ಮಹಿಳೆಯೊಬ್ಬರು ಮಾನವೀಯತೆ ನೆಲೆಯಲ್ಲಿ ಈಕೆಗೆ ಚಹಾ,ಬ್ರೆಡ್ ನೀಡಿ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ.ಸಂತ್ರಸ್ತ ಮಹಿಳೆ ಚೇತರಿಸಿಕೊಂಡಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಕೆಯಲ್ಲಿ ಮಾತನಾಡಿ ಬಂದಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.