ಪುತ್ತೂರು ಕ್ಷೇತ್ರದ ಅಭಿವೃದ್ದಿಯನ್ನು ಕಂಡು ಬಿಜೆಪಿಗರಿಗೆ ತಲೆ ತಿರುಗುತ್ತಿದೆ: ಎಂ.ಎಸ್ ಮಹಮ್ಮದ್
ಪುತ್ತೂರು: ಶಾಸಕರಾಗಿ ಕಳೆದ ಏಳು ತಿಂಗಳಲ್ಲಿ ಅಶೋಕ್ ಕುಮಾರ್ ರೈಯವರು ಮಾಡಿರುವ ಅಭಿವೃದ್ದಿ ಕೆಲಸಗಳನ್ನು ಕಂಡು ಬಿಜೆಪಿಗರಿಗೆ ತಲೆತಿರುಗಿದಂತಾಗಿದ್ದು, ಅಭಿವೃದ್ದಿಯನ್ನು ಕಂಡು ಸಹಿಸಲಾಗದ ಬಿಜೆಪಿಯವರು ಶಾಸಕರು ಮಾಡಿರುವ ಕೆಲಸವನ್ನು ನಾವು ಮಾಡಿದ್ದು ಎಂದು ಹೇಳುತ್ತಿದ್ದು, ಇದು ನಾಚಿಕೆ ಕೇಡಿನ ಸಂಗತಿಯಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್ ಹೇಳಿದರು. ಅವರು ಬಲ್ನಾಡು ಗ್ರಾಮದ ಬುಳೇರಿಕಟ್ಟೆ-ಸಾಜ-ಕುದ್ದುಪದವು ಲೋಕೋಪಯೋಗಿ ರಸ್ತೆಗೆ 1.80 ಕೋಟಿ ರೂ. ವೆಚ್ಚದಲ್ಲಿ ಡಾಮರೀಕರಣಕ್ಕೆ ಶಾಸಕರು ಅನುದಾನ ಬಿಡುಗಡೆ ಮಾಡಿದ್ದು ಇದರ ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಯ ವೇಳೆ ವೋಟಿನ ಆಸೆಯಿಂದ ಸಿಕ್ಕಸಿಕ್ಕಲ್ಲೆಲ್ಲಾ ಮಾಜಿ ಶಾಸಕರು ಅನುದಾನ ಇಲ್ಲದೇ ಇದ್ದರೂ ಗುದ್ದಲಿಪೂಜೆ ಮಾಡಿ ಹೋಗಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪಕ್ಷಾತೀತವಾಗಿ ಕೆಲಸ ಮಾಡುತ್ತಿರುವ ಶಾಸಕರು ಅನುದಾನವನ್ನು ತಂದು ಅದೇ ರಸ್ತೆಯನ್ನು ಅಭಿವೃದ್ದಿ ಮಾಡುತ್ತಿದ್ದು ಈಗ ಬರುತ್ತಿರುವ ಅನುದಾನ ಸಿದ್ದರಾಮಯ್ಯ ಸರಕಾರದ ಅನುದಾನವಾಗಿದೆ ಎಂಬುದನ್ನು ಬಿಜೆಪಿಗರು ಅರಿತುಕೊಳ್ಳಬೇಕು. ಅಶೋಕ್ ರೈಯವರು ಮಾಡಿದ ಸಾಧನೆಯನ್ನು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ, ಶಾಸಕರಾಗಿದ್ದ ವೇಳೆ ಅಭಿವೃದ್ದಿ ಕೆಲಸ ಮಾಡದೆ ಜಾತಿ, ಧರ್ಮದ ಹೆಸರಿನಲ್ಲಿ ದೊಂಬರಾಟ ನಡೆಸಿದ್ದ ಬಿಜೆಪಿಗರಿಗೆ ಅಭಿವೃದ್ದಿ ಏನು ಎಂಬುದನ್ನು ಪುತ್ತೂರಿನ ಶಾಸಕರು ತೋರಿಸಿಕೊಟ್ಟಿದ್ದಾರೆ, ರಾಜಕೀಯ ಬಿಟ್ಟು ಶಾಸಕರಿಗೆ ಬಿಜೆಪಿ ಬೆಂಬಲ ನೀಡಬೇಕು ಎಂದು ಎಂ.ಎಸ್ ಆಗ್ರಹಿಸಿದರು.
ಎಚ್ಚರವಹಿಸಿ ಶಾಸಕರ ಸೂಚನೆ
ಮಾಜಿಗಳು ಹಲವು ಕಡೆ ತೆಂಗಿನಕಾಯಿ ಒಡೆದು ಹೋಗಿದ್ದಾರೆ, ತೆಂಗಿನಕಾಯಿ ಒಡೆದದ್ದು ಮಾತ್ರ ಆದರೆ ಅನುದಾನದ ಪ್ರಸ್ತಾವನೆಯೇ ಹೋಗಿರಲಿಲ್ಲ, ರಸ್ತೆಗೆ ಅನುದಾನ ನೀಡಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವಾಗಿದೆ. ನಾವು ತೆಂಗಿನಕಾಯಿ ಒಡೆದದ್ದು ಎಂದು ಹೇಳಿ ಕದ್ದುಮುಚ್ಚಿ ಬಿಜೆಪಿಯ ಮಾಜಿ ಶಾಸಕರು ರಸ್ತೆಗಳ ಉದ್ಘಾಟನೆಯನ್ನೂ ಮಾಡಿಯಾರು. ಈ ಬಗ್ಗೆ ಸಾರ್ವಜನಿಕರು ಎಚ್ಚರವಾಗಿರಬೇಕು ಎಂದು ಶಾಸಕ ಅಶೋಕ್ ರೈ ಹೇಳಿದರು.
ಈ ರಸ್ತೆಯನ್ನು ಅಭಿವೃದ್ದಿ ಮಾಡಬೇಕು ಎಂಬ ಉದ್ದೇಶ ಅವರಿಗೆ ಇರುತ್ತಿದ್ದರೆ 5 ವರ್ಷ ಶಾಸಕರಾಗಿದ್ದಾಗ ಯಾಕೆ ಮಾಡಲಿಲ್ಲ? ಅನುದಾನ ಯಾಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿರುವ ಶಾಸಕರು ವೋಟಿನ ಆಸೆಗಾಗಿ ತೆಂಗಿನಕಾಯಿ ಒಡೆದು ಹೋಗಿದ್ದು ಮಾತ್ರ ಆದರೆ ಅನುದಾನ ಕೊಟ್ಟದ್ದು ಸಿದ್ದರಾಮಯ್ಯ ಸರಕಾರವಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಭರಪೂರ ಅಭಿವೃದ್ದಿ ಕೆಲಸಗಳು ನಡೆಯಲಿದ್ದು ಹಲವರಿಗೆ ತಲೆ ತಿರುಗಬಹುದು ಎಂದು ಲೇವಡಿ ಮಾಡಿದರು. ಇದೇ ಸಂದರ್ಭದಲ್ಲಿ ಸಾರ್ಯ ಕೋಡಿಯಡ್ಕ ಪ.ಜಾತಿ ಕಾಲನಿ ರಸ್ತೆಗೆ 10 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಅದರ ಗುದ್ದಲಿಪೂಜೆಯನ್ನು ಶಾಸಕರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಬಲ್ನಾಡು ಕಾಂಗ್ರೆಸ್ ವಲಯಾಧ್ಯಕ್ಷ ಚಂದಪ್ಪ ಪೂಜಾರಿ, ಬಲ್ನಾಡು ಬೂತ್ ಅಧ್ಯಕ್ಷ ನವೀನ್ ಕರ್ಕೆರ, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್, ಡಿಸಿಸಿ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ಬುಳೇರಿಕಟ್ಟೆ ಪ.ಪೂ ಕಾರ್ಯಾಧ್ಯಕ್ಷ ಪ್ರಕಾಶ್ ಚಂದ್ರ ಆಳ್ವ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾರ್ಯದರ್ಶಿ ಮಹಮ್ಮದ್ ಶರೀಫ್ ರೋಯಲ್, ಬೂತ್ ಅಧ್ಯಕ್ಷ ಕೆ.ಬಿ ಆಶ್ರಫ್, ಗ್ರಾ.ಪಂ ಮಾಜಿ ಸದಸ್ಯ ಇದ್ದಿಕುಂಞಿ, ಜಗನ್ನಾಥ ರೈ, ಅಶೋಕ್ ಪಣೆತ್ತಡ್ಕ, ಇಲ್ಯಾಸ್ ಮಲ್ತಿಕಲ್ಲು, ಸಂಜೀವ ಪೂಜಾರಿ, ಜತ್ತಪ್ಪ ಪೂಜಾರಿ, ಕುಂಞಿ ಸಾರ್ಯ, ಉಮೇಶ್ ಪಣೆತ್ತಡ್ಕ, ಚನಿಯಪ್ಪ ಕೂಟೇಲು, ಹಮೀದ್ ಸಾಜ, ಅಬ್ದುಲ್ ರಹಿಮಾನ್ ಸಾರ್ಯ, ಸಂಜೀವ ಸಾರ್ಯ ಮೊದಲಾದವರು ಉಪಸ್ಥಿತರಿದ್ದರು.