ಬೆಟ್ಟಂಪಾಡಿ: ಬೆಟ್ಟಂಪಾಡಿಯ ನವೋದಯ ಪ್ರೌಢಶಾಲಾ ಮಕ್ಕಳ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭವು ಇತ್ತೀಚೆಗೆ ನಡೆಯಿತು. ಬಳಿಕ ಶಾಲಾಮಕ್ಕಳಿಂದ ವಿವಿಧ ಸಾಂಸ್ಕೃತಿಕ,ಮತ್ತು ಯಕ್ಷಗಾನ ಕಾರ್ಯಕ್ರಮಗಳೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.
ಶಾಲಾ ಧ್ವಜಾರೋಹಣವನ್ನು ನೆರವೇರಿಸಿದ ಶಾಲೆಯ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾಗಿರುವ ಶಾಲಾ ಹಿರಿಯ ವಿದ್ಯಾರ್ಥಿ ಉಮ್ಮರ್ ಫಾರೂಕ್ ಇವರು ಶಾಲಾವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಬಳಿಕ ಆರಂಭಗೊಂಡ ಶಾಲಾ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ 1967ನೇ ಸಾಲಿನ ಹಿರಿಯ ವಿದ್ಯಾರ್ಥಿಯಾಗಿದ್ದು ಪ್ರಸ್ತುತ ,ಬೆಂಗಳೂರಿನಲ್ಲಿರುವ ಕರ್ನಾಟಕ ಹೈಕೋರ್ಟ್ ನ ಹಿರಿಯ ವಕೀಲರಾಗಿರುವ ಬಿ. ಆರ್ .ಶ್ರೀನಿವಾಸ ಗೌಡ ಸಭಾಧ್ಯಕ್ಷತೆ ವಹಿಸಿದ್ದರು.
ಹಿರಿಯ ವಿದ್ಯಾರ್ಥಿನಿ ಶ್ರೀಮತಿ ಚಂದ್ರಾವತಿ ಕೈಕಾರ ಇವರು ತನ್ನ ಶಾಲಾ ದಿನಗಳ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡರು.
ನವೋದಯ ಶಾಲೆಯ ಹಿರಿಯ ವಿದ್ಯಾರ್ಥಿ ಬಾಲಕೃಷ್ಣ ಇರ್ದೆ ನವೋದಯ ಹಸ್ತಪ್ರತಿ ಯನ್ನು ಬಿಡುಗಡೆ ಗೊಳಿಸಿ ಮಾತನಾಡುತ್ತಾ ತನ್ನ ಬಾಲ್ಯದ ಸುಂದರ ನೆನಪಿನ ಶಾಲಾದಿನಗಳನ್ನು ಮತ್ತೊಮ್ಮೆ ನೆನಪಿಸಿಕೊಂಡರು. ಶಾಲೆಯ ಅಭಿವೃದ್ಧಿಗೆ ಶಾಲಾ ಶೈಕ್ಷಣಿಕ ನಿಧಿಸಂಗ್ರಹ ಅಭಿಯಾನಕ್ಕೆ ಉದಾರವಾಗಿ 25,000 ರೂ. ದೇಣಿಗೆ ನೀಡಿದರು. ಶಾಲಾ ಸಂಚಾಲಕ ಡಾ. ಶ್ರೀಕೃಷ್ಣ ಭಟ್ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಶಾಲಾ ಮುಖ್ಯಗುರು ಶ್ರೀಮತಿ ಪುಷ್ಪಾವತಿ .ಎಸ್ ಇವರು ಶಾಲಾ ವಾರ್ಷಿಕ ವರದಿಯನ್ನು ಮಂಡಿಸಿದರು. ಶಿಕ್ಷಕಿ ಸುಮಂಗಲಾ ಕೆ. ಗಣ್ಯರ ಸಂದೇಶವನ್ನು ವಾಚಿಸಿದರು.
ನವೋದಯ ವಿದ್ಯಾಸಮಿತಿಯ ಅಧ್ಯಕ್ಷ ಬಾಲಕೃಷ್ಣ ಭಟ್ ಘಾಟೆ ಮತ್ತು ಕಾರ್ಯದರ್ಶಿ ಸಹಕಾರ ವನ ನಾರಾಯಣ ಭಟ್ ಉಪಸ್ಥಿತರಿದ್ದರು.
ಉತ್ತಮಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳ ವಿವರವನ್ನು ಶಾಲಾ ಹಿರಿಯ ಶಿಕ್ಷಕಿ ಪ್ರವೀಣ ಟೀಚರ್ ವಾಚಿಸಿದರು. ಇದೇ ವೇಳೆ ಶಿಕ್ಷಕಿ ಪ್ರವೀಣ ರವರು ನವೋದಯ ಶಾಲಾ ಜಾಗದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯ ಆವರಣ ಗೋಡೆಯ ಪುನರ್ ನಿರ್ಮಾಣಕ್ಕಾಗಿ 40,000 ರೂ. ಗಳನ್ನು ಶಾಲೆಯ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು. ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿಶ್ರಾಂತ ಪ್ರೊಫೆಸರ್ ಉದಯಚಂದ್ರ ರವರು ನೀಡಿರುವ ಸುಮಾರು ರೂ.18,000 ಮೊತ್ತದ ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ಹಸ್ತಾಂತರಿಸಲಾಯಿತು.
ಕಳೆದ ಶೈಕ್ಷಣಿಕ ವರ್ಷದ SSLC ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಲಾಯಿತು. ಶಿಕ್ಷಕರಾದ ರಾಧಾಕೃಷ್ಣ ಕೋಡಿ ನಿರೂಪಿಸಿದರು.
ಬಳಿಕ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಹಲವು ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಹಿಷಮರ್ದಿನಿ ಎಂಬ ಯಕ್ಷಗಾನ ಕಥಾಭಾಗವೂ ಮೂಡಿಬಂತು.