ಕುಂಜಾರು ಮದಗ ಜನಾರ್ದನ ದೇವಸ್ಥಾನದಲ್ಲಿ ದರ್ಶನ ಬಲಿ, ಮನ್ಮಹಾರಥೋತ್ಸವ

0

ಪುತ್ತೂರು:ಪಡ್ನೂರು ಗ್ರಾಮದ ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಜ.9ರಂದು ದೇವರ ದರ್ಶನ ಬಲಿ ಹಾಗೂ ಮನ್ಮಹಾರಥೋತ್ಸವವು ವೈಭವದಿಂದ ನೆರವೇರಿತು.


ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆದ ಜಾತ್ರೋತ್ಸವದಲ್ಲಿ ಜ.8ರಂದು ಸಂಜೆ ಭಜನೆ, ಚೆಂಡೆ ಸೇವೆ, ಮಹಾಪೂಜೆ, ದೇವರ ಬಲಿ ಹೊರಟು ಉತ್ಸವ ಹಾಗೂ ಕಟ್ಟೆಪೂಜೆ ನಡೆಯಿತು.
ಜ.9ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ನವಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಚೆಂಡೆ ಸೇವೆ, ಶ್ರೀ ದೇವರ ಬಲಿ ಹೊರಟು ಉತ್ಸವ ಕಟ್ಟೆಪೂಜೆ, ಶ್ರೀ ಮನ್ಮಹಾರಥೋತ್ಸವ ನಡೆದ ಬಳಿಕ ಕ್ಷೇತ್ರದ ದೈವಗಳ ಭಂಡಾರ ತೆಗೆದು ಹುಲಿಭೂತ, ಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಿತು.


ಸಾಂಸ್ಕೃತಿಕ ಕಾರ್ಯಕ್ರಮಗಳು:
ಜಾತ್ರೋತ್ಸವ ಸಂದರ್ಭದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜ.8ರಂದು ಸಂಜೆ ಸ್ಥಳೀಯ ಗ್ರಾಮಸ್ಥರಿಂದ ವಿವಿಧ ವಿನೋದಾವಳಿಗಳು, ಜ.9ರಂದು ರಾತ್ರಿ ವಿಠಲ್ ನಾಯಕ್ ಕಲ್ಲಡ್ಕ ಇವರಿಂದ ‘ಗೀತಾ-ಸಾಹಿತ್ಯ-ಸಂಭ್ರಮ’ ನಡೆಯಿತು.


ಆಕರ್ಷಕ ಪುಷ್ಪಾಲಂಕಾರ:
ದಾನಿಗಳು, ಊರವರ ಸಹಕಾರದೊಂದಿಗೆ ಜಾತ್ರೋತ್ಸವದಲ್ಲಿ ವಿಶೇಷವಾಗಿ ಪುಷ್ಪಾಲಂಕಾರ ಸೇವೆ ನಡೆದಿದ್ದು ದೇವಸ್ಥಾನದ ಹೊರಭಾಗ, ಒಳಭಾಗ, ತೀರ್ಥ ಮಂಟಪ ಹಾಗೂ ದೇವರ ಗರ್ಭಗುಡಿಯ ಸುತ್ತ ಆಕರ್ಷಕ ಶೈಲಿಯಲ್ಲಿ ಹೂವಿನ ಅಲಂಕಾರಗಳಿಂದ ದೇವಸ್ಥಾನವು ಕಂಗೋಳಿಸುತ್ತಿತ್ತು.
ಎರಡು ದಿನಗಳ ಕಾಲ ನಡೆದ ಸಂಭ್ರಮ ಜಾತ್ರೋತ್ಸವದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು ವಿವಿಧ ರಾಜಕೀಯ, ಧಾರ್ಮಿಕ, ಸಾಮಾಜಿಕ ಸಂಘ-ಸಂಸ್ಥೆಗಳ ಮುಖಂಡರುಗಳು ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಜಾತ್ರೋತ್ಸವದಲ್ಲಿ ಪಾಲ್ಗೊಂಡು ಪುಣೀತರಾದರು.


ಪಡ್ನೂರು ಗೌಡ ಸಮಾಜದಿಂದ ಮಜ್ಜಿಗೆ ವಿತರಣೆ:
ಜಾತ್ರೋತ್ಸವದಲ್ಲಿ ಪ್ರತಿವರ್ಷ ಗೌಡ ಸಮಾಜ ಪಡ್ನೂರು ಗ್ರಾಮ ಸಮಿತಿಯಿಂದ ಮಜ್ಜಿಗೆ ವಿತರಿಸಲಾಗುತ್ತಿದ್ದು 35ನೇ ವರ್ಷದ ಮಜ್ಜಿಗೆ ವಿತರಣೆ ನೆರವೇರಿತು. ಗೌಡ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here