ಪುತ್ತೂರು:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆಸಲ್ಪಡುವ ‘ಸಖಿ ಒನ್ ಸ್ಟಾಪ್ ಸೆಂಟರ್’ನ ಆಡಳಿತಾಧಿಕಾರಿಯಾಗಿ ಬೆಟ್ಟಂಪಾಡಿ ತಲಪಾಡಿಯ ಪ್ರಿಯಾ ರಾಜಮೋಹನ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ದರ್ಬೆ ಬೈಪಾಸ್ ವೃತ್ತದ ಬಳಿಯಿರುವ ಪ್ರಿಯಾ ಮೆಡಿಕಲ್ ಮತ್ತು ಪಾಲಿಕ್ಲಿನಿಕ್ನ ಮ್ಹಾಲಕರಾಗಿರುವ ಬೆಟ್ಟಂಪಾಡಿ ತಲಪಾಡಿ ಚಂದ್ರನ್ ಮಣಿಯಾಣಿಯವರ ಪುತ್ರಿಯಾಗಿರುವ ಪ್ರಿಯಾ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಕ್ಕೂರು ಹಿ.ಪ್ರಾ ಶಾಲೆ, ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ದರ್ಬೆ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಡೆದಿರುತ್ತಾರೆ. ಮಂಗಳೂರು ಮೆರಿಡಿಯನ್ ಕಾಲೇಜಿನಲ್ಲಿ ಎಂಎಸ್ ಡಬ್ಲು ಸೈಕ್ರಿಯಾಸ್ಟಿಕ್ ಪಡೆದಿರುತ್ತಾರೆ. ನಂತರ ಮೂರು ವರ್ಷಗಳ ಕಾಲ ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕೌನ್ಸೆಲಿಂಗ್ ನಡೆಸಿದ್ದರು.
ತನ್ನ ವಿದ್ಯಾರ್ಥಿ ಜೀವನದಲ್ಲಿಯೇ ಪ್ರತಿಭಾವಂತರಾಗಿದ್ದ ಈಕೆ ಕಳೆದ ಮೂರು ವರ್ಷಗಳಿಂದ ಸಖಿ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಂಗಳೂರು ಲೇಡಿಗೋಶನ್ ಆಸ್ಪತ್ರೆಯ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಖಿ ಒನ್ ಸ್ಟಾಪ್ ಸೆಂಟರ್ ನೊಂದ ಮಹಿಳೆಯರು, ಮಕ್ಕಳಿಗೆ ಆಸರೆಯಾಗಿ ಸೇವೆ ನೀಡುತ್ತಿದೆ. ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಲೈಂಗಿಕ ಅಪರಾಧ, ಮಹಿಳೆಯರ ಕಳ್ಳಸಾಗಣೆ, ಮಕ್ಕಳ ಮೇಲಿನ ಅಪರಾಧ, ಮಹಿಳೆಯರು, ಮಕ್ಕಳ ಅಪಹರಣ ಹಾಗೂ ಇನ್ನಿತರ ಸಂಕಷ್ಟಗಳ ಸಮಯಲ್ಲಿ ಮಹಿಳೆಯರ ಸಮಸ್ಯೆ ಪರಿಹರಿಸುವಲ್ಲಿ ಸಖಿ ಕೇಂದ್ರವು ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಆಪ್ತ ಸಮಾಲೋಚನೆ, ಅವರಿಗೆ ಆವಶ್ಯಕವಿರುವ ಕಾನೂನು ನೆರವು, ವೈದ್ಯಕೀಯ ಸಹಾಯ ಸೇರಿದಂತೆ ಎಲ್ಲಾ ರೀತಿಯ ಸಹಕಾರಗಳನ್ನು ನೀಡಲಾಗುತ್ತಿದೆ. ನೊಂದ ಮಹಿಳೆಯರು ನ್ಯಾಯಾಲಯಕ್ಕೆ ಹಾಜರಾಗುವ ಸಂದರ್ಭಗಳು ಎದುರಾದಲ್ಲಿ ಆಕೆಯ ವೈಯಕ್ತಿಕ ರಕ್ಷಣೆಗೆ ಒತ್ತು ನೀಡಿ ಇಲ್ಲಿಂದಲೇ ವಿಡಿಯೋ ಕಾನರೆನ್ಸ್ ಮೂಲಕ ಹಾಜರಾಗುವ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
ಸಂಪನ್ಮೂಲ ವ್ಯಕ್ತಿಯಾಗಿಯೂ ಉಪನ್ಯಾಸ ನೀಡುತ್ತಿರುವ ಪ್ರಿಯಾ ರಾಜಮೋಹನ್ರವರು ಉನ್ನತ ಮಟ್ಟದ ಇಲಾಖಾಧಿಕಾರಿಗಳ ಸಭೆಗಳು ಹಾಗೂ ಕಾಲೇಜುಗಳಲ್ಲಿ ಮಹಿಳಾ ಮತ್ತು ಮಕ್ಕಳ ಸಂರಕ್ಷಣೆಯ ಕುರಿತು ಅರಿವು ಮೂಡಿಸುತ್ತಿದ್ದಾರೆ. ಮಹಿಳಾ ಕಾನೂನು, ಸ್ವಯಂರಕ್ಷಣೆ, ಪೊಕ್ಸೊ ಕಾಯ್ದೆ ಇನ್ನಿತರ ಸೂಕ್ಷ್ಮ ಸಂಗತಿಗಳ ಕುರಿತು ಸಖಿ ಕೇಂದ್ರವು ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವುದು, ಸ್ವ ಸಹಾಯ ಸಂಘಗಳ ಸದಸ್ಯೆಯರಲ್ಲಿಯೂ ಕಾನೂನಿನ ಅರಿವು ಮೂಡಿಸಲಾಗುತ್ತಿದೆ. ತಿಂಗಳಿಗೆ ಸರಾಸರಿ ನಾಲ್ಕೈದು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಪ್ರಿಯಾ ರಾಜ್ಮೋಹನ್ರವರ ಸಹೋದರ ಸುಪ್ರೀತ್ ಕೆ.ಸಿಯವರು ದರ್ಬೆ ಸಂತ ಫಿಲೋಮಿನಾ ಕಾಲೇಜಿನಲ್ಲಿ ಜೀವಶಾಸ ಉಪನ್ಯಾಸಕರಾಗಿ ಹಾಗೂ ಪುತ್ತೂರಿನ ಇನ್ಸ್ಪೈಯರ್ ಸ್ಟಡಿ ಸೆಂಟರ್ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಪತಿ ರಾಜಮೋಹನ್ ಹಾಗೂ ಪುತ್ರ ಪ್ರಸೂನ್ ಆರ್ ರವರೊಂದಿಗೆ ಪ್ರಸ್ತುತ ಇವರು ಮಂಗಳೂರಿನಲ್ಲಿ ವಾಸ್ತವ್ಯವಿದ್ದಾರೆ.