ರಾಮಕುಂಜ: ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಮುಖಂಡರಾದ ರಾಮಕುಂಜ ಗ್ರಾಮದ ನೀರಾಜೆ ನಿವಾಸಿ ಎನ್.ವೇದವ್ಯಾಸ ಆಚಾರ್(89ವ.)ಅವರು ಜ.8ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.
1961ರಿಂದ 2005ರ ತನಕ ಸುಮಾರು 44 ವರ್ಷಗಳ ಕಾಲ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ದೇವಸ್ಥಾನದಲ್ಲಿ ವಿವಿಧ ಅಭಿವೃದ್ಧಿ ಕೆಲಸ ಕೈಗೊಂಡಿದ್ದರು. 25ವರ್ಷ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದ ವೇದವ್ಯಾಸ ಆಚಾರ್ ಅವರು ಪ್ರಸ್ತುತ ಉಪಾಧ್ಯಕ್ಷರಾಗಿದ್ದರು. ಆಲಂಕಾರು ಗ್ರಾ.ಪಂ.ಅಧ್ಯಕ್ಷರಾಗಿ 25ವರ್ಷ ಸೇವೆ, ಆಲಂಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಸ್ಥಾಪಕ ನಿರ್ದೇಶಕರಾಗಿ, ರಾಮಕುಂಜ-ಕೊಯಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದರು.
ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪರಮ ಭಕ್ತರು, ಆಪ್ತರೂ ಆಗಿದ್ದ ವೇದವ್ಯಾಸ ಆಚಾರ್ ಅವರು ಪೇಜಾವರ ಮಠದೊಂದಿಗೆ ನಿರಂತರ ಸಂಪರ್ಕವಿರಿಸಿಕೊಂಡಿದ್ದರು. ಯಕ್ಷಗಾನ, ತಾಳಮದ್ದಳೆ,ನಾಟಕಗಳಿಗೂ ಪ್ರೋತ್ಸಾಹ ನೀಡುತ್ತಿದ್ದು ನಾಟಕದಲ್ಲಿ ಪಾತ್ರದಾರಿಯಾಗಿ ಕಾಣಿಸಿಕೊಂಡಿದ್ದರು. ಊರಿನ ಹಲವು ದೇವಸ್ಥಾನದ ಜೀರ್ಣೋದ್ದಾರ ಸೇರಿ ಇತರೇ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಇತ್ತೀಚಿನ ಕೆಲ ವರ್ಷಗಳಿಂದ ಅವರು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು.
ಮೃತರು ಪುತ್ರ ದೇವಿಪ್ರಸಾದ್, ಪುತ್ರಿಯರಾದ ನಾಗಜ್ಯೋತಿ, ವತ್ಸಲಾ, ಅಹಲ್ಯಾ ಅವರನ್ನು ಅಗಲಿದ್ದಾರೆ. ಮೃತರ ಮನೆಗೆ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್., ಸಂಚಾಲಕ ಟಿ.ನಾರಾಯಣ ಭಟ್, ಕೋಶಾಧಿಕಾರಿ ಕೆ.ಸೇಸಪ್ಪ ರೈ, ಸದಸ್ಯ ಲಕ್ಷ್ಮೀನಾರಾಯಣ ರಾವ್ ಆತೂರು, ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಗೋಪಾಲಕೃಷ್ಣ ಪಡ್ಡಿಲ್ಲಾಯ, ಕೃಷ್ಣಮೂರ್ತಿ ಕಲ್ಲೇರಿ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.