ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮದ ಆದರ್ಶನಗರ ಅಂಗನವಾಡಿಯ ಆವರಣದ ಹೊರಗಡೆ ಗಿಡ-ಗಂಟಿಗಳು ತುಂಬಿ ಹೋಗಿದ್ದು, ಅಂಗನವಾಡಿಯ ಹಿಂಬದಿ ಮೇಲ್ಚಾವಣಿಗೆ ತಾಗಿಕೊಂಡೇ ಗಿಡಗಳು ಬೆಳೆದಿವೆ. ಪುಟಾಣಿಗಳಿರುವ ಅಂಗನವಾಡಿಯ ಸುತ್ತ ಈ ರೀತಿ ಗಿಡ-ಗಂಟಿಗಳು ಆವರಿಸುವುದರಿಂದ ಹಾವು- ಚೇಳುಗಳು ಬರುವ ಸಾಧ್ಯತೆ ಇದೆ.
34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯ ಆದರ್ಶನಗರಕ್ಕೆ ಹೋಗುವ ದಾರಿಯ ಇಕ್ಕೆಲಗಳಲ್ಲಿ ಫುಟ್ಪಾತ್ ಕಾಣದಂತೆ ಆವರಿಸಿರುವ ಗಿಡ-ಗಂಟಿ, ಹುಲ್ಲುಗಳು ಕೆಲವು ಕಡೆ ರಸ್ತೆಯ ಮೇಲೆಯೂ ಹರಡಿವೆ. ಅಂಗನವಾಡಿಯ ಹಿಂಬದಿಯೂ ಗಿಡ-ಗಂಟಿಗಳು ಬೆಳೆದಿದ್ದು, ಅದರ ಆವರಣಗೋಡೆಯ ಸುತ್ತವಂತೂ ಸಂಪೂರ್ಣ ಗಿಡ-ಗಂಟಿಗಳು ಆವರಿಸಿಕೊಂಡಿವೆ. ಅಂಗನವಾಡಿಯ ಮೇಲ್ಚಾವಣಿಗೆ ಬಳ್ಳಿ- ಗಿಡ-ಗಂಟಿಗಳು ಹರಡತೊಡಗಿವೆ. ಗೇಟ್ನ ಬಳಿಯ ರಸ್ತೆಯಲ್ಲೂ ಸಂಪೂರ್ಣ ಹುಲ್ಲುಗಳು ಆವರಿಸಿಕೊಂಡಿದ್ದು, ಪುಟಾಣಿ ಮಕ್ಕಳು ಇರುವ ಪ್ರದೇಶದ ಸುತ್ತ- ಮುತ್ತ ಈ ರೀತಿ ಗಿಡ-ಗಂಟಿಗಳು ಆವರಿಸಿಕೊಂಡು ಅವುಗಳು ಹಾವು- ಚೇಳುಗಳ ಆವಾಸತಾಣವಾದರೆ ಮಕ್ಕಳ ಸುರಕ್ಷತೆಯ ಭೀತಿಯೂ ಕಾಡುವಂತಾಗಿದೆ. ಆದರೂ ರಸ್ತೆ ಬದಿಯ ಗಿಡ-ಗಂಟಿಗಳನ್ನು ಈ ರೀತಿಯಾಗಿ ಬೆಳೆಯಲು ಬಿಟ್ಟ ಗ್ರಾ.ಪಂ.ನ ನಡೆ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.
ಗ್ರಾಮಸ್ಥರ ಮನವಿ: ಆದರ್ಶನಗರ ಅಂಗನವಾಡಿ ಬಳಿ ಹಾಗೂ ಇತರ ಕಡೆಗಳಲ್ಲಿ ರಸ್ತೆಗಳ ಬದಿಯಲ್ಲಿ ಗಿಡ-ಗಂಟಿಗಳು ಬೆಳೆದು ಕಾಡಿನಂತಾಗಿದ್ದು, ಅಂಗನವಾಡಿ ಮಕ್ಕಳಿಗೆ ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ ಉದ್ಭವವಾಗಿದೆ. ಈಗಾಗಲೇ ಹಲವಾರು ಹಾವುಗಳು ಬಂದಿರುತ್ತವೆ. ಹಲವಾರು ಸಮಯದಿಂದ ಈ ರೀತಿ ಇದ್ದು, ಗ್ರಾ.ಪಂ. ಈ ಬಗ್ಗೆ ಯಾವುದೇ ವ್ಯವಸ್ಥೆ ಮಾಡದಿರುವುದು ವಿಪರ್ಯಾಸ. ಆದ್ದರಿಂದ ತಕ್ಷಣವೇ ರಸ್ತೆ ಬದಿಯಲ್ಲಿರುವ ಗಿಡ-ಗಂಟಿಗಳ ತೆರವಿಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾ.ಪಂ.ಗೆ ಗ್ರಾಮಸ್ಥರ ನಿಯೋಗವೊಂದು ಮನವಿ ಮಾಡಿದೆ.
ಮನವಿ ಮಾಡಿದ ನಿಯೋಗದಲ್ಲಿ ಅನಿ ಮಿನೇಜಸ್, ಅಬ್ದುರ್ರಹ್ಮಾನ್, ಖಾದರ್, ಹಮೀದ್ ಪಿ.ಟಿ., ಯಹ್ಯಾ ಉಪಸ್ಥಿತರಿದ್ದರು.