ಪುತ್ತೂರು ರೈಲ್ವೇ ನಿಲ್ದಾಣದ ಎದುರು ರೈಲ್ವೇ ಮಜ್ದೂರ್ ಯೂನಿಯನ್ ಉಪವಾಸ ಸತ್ಯಾಗ್ರಹ- ಹಳೇ ಪಿಂಚಣಿ ಯೋಜನೆ ಮರು ಜಾರಿಗೊಳಿಸುವಂತೆ ಆಗ್ರಹ

0

ಹೊಸ ಪಿಂಚಣಿಯಿಂದ ನಮಗೆ ಸೌಲಭ್ಯವಿಲ್ಲ- ವಿಠಲ್ ನಾಯಕ್

ಪುತ್ತೂರು: ಹಳೇ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ ಪುತ್ತೂರು ಘಟಕದಿಂದ ಕಬಕ ಪುತ್ತೂರು ರೈಲ್ವೇ ನಿಲ್ದಾಣದ ಎದುರು ಜ.8 ರಿಂದ ಆರಂಭಗೊಂಡಿರುವ ಉಪವಾಸ ಸತ್ಯಾಗ್ರಹ 2ನೇ ದಿನಕ್ಕೆ ಕಾಲಿಟ್ಟಿದೆ.


2004 ಜನವರಿ 1ರ ಬಳಿಕ ನೇಮಕವಾದ ಎಲ್ಲಾ ರೈಲ್ವೇ ಕಾರ್ಮಿಕರಿಗೆ ಹೊಸ ಪಿಂಚಣಿ ಪದ್ದತಿಯನ್ನು ಜಾರಿಗೊಳಿಸಿದ್ದಾರೆ. ಈ ಹೊಸ ಪಿಂಚಣಿ ಪದ್ಧತಿಯನ್ನು ರದ್ದು ಮಾಡಿ ಹಳೇ ಪಿಂಚಣಿ ಪದ್ಧತಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಇದೀಗ ಕೇಂದ್ರದ ಎಲ್ಲ ಕಚೇರಿಗಳ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದ್ದು, ಜನವರಿ 11 ರವರೆಗೂ ನಡೆಯಲಿರುವ ಈ ಉಪವಾಸ ಸತ್ಯಾಗ್ರಹದಲ್ಲಿ ಸರಕಾರಕ್ಕೆ ಕೊನೆಯ ಎಚ್ಚರಿಕೆ ನೀಡಲಿದ್ದಾರೆ. ಪ್ರತಿ ದಿನ ಬೆಳೀಗ್ಗೆ ಗಂಟೆ 9 ರಿಂದ ಸಂಜೆ ಗಂಟೆ 5ರ ತನಕ ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಸಾಮೂಹಿಕ ಮುಷ್ಕರ ನಡೆಸುವ ಚಿಂತನೆ ನಡೆಸಲಾಗಿದೆ.


ಹೊಸ ಪಿಂಚಣಿಯಿಂದ ನಮಗೆ ಸೌಲಭ್ಯವಿಲ್ಲ:
ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ ಪುತ್ತೂರು ಘಟಕದ ಕಾರ್ಯದರ್ಶಿ ವಿಠಲ್ ನಾಯಕ್ ಅವರು ಮಾತನಾಡಿ ನಿವೃತ್ತಿಯಾದ ಬಳಿಕ ನಮಗೆ ಹಳೆ ಪಿಂಚಣಿ ಸ್ಕೀಮ್ ಇದ್ದರೆ ನಮಗೆ ಜೀವನ ಮಾಡಲು ಒಂದು ಧೈರ್ಯ ಇರುತ್ತದೆ. ನಮಗೆ ಹಣ ಮುಖ್ಯವಲ್ಲ. ಆದರೆ ಪಿಂಚಣಿ ಇದ್ದರೆ ನಮ್ಮ ಕುಟುಂಬ ನಡೆಸಲು ಆಗುತ್ತದೆ. ಹೊಸ ಪಿಂಚಣಿ ಪದ್ಧತಿಯಲ್ಲಿ ನಮಗೆ ಯಾವುದೇ ರೀತಿಯ ಸೌಲಭ್ಯವಿಲ್ಲ. ನಿವೃತ್ತಯಾದ ಬಳಿಕ ನಾವು ಯಾರಿಗೂ ಬೇಡವಾದ ರೀತಿಯಲ್ಲಿ ಜೀವನ ಮಾಡಬೇಕಾಗಿ ಬರುತ್ತದೆ. ಈ ನಿಟ್ಟಿನಲ್ಲಿ ನಮಗೆ ಹಳೆ ಪಿಂಚಣಿ ಪದ್ಧತಿಯನ್ನೇ ಜಾರಿಗೊಳಿಸುವಂತೆ ಸರಕಾರದಲ್ಲಿ ಮನವಿ ಮಾಡುತ್ತಿದ್ದೇವೆ ಎಂದರು. ಉಪವಾಸ ಸತ್ಯಾಗ್ರಹದಲ್ಲಿ ಪುತ್ತೂರು ಘಟಕದ ಅಧ್ಯಕ್ಷ ಲಿಂಗರಾಜು, ಉಪಾಧ್ಯಕ್ಷ ಕುಮಾರ್, ಜೊತೆಕಾರ್ಯದರ್ಶಿ ಧಣೀಶ್, ಅಮಲ್ ಸಹಿತ ಹಲವಾರು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here