ಪೆರಾಬೆ ಗ್ರಾ.ಪಂ.ಸಾಮಾನ್ಯ ಸಭೆ

0

*ಅನಧಿಕೃತ ಕಟ್ಟಡ ತೆರವುಗೊಳಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ
*ಸದಸ್ಯರ ಅಸಮಾಧಾನ-ಸಾಮಾನ್ಯ ಸಭೆ ರದ್ದು, ಮುಂದಿನ ಸಭೆ ನಡೆಸದೇ ಇರಲು ನಿರ್ಣಯ
*ಇನ್ನೂ ಸ್ಪಂದನೆ ಸಿಗದೇ ಇದ್ದಲ್ಲಿ ರಾಜೀನಾಮೆಗೆ ಸದಸ್ಯರ ನಿರ್ಣಯ

ಪೆರಾಬೆ: ಸರಕಾರಿ ಜಮೀನಿನಲ್ಲಿರುವ ಅನಧಿಕೃತ ಕಟ್ಟಡ ತೆರವುಗೊಳಿಸುವಂತೆ ಮಾಡಿರುವ ಮನವಿಗೆ ಈ ತನಕ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಗದೇ ಇರುವುದಕ್ಕೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ ಸಾಮಾನ್ಯ ಸಭೆ ರದ್ದುಗೊಳಿಸಿದ ಹಾಗೂ ಸರಕಾರಿ ಜಮೀನಿನಲ್ಲಿರುವ ಅನಧಿಕೃತ ಕಟ್ಟಡ ತೆರವುಗೊಳಿಸುವ ತನಕ ಗ್ರಾ.ಪಂ.ಸಾಮಾನ್ಯ ಸಭೆ ನಡೆಸದೇ ಇರಲು ಮತ್ತು ಇದಕ್ಕೂ ಸ್ಪಂದನೆ ಸಿಗದೇ ಇದ್ದಲ್ಲಿ ರಾಜೀನಾಮೆ ನೀಡುವ ನಿರ್ಣಯ ಕೈಗೊಂಡಿರುವ ಘಟನೆ ಪೆರಾಬೆ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಡೆದಿದೆ.


ಸಭೆ ಜ.9ರಂದು ಅಧ್ಯಕ್ಷೆ ಸಂಧ್ಯಾ ಕೆದ್ದೊಟ್ಟೆ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು. ಪೆರಾಬೆ ಗ್ರಾಮದ ಕುಂಟ್ಯಾನ ನಿವಾಸಿ ಕುಶಾಲಪ್ಪ ಗೌಡ ಎಂಬವರು ಗ್ರಾಮ ಪಂಚಾಯತ್‌ನಿಂದ ತಳ್ಳುಗಾಡಿಗೆ ತಾತ್ಕಾಲಿಕ ವ್ಯಾಪಾರ ಪರವಾನಿಗೆ ಪಡೆದುಕೊಂಡಿದ್ದರು. ಆದರೆ ಕುಶಾಲಪ್ಪ ಗೌಡ ಅವರು ಸದ್ರಿ ಪರವಾನಿಗೆಯನ್ನು ದುರುಪಯೋಗಪಡಿಸಿಕೊಂಡು ಕುಂತೂರಿನಲ್ಲಿ ಸರಕಾರಿ ಜಮೀನಿನಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಇದನ್ನು ತೆರವುಗೊಳಿಸಲು ಸೂಚಿಸಿ ನೋಟಿಸ್ ನೀಡಿದ್ದರೂ ತೆರವುಗೊಳಿಸಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಸದ್ರಿ ಜಮೀನು ಸರಕಾರಿ ಜಮೀನು ಎಂಬ ಬಗ್ಗೆ ಖಾತ್ರಿಪಡಿಸಲು ಸರ್ವೆ ಮಾಡುವಂತೆ ತಹಶೀಲ್ದಾರ್ ಅವರಿಗೆ ಬರೆದುಕೊಳ್ಳಲಾಗಿದೆ. ಆದರೆ ಈ ತನಕವೂ ಸರ್ವೆ ಮಾಡಿರುವುದಿಲ್ಲ. ಈ ವಿಚಾರ ಗ್ರಾಮಸಭೆಯಲ್ಲೂ ಪ್ರಸ್ತಾಪಗೊಂಡು ಗದ್ದಲಕ್ಕೆ ಕಾರಣವಾಗಿತ್ತು. ಸದ್ರಿ ಅನಧಿಕೃತ ಕಟ್ಟಡ ತೆರವುಗೊಳಿಸುವ ಸಂಬಂಧ ಸಾಮಾನ್ಯಸಭೆ, ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಂಡು ತಹಶೀಲ್ದಾರ್ ಹಾಗೂ ಅಧಿಕಾರಿಗಳಿಗೆ ಹಲವು ಸಲ ಮನವಿ ಮಾಡಿದ್ದರೂ ಈ ತನಕ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಇನ್ನಾದರೂ ಸದ್ರಿ ಜಮೀನಿನ ಸರ್ವೆ ಮಾಡಿ ಸರಕಾರಿ ಜಮೀನಿನಲ್ಲಿರುವ ಕಟ್ಟಡ ತೆರವುಗೊಳಿಸಿ ಸದ್ರಿ ಜಮೀನನ್ನು ಗ್ರಾಮ ಪಂಚಾಯತಿಗೆ ಸಂತೆ ಮಾರುಕಟ್ಟೆಗೆ ಕಾದಿರಿಸಿ ಹಸ್ತಾಂತರ ಮಾಡುವಂತೆ ತಹಶೀಲ್ದಾರ್‌ಗೆ ಬರೆದುಕೊಳ್ಳುವುದು. ಈ ಬಗ್ಗೆ ಕ್ರಮ ಆಗುವ ತನಕ ಗ್ರಾಮ ಪಂಚಾಯತ್‌ನ ಸಭೆ ನಡೆಸುವುದು ಬೇಡ ಎಂದು ಸದಸ್ಯರು ಪ್ರಸ್ತಾಪಿಸಿ, ಸಭೆ ರದ್ದುಗೊಳಿಸುವ ನಿರ್ಧಾರ ಕೈಗೊಂಡರು. ಎಲ್ಲಾ ಸದಸ್ಯರು ಇದಕ್ಕೆ ಸಹಮತ ಸೂಚಿಸಿದ ಹಿನ್ನೆಲೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಈ ನಿರ್ಣಯಕ್ಕೂ ಅಧಿಕಾರಿಗಳಿಂದ ಸ್ಪಂದನೆ ಸಿಗದೇ ಇದ್ದಲ್ಲಿ ಎಲ್ಲಾ ಸದಸ್ಯರೂ ತಮ್ಮ ಗ್ರಾಮ ಪಂಚಾಯತ್‌ನ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿಯೂ ಘೋಷಿಸಿದ್ದು ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಉಳಿದಂತೆ ಸಭೆಯಲ್ಲಿ ಬೇರೆ ಯಾವುದೇ ವಿಚಾರದ ಬಗ್ಗೆ ಚರ್ಚೆ ನಡೆಸದೇ ಸದಸ್ಯರೆಲ್ಲರೂ ಸಭೆಯಿಂದ ಹೊರ ನಡೆದರು.


ಸಭೆಯಲ್ಲಿ ಉಪಾಧ್ಯಕ್ಷೆ ವೇದಾವತಿ ಕೆ., ಸದಸ್ಯರಾದ ಕಾವೇರಿ, ಸದಾನಂದ ಕೆ., ಸಿ.ಎಂ.ಫಯಾಝ್, ಮಮತ, ಮೋಹಿನಿ, ಲೀಲಾವತಿ, ಕೃಷ್ಣ ವೈ, ಮೋಹನ್ ದಾಸ್ ರೈ, ಪಿ.ಜಿ.ರಾಜು, ಚಂದ್ರಶೇಖರ ರೈ, ಕುಮಾರ ಬಿ.ಕೆ., ಮೇನ್ಸಿ ಟಿ.ಎಫ್. ಉಪಸ್ಥಿತರಿದ್ದರು. ಪಿಡಿಒ ಕೆ.ಬಿ.ಶಾಲಿನಿ ಅವರು ಸ್ವಾಗತಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here