ಹೊಸಗದ್ದೆ ಶಾಲಾ ವಾರ್ಷಿಕೋತ್ಸವ, ರಂಗಮಂದಿರ ಲೋಕಾರ್ಪಣೆ

0

ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರು `ಅಭಿಮಾನ’ ಇಡಬೇಕು- ಸಂಜೀವ ಭಂಡಾರಿ

ನೆಲ್ಯಾಡಿ: ಬಜತ್ತೂರು ಗ್ರಾಮದ ಹೊಸಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ `ಪ್ರತಿಭಾ ಸಂಗಮ’ ಹಾಗೂ ರಂಗಮಂದಿರ ಲೋಕಾರ್ಪಣೆ ಕಾರ್ಯಕ್ರಮ ಜ.9 ರಂದು ನಡೆಯಿತು.


ರಂಗ ಮಂದಿರವನ್ನು ದಾನಿ ಸಂಜೀವ ಭಂಡಾರಿ ಅವರು ಲೋಕಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಶಾಲೆ ಅಂದರೆ ದೇವಮಂದಿರ. ಸರ್ಕಾರಿ ಶಾಲೆಗಳ ಮೇಲೆ ಪೋಷಕರು ಅಭಿಮಾನ ಇಡಬೇಕು. ತಮ್ಮಿಂದ ಸಾಧ್ಯವಾದಷ್ಟು ಕೊಡುಗೆಗಳನ್ನು ಶಾಲೆಗಳಿಗೆ ನೀಡಬೇಕು. ಹಾಗಾದಾಗ ಮಾತ್ರ ಶಾಲೆಯಲ್ಲಿ ಸೌಲಭ್ಯಗಳು ಸಿಗುವಂತಾಗುತ್ತದೆ ಎಂದರು.

ಟೀಕೆಗಳಿಗೆ ಕಿವಿಕೊಡಬಾರದು:
ವಾರ್ಷಿಕೋತ್ಸವ ‘ಪ್ರತಿಭಾ ಸಂಗಮ’ ಉದ್ಘಾಟಿಸಿದ ಬಜತ್ತೂರು ಗ್ರಾ.ಪಂ.ಅಧ್ಯಕ್ಷ ಗಂಗಾಧರ್ ನೆಕ್ಕರಾಜೆ ಅವರು ಮಾತನಾಡಿ, ಶಾಲೆಗಳ ಅಭಿವೃದ್ಧಿಗೆ ಪ್ರಯತ್ನ ಪಡುವ ಮಂದಿ ಕೆಟ್ಟ ಟೀಕೆಗಳಿಗೆ ಕಿವಿಕೊಡಬಾರದು. ಇಂತಹ ಟೀಕೆಗಳಿಗೆ ನೋವು ಪಟ್ಟುಕೊಂಡು ಹಿಂದೆ ಸರಿದರೆ ಅಭಿವೃದ್ಧಿಗೆ ಹಿನ್ನಡೆ ಉಂಟಾಗುತ್ತದೆ. ದಾನಿಗಳಿಂದ ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಶಾಲೆಗಳು ಸದುಪಯೋಗ ಪಡಿಸಿಕೊಳ್ಳಬೇಕು. ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ತುಂಬಾ ಮುಖ್ಯವಾಗುತ್ತದೆ. ಇಂತಹ ಪೋಷಕ ದಾನಿಗಳಿಂದ ನೆರವು ಪಡೆದುಕೊಂಡ ನಂತರ ಅವರನ್ನು ಮರೆಯಬಾರದು. ಶಾಲೆಯ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಪೋಷಕರ ಭಾಗವಹಿಸುವಿಕೆಗೆ ಪ್ರೇರಣೆ ನೀಡುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಹೆಚ್ಚು ಜಾಗೃತವಾಗಬೇಕು. ಇದರಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಜತೆಗೆ ಮಕ್ಕಳ ಸಂಖ್ಯೆಯೂ ಹೆಚ್ಚುವಂತಾಗುತ್ತದೆ ಎಂದರು.

ಪೋಷಕರ ಮನೋಭಾವನೆ ಬದಲಾವಣೆಯಾಗಬೇಕು:
ಮುಖ್ಯ ಅತಿಥಿಯಾಗಿದ್ದ ಸಿಆರ್‌ಪಿ, ಬಜತ್ತೂರು ಹಿರಿಯ ಪ್ರಾಥಮಿಕ ಶಾಲಾ ಮುಖ್ಯಗುರು ಮಂಜುನಾಥ್ ಕೆ.ವಿ ಅವರು ಮಾತನಾಡಿ, ಸರ್ಕಾರಿ ಶಾಲೆಗಳ ಮೂಲಭೂತ ಅಭಿವೃದ್ಧಿಗೆ ಪೋಷಕರು ಹಾಗೂ ಸ್ಥಳೀಯ ಜನತೆ ಒಟ್ಟಾಗುವುದು ಅತೀ ಅಗತ್ಯವಾಗಿದೆ. ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳ ಮೂಲಕ ಕಲಿಸುವ ಚಿಂತನೆ ಪೋಷಕರಲ್ಲಿ ಹೆಚ್ಚಾಗಬೇಕು. ಪ್ರಸ್ತುತ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ. ಆದರೆ ನಮ್ಮ ಪೋಷಕರ ಮನೋಭಾವನೆಯಲ್ಲಿ ಬದಲಾವಣೆಯಾಗಬೇಕಾಗಿದೆ ಎಂದರು.

ಸಾಧನೆಯ ಹೊಸಗದ್ದೆ ಶಾಲೆ:
ಕಡಬ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಾಂತಾರಾಮ ಓಡ್ಲ ಅವರು ಮಾತನಾಡಿ, ಪೋಷಕರನ್ನು ಸಮರ್ಪಕ ರೀತಿಯಲ್ಲಿ ತಮ್ಮೊಂದಿಗೆ ಸೇರಿಸಿಕೊಳ್ಳುವುದೇ ಶಾಲಾಭಿವೃದ್ಧಿ ಸಮಿತಿಯ ಕೆಲಸ. ಈ ನಿಟ್ಟಿನಲ್ಲಿ ಹೊಸಗದ್ದೆ ಶಾಲೆ ಸಂಪೂರ್ಣ ಯಶಸ್ವಿಯಾಗಿದೆ. ಇಲ್ಲಿ ಕಳೆದ 2 ವರ್ಷಗಳಿಂದ ಸುಮಾರು 7 ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದೆ. ಇದಕ್ಕೆ ಶಿಕ್ಷಕ ವೃಂದ ಹಾಗೂ ಇಲ್ಲಿನ ಶಾಲಾಭಿವೃದ್ಧಿ ಸಮಿತಿ ಆಸಕ್ತಿಯುತವಾಗಿ ಕೆಲಸ ಮಾಡುತ್ತಿರುವುದೇ ಕಾರಣವಾಗಿದೆ ಎಂದರು.

ಇಲಾಖೆ, ಶಿಕ್ಷಕರು, ಪೋಷಕರು ಒಂದದಾಗ ಅಭಿವೃದ್ಧಿ:
ಶಿಕ್ಷಣಪ್ರೇಮಿ ಹಾಗೂ ದಾನಿ ಜಗದೀಶ್ ರಾವ್ ಮಣಿಕ್ಕಳ ಅವರು ಮಾತನಾಡಿ, ಶಿಕ್ಷಣ ಇಲಾಖೆ, ಶಿಕ್ಷಕರು ಹಾಗೂ ಪೋಷಕರು ಒಂದಾಗಿ ಸೇರಿದಾಗ ಮಾತ್ರ ಯಾವುದೇ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಲು ಸಾಧ್ಯ. ಈ ಮೂವರನ್ನೂ ಒಟ್ಟು ಸೇರಿಸುವ ಕೆಲಸ ಎಸ್‌ಡಿಎಂಸಿ ಮೂಲಕ ನಡೆಯಬೇಕು. ಹೊಸಗದ್ದೆ ಶಾಲೆಯ ಎಸ್‌ಡಿಎಂಸಿ ಕಳೆದ ಎರಡು ವರ್ಷಗಳಿಂದ ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸಾಧನೆಯಲ್ಲಿ ಹಿಂದೆ ಬಿದ್ದಿಲ್ಲ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಉಮೇಶ್ ಓಮಂದೂರು ಅವರು ಮಾತನಾಡಿ, ನಮ್ಮ ಶಾಲೆಯಲ್ಲಿ ಹಲವು ಮೂಲಭೂತ ಕೊರತೆಗಳಿವೆ. ಹಾಗಿದ್ದರೂ ಸಾಧನೆಯಲ್ಲಿ ನಾವು ಹಿಂದೆ ಬಿದ್ದಿಲ್ಲ. ಇಲ್ಲಿನ ಶಿಕ್ಷಕವರ್ಗದ ಅಪಾರ ಪರಿಶ್ರಮ, ಪೋಷಕರ ಬೆಂಬಲ, ಶಿಕ್ಷಣ ಇಲಾಖೆ ಹಾಗೂ ಗ್ರಾಮ ಪಂಚಾಯತ್ ನೆರವು ನಮ್ಮ ಸಾಧನೆಗೆ ಪೂರಕವಾಗಿದೆ. ಸರ್ಕಾರದಿಂದ ಇನ್ನಷ್ಟು ಸೌಲಭ್ಯಗಳನ್ನು ನಿರೀಕ್ಷೆ ಮಾಡುವುದರ ಜತೆಗೆ ದಾನಿಗಳ ನೆರವಿನೊಂದಿಗೆ ಶಾಲಾಭಿವೃದ್ಧಿ ನಡೆಸಲು ಬದ್ಧರಾಗಿದ್ದೇವೆ ಎಂದರು.

ಸನ್ಮಾನ:
ಶಾಲಾ ರಂಗಮಂದಿರ ನಿರ್ಮಾಣಕ್ಕೆ ಸಂಜೀವ ಭಂಡಾರಿ ಅವರು ತಮ್ಮ ಪತ್ನಿ ದಿ.ಲೀಲಾವತಿ ಅರಿತ್ತೋಡಿ ಅವರ ಸ್ಮರಣಾರ್ಥವಾಗಿ ರೂ.1.35 ಲಕ್ಷ ದಾನವಾಗಿ ನೀಡಿದ್ದು, ಸಂಜೀವ ಭಂಡಾರಿ ಅವರನ್ನು ಕಾರ್ಯಕ್ರಮದಲ್ಲಿ ಜಗದೀಶ್ ರಾವ್ ಮಣಿಕ್ಕಳ ಅವರು ಸನ್ಮಾನಿಸಿದರು. ಸಂಜೀವ ಭಂಡಾರಿ ಅವರ ಪುತ್ರ ರಾಧೇಶ್ ಭಂಡಾರಿ ಉಪಸ್ಥಿತರಿದ್ದರು. ಅಕ್ಷರ ದಾಸೋಹ ಸಿಬಂದಿಗಳಾದ ಗೀತಾ ಮತ್ತು ಗೋಪಿಕಾ ಅವರಿಗೆ ನೆನಪಿನ ಕಾಣಿಕೆ ಕೊಟ್ಟು ಗೌರವಿಸಲಾಯಿತು.

ವೇದಿಕೆಯಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ವಸಂತಲಕ್ಷ್ಮಿ ಉಪಸ್ಥಿತರಿದ್ದರು. ಎಸ್‌ಡಿಎಂಸಿ ಸದಸ್ಯರಾದ ಚಿತ್ರಾವತಿ, ರಮ್ಯಾ, ವೀಣಾ, ರುಕ್ಮಯ ಗೌಡ ಓಮಂದೂರು, ಯಶೋಧರ ಗೌಡ ಬೈರುಮಾರು, ಸಾವಿತ್ರಿ ಹಾಗೂ ವೇದಾವತಿ ಅತಿಥಿಗಳನ್ನು ಹೂ ಕೊಟ್ಟು ಸ್ವಾಗತಿಸಿದರು. ಶಾಲಾ ಮುಖ್ಯಗುರು ವಿದ್ಯಾ ಕೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪತ್ರಕರ್ತ ಮೇಘಾ ಪಾಲೆತ್ತಾಡಿ ವಂದಿಸಿದರು. ಶಿಕ್ಷಕಿ ಮಾಲತಿ ಓಡ್ಲ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಚಿತ್ರಾವತಿ ಬಾರಿಂಜ, ಪ್ರಭಾ ಹಾಗೂ ಪವಿತ್ರ ವಿವಿಧ ಕಾರ್ಯಕ್ರಮಗಳನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮನರಂಜಿಸಿದ ಖಡಕ್ ಚಾಯ್..
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹೊಸಗದ್ದೆ ಶಾಲಾ ಮಕ್ಕಳಿಂದ ನಡೆದ ಖಡಕ್ ಚಾಯ್ ತುಳುನಾಟಕ ಪ್ರೇಕ್ಷಕರನ್ನು ಮನರಂಜಿಸಿತು. ಮೋಸ ಹೋಗುವ ಮಂದಿಯನ್ನು ರಕ್ಷಿಸುವ ಕಥಾಹಂದರ ಹೊಂದಿರುವ ಈ ನಾಟಕವನ್ನು ಜನನಿ, ಪ್ರತೀಕ್‌ರಾಜ್, ಗಹನ, ಪವನ್, ಸುವೈದ್, ಸೋನಿತ್, ಯಾಸೀನ್, ತಶ್ವಿನ್, ಜಯಪ್ರೀತ್, ಕೌಶಿಕಾ, ದೃತಿ, ಶ್ರೇಯಸ್, ಅನ್ಸಾರ್, ಯಾಹ್ಯಾ ಅಭಿನಯಿಸಿದ್ದರು. ಮಕ್ಕಳಿಂದ ನಡೆದ ಜಾನಪದ ಹಾಗೂ ಆಧುನಿಕ ಶೈಲಿಯ ನೃತ್ಯಗಳು ಪ್ರೇಕ್ಷಕ ವರ್ಗದ ಶ್ಲಾಘನೆಗೆ ಪಾತ್ರವಾಯಿತು.

LEAVE A REPLY

Please enter your comment!
Please enter your name here