ಬಂಟ್ವಾಳ: ಮನೆಗೆ ನುಗ್ಗಿದ 4 ಮುಸುಕುದಾರಿಗಳು – ನಗದು ಚಿನ್ನಾಭರಣ ದೋಚಿ ಪರಾರಿ – ಸ್ಥಳಕ್ಕೆ ಪೊಲೀಸರ ಭೇಟಿ, ತನಿಖೆ

0

ಪುತ್ತೂರು(ಬಂಟ್ವಾಳ): ಬಂಟ್ವಾಳದ ವಗ್ಗ ಅಂಚಿಕಟ್ಟೆಯ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್‌ ಬಳಿಯ ನಿವಾಸಿ ಫ್ಲೋರಿನಾ ಪಿಂಟೋ ಎಂಬವರ ಮನೆಗೆ ನುಗ್ಗಿದ 4 ಮಂದಿ ಮುಸುಕುದಾರಿಗಳು ಚೂರಿ ಹಿಡಿದು ಮನೆಯವರನ್ನು ಬೆದರಿಸಿ ನಗದು ಹಣ ಮತ್ತು ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಇಂದು ಬೆಳಿಗ್ಗೆ 6.15ರ ವೇಳೆಗೆ ನಡೆದಿದೆ.

ಮನೆಯಲ್ಲಿ ತಾಯಿ ಫ್ಲೋರಿನಾ ಪಿಂಟೋ ಮತ್ತು ಮಗಳು ಮರಿನಾ ಪಿಂಟೋ ಮಾತ್ರವೇ ಇದ್ದು ಹಿಂದಿನ ದಿನ ಅಡಿಕೆ ಸುಲಿಯುವವರಿಗೆ ಬೆಳಿಗ್ಗೆ ಬೇಗ ಬರುವಂತೆ ತಿಳಿಸಿದ್ದಾರೆ. ಬೆಳಿಗ್ಗೆ ಸುಮಾರು 6 ಗಂಟೆ ವೇಳೆಗೆ ಬಚ್ಚಲು ಮನೆಯಲ್ಲಿ ನೀರು ಬಿಸಿ ಮಾಡಲು ತೆರಳಿದ್ದ ವೇಳೆ ಕಾಲಿಂಗ್‌ ಬೆಲ್ ಶಬ್ಧವಾಗಿದ್ದು, ಮಗಳು ಮರಿನಾ ಪಿಂಟೋ ಅಡಿಕೆ ಸುಲಿಯುವವರು ಬಂದಿರಬೇಕೆಂದು ಭಾವಿಸಿ ಬಾಗಿಲು ತೆರೆದಿದ್ದಾರೆ. ಈ ವೇಳೆ ಕೈಯಲ್ಲಿ ಚೂರಿ ಮತ್ತು ದೊಣ್ಣೆ ಹಿಡಿದು ನಿಂತಿದ್ದ ನಾಲ್ಕು ಮಂದಿ ಮುಸುಕುದಾರಿಗಳು ಒಮ್ಮೆಲೆ ಮನೆಯೊಳಗೆ ಪ್ರವೇಶಿಸಿ ಕಪಾಟಿನ ಕೀಲಿಕೈ ಕೊಡುವಂತೆ ಮರಿನಾಳಿಗೆ ಬೆದರಿಸಿದ್ದಾರೆ. ಈ ವೇಳೆ ಮರಿನಾ ಮತ್ತು ಮುಸುಕುದಾರಿಗಳ ನಡುವೆ ತಿಕ್ಕಾಟ ನಡೆದಿದ್ದು, ಮರಿನಾ ಕೈಗೆ ಗಾಯವಾಗಿದೆ. ಮುಸುಕುದಾರಿಗಳು ಜೀವಬೆದರಿಕೆ ಒಡ್ಡಿದಾಗ ಜೀವಕ್ಕೆ ಅಪಾಯವಿದೆ ಎಂದರಿತ ಮರಿನಾ ಕೊನೆಗೂ ಮುಸುಕುದಾರಿಗಳಿಗೆ ಕೀಲಿಕೈ ಕೊಟ್ಟಿದ್ದಾಳೆ. ಕಪಾಟು ತೆರೆದ ಮುಸುಕುದಾರಿಗಳು 30 ಸಾವಿರ ನಗದು ಸೇರಿದಂತೆ ಚಿನ್ನಾಭರಣ ಮತ್ತು ಮೊಬೈಲ್ ಗಳನ್ನು ದೋಚಿ ಸ್ಥಳದಿಂದ ಪರಾರಿಯಾಗಿದ್ದಾರೆ. ಮನೆಯ ಸಮೀಪದ ಸ್ಥಳೀಯ ವ್ಯಕ್ತಿ, ಮಂಗಳೂರಿನ ವೆಲೆನ್ಸಿಯಾದಲ್ಲಿ ವಾಸವಿರುವ ಫ್ಲೋರಿನಾ ಪಿಂಟೋ ಅವರ ಪುತ್ರ ಹಿರಿಯ ಛಾಯಾಗ್ರಾಹಕ ಆಸ್ಟಿನ್‌ ಪಿಂಟೋ ಅವರಿಗೆ ಮಾಹಿತಿ ನೀಡಿದ್ದಾರೆ.


ಸ್ಥಳೀಯರ ಮಾಹಿತಿಯಂತೆ ಪೊಲೀಸರಿಗೆ ದೂರು ನೀಡಲಾಗಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ ಬಿ ರಿಷ್ಯಂತ್‌, ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸ್‌ ಇನ್ಸ್ಪೆಕ್ಟರ್‌ ಶಿವಕುಮಾರ್‌, ಸಬ್‌ ಇನ್ಸ್ಪೆಕ್ಟರ್‌ ಹರೀಶ್‌, ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು, ಪೊಲೀಸರ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here